ಒಂದು ಸಣ್ಣ ಊರು. ಅಲ್ಲಿಗೆ ಕುಡಿಯುವ ನೀರು ಹರಿದು ಬರುತ್ತಿದ್ದದ್ದು ಹತ್ತಿರದ ಬೆಟ್ಟದ ಬುಡದಲ್ಲಿದ್ದ ಸುರಂಗದಿಂದ. ಇಡೀ ವರ್ಷ ಶುದ್ಧ ಸಲಿಲದ ಊಟೆ ಅಲ್ಲಿ ಉಕ್ಕುತ್ತಿತ್ತು. ಅಲ್ಲೊಂದು ಕೊಳದಲ್ಲಿ ಶೇಖರವಾಗುತ್ತಿತ್ತು. ಅಲ್ಲಿಂದ ಸಣ್ಣ ಕಾಲುವೆಯ ಮೂಲಕ ಊರಿನತ್ತ ಹರಿಯುತ್ತಿತ್ತು.
ಬೆಟ್ಟದ ಬುಡದಲ್ಲಿ ಒಬ್ಬ ವೃದ್ಧ ಗುಡಿಸಲು ಕಟ್ಟಿಕೊಂಡಿದ್ದ. ನಿಜವಾಗಿಯೂ ಅವನು ಆ ಊರಿನವನೇ. ಅವನನ್ನು ಆ ನೀರಿನ ಚಿಲುಮೆ, ಅದರ ನೀರು ಶೇಖರವಾಗುವ ಕೊಳ, ಹರಿಯುವ ಕಾಲುವೆಯ ಯೋಗ ಕ್ಷೇಮ ನೋಡಿಕೊಳ್ಳುವುದಕ್ಕಾಗಿ ಊರಿನ ಆಡಳಿತ ಮುಖ್ಯಸ್ಥರು ಅವನನ್ನು ನೇಮಿಸಿ ದ್ದರು. ಅವನ ಕೆಲಸ ಎಂದರೆ, ಊಟೆಯ ಸುತ್ತಮುತ್ತ ತರಗೆಲೆ, ಕಸ ಬಿದ್ದರೆ ಎತ್ತಿ ಶುಚಿ ಗೊಳಿಸುವುದು, ಕಾಲುವೆ ಯಲ್ಲಿ ಕಸಕಡ್ಡಿ ಕಟ್ಟಿಕೊಂಡರೆ ಬಿಡಿಸಿಕೊಡುವುದು, ಕೊಳ ದಲ್ಲಿ ಹಾವಸೆ ಉಂಟಾದರೆ ಶುದ್ಧ ಮಾಡುವುದು… ಹೀಗೆಲ್ಲ ಸಣ್ಣಪುಟ್ಟದು. ಇದ ಕ್ಕಾಗಿ ತಿಂಗಳಿಗಿಷ್ಟು ಎಂದು ಸಣ್ಣ ಮೊತ್ತ ನಿಗದಿ ಮಾಡಿ ಅವನನ್ನು ಊರವರು ನೇಮಿಸಿದ್ದರು.
ಕಾಲ ಕಳೆಯುತ್ತಿತ್ತು. ಊರಿನ ಆಡಳಿತ ಬದಲಾಯಿತು, ಹಳಬರ ಬದಲಿಗೆ ಸಣ್ಣ ವಯಸ್ಸಿನ ಹೊಸಬರು ಬಂದರು. ಆಡಳಿತ ಕ್ರಮದಲ್ಲಿಯೂ ಹಲಕೆಲವು ಬದಲಾ ವಣೆಗಳು ಆದವು. ಒಂದು ದಿನ ಆಡಳಿತದ ಪ್ರಮುಖ ಊರಿಗೆ ನೀರು ಒದಗಿಸುವ ಊಟೆಯ ಬಳಿಗೆ ಬಂದವನು ಅಲ್ಲಿದ್ದ ವೃದ್ಧ ಕೊಳದ ಬಳಿ ಸುಮ್ಮನೆ ಕುಳಿತಿದ್ದುದನ್ನು ಕಂಡ. ನಿಜಕ್ಕೂ ವೃದ್ಧ ಆಗಷ್ಟೇ ಕಾಲುವೆಯಲ್ಲಿ ಬಿದ್ದಿದ್ದ ತರಗೆಲೆಗಳನ್ನು ಎತ್ತಿ ಆಚೆ ಹಾಕಿ ಒಂದೀಡು ಎಲೆಯಡಿಕೆ ಹಾಕಿ ಕುಳಿತು ವಿಶ್ರಮಿಸಿ ಕೊಳ್ಳುತ್ತಿದ್ದ.
