Advertisement

ಮಂತ್ರ ಪಠಣದಿಂದ ಹೆಚ್ಚು ಶಕ್ತಿ ಬರುತ್ತದೆಂಬುದು ಸುಳ್ಳು

10:32 AM Aug 27, 2019 | Suhan S |

ದಾವಣಗೆರೆ: ಕೆಲವರು ಮಂತ್ರಗಳನ್ನು ಪಠಿಸಿದರೆ ಹೆಚ್ಚು ಶಕ್ತಿ ಬರುತ್ತದೆ ಎಂಬುದಾಗಿ ಹೇಳುತ್ತಾರೆ. ಆದರೆ, ಅದು ಸುಳ್ಳು. ಮಂತ್ರಕ್ಕಿಂತ ಹೆಚ್ಚು ಶಕ್ತಿ ವಚನಗಳಲ್ಲಿ ಇದೆ ಎಂದು ವಿರಕ್ತ ಮಠದ ಚರಮೂರ್ತಿ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

Advertisement

ಸೋಮವಾರ, ನಗರದ ವಿರಕ್ತಮಠದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಮಕ್ಕಳಿಗಾಗಿ ಏರ್ಪಡಿಸಿದ್ದ ವಚನ ಸ್ಪರ್ಧೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಿನ್ನ ಪಾಲಿನ ಕಾಯಕ ನೀನು ಮಾಡು ಎಂದೇಳುವ ಹೇಳುವ ವಚನಗಳಲ್ಲಿ ಅದ್ಭುತ ಶಕ್ತಿ ಅಡಗಿದೆ ಎಂದರು.

ಲಿಂಗಾಯತ, ಬಸವತತ್ವ ಧರ್ಮದಲ್ಲಿ ಕಾಯಕಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಕಾಯಕ ಮಾಡದವರಿಗೆ ಲಿಂಗಾಯತ, ಬಸವ ಧರ್ಮದಲ್ಲಿ ಸ್ಥಾನವಿಲ್ಲ. ಕಾಯದಲ್ಲಿಯೇ ಗುರು-ಲಿಂಗ-ಜಂಗಮ ಅಡಗಿವೆ. ಕಾಯಕದ ಮೂಲಕವೇ ಕೈಲಾಸ ಎಂಬ ಅಭಿವೃದ್ಧಿ ಕಾಣಬೇಕೆಂದು ಕಿವಿಮಾತು ಹೇಳಿದರು.

ವರ್ಗ, ವರ್ಣ, ಜಾತಿ, ಲಿಂಗ ಬೇಧವಿಲ್ಲದೆ ಮಾನವ ಧರ್ಮವನ್ನು ಎತ್ತಿ ಹಿಡಿದಿರುವ ವಚನಗಳು ಯಾವುದೇ ಒಂದು ರಾಜ್ಯದ, ದೇಶದ ಸ್ವತ್ತು ಅಲ್ಲ. ಜಗತ್ತಿನ ಮಾನವ ಕುಲದ ಸ್ವತ್ತಾಗಿವೆ. ಮಾನವ ಕುಲದ ನೆಮ್ಮದಿ, ಶಾಂತಿಗಾಗಿ ವಚನಗಳು ಅತಿ ಮುಖ್ಯವಾಗಿವೆ ಎಂದು ಪ್ರತಿಪಾದಿಸಿದರು.

12ನೇ ಶತಮಾನದಲ್ಲಿ ಶರಣರು ಎಲ್ಲಾ ವರ್ಗದ ಮಹಿಳೆಯರು ಹಾಗೂ ಪುರುಷರಿಗೂ ಸಮಬಾಳು, ಸಮಪಾಲು ನೀಡಿದರು. ವಚನಗಳಲ್ಲಿ ಹೆಚ್ಚು ಶಕ್ತಿ ಇದೆ. ಹಾಗಾಗಿ ಪ್ರತಿಯೊಬ್ಬರೂ ವಚನ ಸಾಹಿತ್ಯ ಪಠಣ ಮಾಡಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರು ಅಳಿಯಲು ಬೇಡ ಎಂಬುದಾಗಿ ವಚನಗಳಲ್ಲಿ ತಿಳಿಸಲಾಗಿದೆ. ಒಬ್ಬರಿಗೆ ಮೋಸ ಮಾಡ ಬೇಡ, ಮತ್ತೂಬ್ಬರಿಂದ ಮೋಸ ಹೋಗಲೂ ಬೇಡ ಎಂದು ಶರಣರು ತಿಳಿಸಿದ್ದಾರೆ. ವಚನಗಳ ಮೂಲಕ ನಮ್ಮ ಜ್ಞಾನ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ವಚನ ಗ್ರಂಥಗಳಿಗೆ ಪುಷ್ಟಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಸೇಡಂ ಬಸವಕೇಂದ್ರದ ಅನುಭಾವಿ ಬಸವತೀರ್ಥಪ್ಪ ಕಾಚೂರು, ಹೆಣ್ಣು- ಹೊನ್ನು-ಮಣ್ಣಿಗಾಗಿ ರಾಜ ಮಹಾರಾಜರು ಅನೇಕ ಬಾರಿ ಯುದ್ಧ ಮಾಡಿದ್ದಾರೆ. ಆದರೆ, 12ನೇ ಶತಮಾನದಲ್ಲಿ ಶರಣರು ಸಮಾನತೆಗಾಗಿ, ಮಾನವರ ಉದ್ಧಾರಕ್ಕಾಗಿ ಕ್ರಾಂತಿ ಮಾಡಿದರು. ಶರಣ ಸಾಹಿತ್ಯಕ್ಕೆ ಮತ್ತೂಂದು ಸಾಹಿತ್ಯ ಸಾಟಿ ಇಲ್ಲ. ಪ್ರತಿನಿತ್ಯ ವಚನಗಳನ್ನು ಪಠಿಸುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಮುಖ್ಯಗುರು ರೋಷನ್‌, ಶ್ರೀಮತಿ ದಮಯಂತಿ ಗೌಡರ್‌, ಸಾವಿತ್ರಮ್ಮ, ರತ್ನಮ್ಮ ಇದ್ದರು.

ವಚನಸ್ಪರ್ಧೆಯಲ್ಲಿ ವಿರಕ್ತಮಠದ ಎಸ್‌ಜೆಎಂ, ಅಕ್ಕಮಹಾದೇವಿ, ಗುರುಬಸಮ್ಮ , ತಿಮ್ಮಾರೆಡ್ಡಿ, ಸಿದ್ದಗಂಗಾ ಸೇರಿದಂತೆ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next