ಸೈಕಲ್ ತುಳಿದು ಶಾಲೆಗೆ ತೆರಳುವ ಸಮಯದಿಂದ ಹಿಡಿದು ಬೈಕ್ ಏರಿ ಕಾಲೇಜಿಗೆ ಹೋಗುವವರೆಗೂ ಅದೆಷ್ಟೋ ಮಂದಿಯೊಂದಿಗೆ ನಾವು ಸ್ನೇಹ ಮಾಡಿರುತ್ತೇವೆ. ಇವರಲ್ಲಿ ಹಲವು ಮಂದಿ ಬಹುಕಾಲ ನಮ್ಮ ಜತೆಗಿರುತ್ತಾರೆ. ಇನ್ನೂ ಕೆಲವರು ಸ್ನೇಹಿತರ ಮೇಲೆ ಅದೆಷ್ಟೂ ಅವಲಂಬಿತರಾಗಿರುತ್ತೇವೆ ಎಂದರೆ, ಹೆತ್ತವರ ಬಳಿ ಹೇಳದ ಅದೆಷ್ಟೋ ವಿಷಯಗಳನ್ನು ಅವರಲ್ಲಿ ಹಂಚಿಕೊಂಡಿರುತ್ತೇವೆ. ಹೀಗಾಗಿಯೇ ನಮಗೆ ಅರಿವಿಲ್ಲದೆ ನಾವಾಯ್ದುಕೊಳ್ಳುವ ಸ್ನೇಹಿತರ ಪ್ರಭಾವವ ನಮ್ಮ ಜೀವನದ ಮೇಲಾಗುತ್ತದೆ ಎನ್ನುತ್ತವೆ ಹಲವು ಸಂಶೋಧನೆಗಳು.
ಏನಿದು ಸ್ನೇಹಿತರ ಪರಿಶೋಧನೆ ?
ನೀವಾಯ್ದುಕೊಂಡ ಸ್ನೇಹಿತರು ನಿಮ್ಮ ಜೀವನದ ಮೆಲೆ ಒಳ್ಳೆಯ ಪ್ರಭಾವ ಬೀರಿದರೆ ಸರಿ. ಒಂದೊಮ್ಮೆ ಅದು ಋಣಾತ್ಮಕವಾಗಿದ್ದಲ್ಲಿ ಸಹವಾಸ ದೋಷದಿಂದ ಸನ್ಯಾಸಿಯೂ ಕೆಟ್ಟ ಎಂಬ ಮಾತಿನಂತಾಗುತ್ತದೆ. ಅಲ್ಲದೇ ಹಿರಿಯರೊಬ್ಬರು ಪ್ರಸಿದ್ಧ ಮಾತಿನಂತೆ, ನಿನ್ನ ವ್ಯಕ್ತಿತ್ವ ಹೇಗಿದೆ ಎಂದು ಹೇಳಬೇಕಾದರೆ, ನಿನ್ನ ಸ್ನೇಹಿತರು ಯಾರು ಎಂದು ಹೇಳು, ನಾನು ನಿನ್ನ ಬಗ್ಗೆ ಹೇಳುತ್ತೇನೆ ಎಂಬ ಮಾತೊಂದಿದೆ. ಇದು ನಾವು ಆಯ್ಕೆ ಮಾಡಿಕೊಳ್ಳುವ ಸ್ನೇಹಿತರ ಬಗ್ಗೆಯೇ ಆಗಿದೆ. ನಮ್ಮ ಜೀವನದಲ್ಲಿ ಸ್ನೇಹಿತರು ಎಷ್ಟು ಪ್ರಭಾವ ಬೀರುತ್ತಾಾರೆ ಮತ್ತು ಮುಖ್ಯ ಎಂಬುವುದನ್ನು ಈ ಮಾತಿನಿಂದ ತಿಳಿಯಬಹುದಾಗಿದೆ.