ಆದರೆ ಆಡಳಿತ ಪ್ರಮುಖನಿಗೆ ಈ ಅಜ್ಜ ಸುಮ್ಮನೆ ಕುಳಿತಿದ್ದಾನಲ್ಲವೇ ಎಂದು ಅನಿಸಿತು. ಅಲ್ಲದೆ ದಿನವೂ ಶುಚಿಗೊಳಿಸುವುದಕ್ಕೇನು ಇರುತ್ತದೆ, ಸಂಬಳ ಕೊಡುವುದು ವೃಥಾ ಖರ್ಚು ಎನ್ನಿಸಿತು. ಮರುದಿನ ಆಡಳಿತದ ಸಭೆ ಕರೆದು ಊಟೆಯ ಬಳಿ ಇರುವ ವೃದ್ಧನ ಬಗ್ಗೆ ಚರ್ಚೆಯಾಯಿತು. ಆ ಅಜ್ಜನಿಗೆ ಸಂಬಳ ಕೊಡುವುದು ಸುಮ್ಮನೆ. ಆತನಿಗೆ ಅಲ್ಲೇನೂ ಹೇಳಿಕೊಳ್ಳುವಂತಹ ಕೆಲಸ ಇಲ್ಲ. ಅವನನ್ನು ಕೆಲಸದಿಂದ ತೆಗೆಯೋಣ ಎಂದೆಲ್ಲ ಮಾತುಕತೆಗಳಾದವು. ಕೊನೆಗೆ ಎಲ್ಲರೂ ಒಮ್ಮತದಿಂದ ನಿರ್ಧಾರ ತೆಗೆದುಕೊಂಡು ವೃದ್ಧನನ್ನು ಮನೆಗೆ ಕಳುಹಿಸಲಾಯಿತು.
ತಿಂಗಳು ಕಳೆಯಿತು. ಊರಿಗೆ ಬರುವ ನೀರು ನಾತ ಬೀರ ಲಾರಂಭಿಸಿತು. ಕಾಲುವೆ ಯಲ್ಲಿ ಕಸಕಡ್ಡಿ ಕಟ್ಟಿ ಕೊಂಡಿತು. ಕೊಳದಲ್ಲಿ ಪಾಚಿ ಬೆಳೆಯಿತು. ಕಾರಣ ಎಂದರೆ, ಅವೆಲ್ಲವುಗಳ ದೇಖರೇಖೀ ಮಾಡುವವರು ಯಾರೂ ಇರಲಿಲ್ಲ. ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದ ಅಜ್ಜನನ್ನು ಖರ್ಚು ಕಡಿತದ ಕಾರಣ ನೀಡಿ ಮನೆಗೆ ಕಳುಹಿಸಲಾಗಿತ್ತು.
ನಮ್ಮ ಬದುಕು, ಸಂಬಂಧಗಳು ಕೂಡ ಹೀಗೆಯೇ. ಅವು ನವಿರಾಗಿರುತ್ತವೆ, ಸೂಕ್ಷ್ಮವಾಗಿರುತ್ತವೆ. ಅವುಗಳಿಗೆ ಕಾಲಕಾಲಕ್ಕೆ ಸಣ್ಣಪುಟ್ಟ ತಿದ್ದಿತೀಡುವಿಕೆಗಳನ್ನು ಮಾಡಿ ಕೊಳ್ಳುತ್ತ, ನೇರ್ಪುಗೊಳಿಸುತ್ತ ಹೋಗಬೇಕು. ಅವು ಪುನರಾವರ್ತನೆ, ಕ್ಷುಲ್ಲಕ, ನಗಣ್ಯ ಎಂದು ಕಂಡರೂ ಕೂಡ ಅವುಗಳ ಅಗತ್ಯ ಇದ್ದೇ ಇದೆ. ಅದು ಗೊತ್ತಾಗುವುದು ಕೈತಪ್ಪಿದಾಗ ಮಾತ್ರ.
ದೂರದ ಊರಿನಲ್ಲಿದ್ದರೂ ಗೆಳೆಯರಿಗೆ ಆಗಾಗ ಕರೆ ಮಾಡುವುದು, ಸಂಬಂಧಿ ಗಳೊಂದಿಗೆ ಮಾತುಕತೆ, ಕುಶಲೋಪರಿ ವಿಚಾರಿಸುವುದು ಅಗತ್ಯ. ಮನೆಯೊಳಗೇ ಆದರೂ ಪತಿ-ಪತ್ನಿಯ ನಡುವೆ ಆಪ್ತ ಮಾತುಕತೆ, ಕ್ಷೇಮ ವಿಚಾರಣೆ ಬೇಕು. ಎಲ್ಲವೂ ಸರಿ ಇದೆ ಎಂದು ಅಂದುಕೊಳ್ಳುತ್ತ ಮುಂದೆ ಸಾಗುವುದು ವಿಹಿತವಲ್ಲ.
(ಸಾರ ಸಂಗ್ರಹ)