ಸ್ನೇಹದ ಗುಣಮಟ್ಟ ಮತ್ತು ಸಾಮಾಜಿಕ ಅಭಿವೃದ್ಧಿ ಎಂಬ ವಿಷಯವನ್ನಾಧರಿಸಿ ನಡೆದ ಸರ್ವೆಯೊಂದರ ಪ್ರಕಾರ ಸಾಮಾಜಿಕ ವರ್ತನೆ, ಅನ್ಯೋನ್ಯತೆ, ಕಡಿಮೆ ಮಟ್ಟದ ಸಂಘರ್ಷ ಮತ್ತು ಇತರ ಸಕಾರಾತ್ಮಕ ಗುಣಗಳನ್ನು ಹೊಂದಿರುವ ಸ್ನೇಹ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ತಿಳಿದುಬಂದಿದೆ. ಇಂಥಹ ಸ್ನೇಹದಿಂದ ವ್ಯಕ್ತಿಯೊಬ್ಬನ ಅಭಿವೃದ್ಧಿ ಸಾಧ್ಯ ಈ ಗುಣಗಳನ್ನು ಹೊರತುಪಡಿಸಿ, ನಿಮ್ಮ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದೆ, ನಿಮ್ಮ ದಾರಿಯನ್ನೂ ತಪ್ಪಿಸುವ ಸ್ನೇಹಿತರನ್ನು ಹುಡುಕುವುದೇ ಸ್ನೇಹಿತರ ಪರಿಶೋಧನೆಯಾಗಿದೆ.
ನಿಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸುವವರು, ಬಿದ್ದಾಗ ಕೈ ಹಿಡಿದು ಮೇಲೆತ್ತುವವರು, ನಿಮ್ಮ ಸುಂದರ ಜೀವನಕ್ಕಾಗಿ ಕೊಡುಗೆ ನೀಡುವವರು ಮಾತ್ರ ಉತ್ತಮ ಸ್ನೇಹಿತರು ಎಂದೆನಿಸಲು ಸಾಧ್ಯ. ಎಲ್ಲ ಸ್ನೇಹಿತರಿಂದಲೂ ಈ ಕಾರ್ಯ ಸಾಧ್ಯವಾಗದು. ಸ್ನೇಹವೆಂಬುದು ನಿಂತಿರುವುದೇ ಪರಸ್ಪರ ಹೊಂದಾಣಿಕೆ, ವಿಶ್ವಾಸದ ಆಧಾರದಲ್ಲಿ. ಮತ್ತೊಬ್ಬರ ಅಭಿಪ್ರಾಯಗಳನ್ನು ಗೌರವಿಸುವ ಜತೆಗೆ ಅದಕ್ಕೆ ಪೂರಕ ಸಲಹೆಗಳನ್ನು ನೀಡುವುದೇ ನಿಜವಾದ ಸ್ನೇಹ.
ಸಾಮಾಜಿಕ ಮಾಧ್ಯಮಗಳಲ್ಲಿ ಸ್ನೇಹಿತರ ಆಯ್ಕೆಯೂ ಮುಖ್ಯ
ಸಾಮಾಜಿಕ ಮಧ್ಯಮಗಳಿಂದಗಿ ಸ್ನೇಹ ಎಂಬ ಪದಕ್ಕೆ ಹೊಸ ರೂಪವೇ ಇತ್ತೀಚೆಗೆ ದೊರೆಯುತ್ತಿದೆ. ನೆರವಾಗಿ ಮುಖವನ್ನೇ ನೋಡದೆ ಕೇವಲ ಅಂತರ್ಜಾಲದ ಮೂಲಕ ಸಂವಹನ ನಡೆಸಿಕೊಂಡು ಅದೆಷ್ಟೋ ಮಂದಿಯೊಂದಿಗೆ ಸ್ನೇಹ ಬೆಳೆಸಿದ್ದೇವೆ. ಸಾವಿರಾರು ಮಂದಿಯೊಂದಿಗೆ ದಿನವಿಡೀ ಹರಟೆ ಹೊಡೆದು ಸಮಯ ವ್ಯರ್ಥಮಾಡುವ ಬದಲು ನಿಮ್ಮ ಅಭಿವೃದ್ಧಿಗೆ ಪೂರಕವಾಗುವ ಓರ್ವ ಸ್ನೇಹಿತನೊಂದಿಗೆ ನಡೆಸುವ ಸಂವಹನವೇ ಹೆಚ್ಚು ಫಲದಾಯಕ ಎನ್ನುತ್ತವೆ ಸಂಶೋಧನೆಗಳು.