ಹಾಸನ: ಸತತ ಮೂರು ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಕೆ.ಎಂ.ಶಿವಲಿಂಗೇಗೌಡ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿದ್ದರೆ, ಕೊನೆ ಗಳಿಗೆವರೆಗೆ ಹೋರಾಡಿದರೂ ಬಿಜೆಪಿ ಟಿಕೆಟ್ ವಂಚಿತ ರಾದ ಎನ್.ಆರ್.ಸಂತೋಷ್ ಜೆಡಿಎಸ್ ಅಭ್ಯರ್ಥಿ. ಬಿಜೆಪಿ ಸರಕಾರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿದ್ದ ಜಿ.ವಿ.ಬಸವರಾಜು ಬಿಜೆಪಿ ಅಭ್ಯರ್ಥಿಯಾಗಿ ದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದ್ದಂತೆ ಕಂಡರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ.
ಹೇಮಾವತಿ ನದಿ ಮೂಲದಿಂದ ಅರಸೀಕೆರೆ ನಗರ ಹಾಗೂ ಗ್ರಾಮಾಂತರದ ಎಲ್ಲ ಹಳ್ಳಿ ಗಳಿಗೂ ಕುಡಿಯುವ ನೀರು ಪೂರೈಕೆ, ಕ್ಷೇತ್ರದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವುದೂ ಸಹಿತ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳ ಮೂಲಕವೇ ಕೆ.ಎಂ.ಶಿವಲಿಂಗೇಗೌಡ ಅವರು 4ನೇ ಬಾರಿ ಜನಾಶೀರ್ವಾದ ಬಯಸಿದ್ದಾರೆ. ಗೌಡರ ಕುಟುಂಬದ ವಿರೋಧ ಕಟ್ಟಿಕೊಂಡಿರುವುದರಿಂದ ಒಕ್ಕಲಿಗರ ಮತಗಳ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಲಿಂಗಾಯತ ಮತದಾರರೂ ಕೈ ಹಿಡಿಯುವ ಪರಿಸ್ಥಿತಿ ಯಿಲ್ಲ. ಆದರೆ ಅಹಿಂದ ವರ್ಗಗಳ ಮತದಾರರ ಬಲ ನಂಬಿಕೊಂಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಬಂದ ತತ್‌ಕ್ಷಣದಿಂದಲೇ ಪತ್ನಿಯ ತವರೂರಿನ ಜಾಡು ಹಿಡಿದು ರಾಜಕೀಯ ಭವಿಷ್ಯ ಹುಡುಕಿಕೊಂಡು ಅರಸೀಕೆರೆ ಕ್ಷೇತ್ರದತ್ತ ಬಂದವರು ಎನ್.ಆರ್.ಸಂತೋಷ್. ತಿಪಟೂರು ತಾಲೂಕು ನೊಣವಿನಕೆರೆಯ ಎನ್.ಆರ್. ಸಂತೋಷ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಬಂಧಿ. ಬಿಎ ಸ್‌ವೈ ಕುಟುಂಬದ ವಿರೋಧ ಕಟ್ಟಿ ಕೊಂಡಿದ್ದರಿಂದ ಬಿಜೆಪಿ ಟಿಕೆಟ್ ವಂಚಿತರಾದರು. ಕ್ಷೇತ್ರದಲ್ಲಿ ಬಿಜೆಪಿಯ ಸಂಘಟನೆ, ಸಾಮಾ ಜಿಕ ಕಾರ್ಯಕ್ರಮಗಳ ಮೂಲಕ ಚುನಾವಣೆಗೆ 3 ವರ್ಷಗಳಿಂದಲೂ ಸಂತೋಷ್ ಸಜ್ಜಾಗಿದ್ದರು.
ಶಿವಲಿಂಗೇಗೌಡರ ನಿರ್ಗಮನದಿಂದ ಜೆಡಿಎಸ್‌ಗೆ ಪ್ರಬಲ ಕೊರತೆಯಿತ್ತು. ಜಿ.ಪಂ. ಮಾಜಿ ಸದಸ್ಯ, ಕುರುಬ ಸಮುದಾಯದ ಬಾಣಾವರದ ಅಶೋಕ್ ಸ್ಪರ್ಧೆಗಿಳಿಸುವ ಆಲೋಚನೆ ಯಲ್ಲಿದ್ದ ಜೆಡಿಎಸ್‌ಗೆ ಎನ್.ಆರ್.ಸಂತೋಷ್ ಬಂದದ್ದು ದಳಪತಿಗಳಿಗೆ ಆನೆ ಬಲ ಸಿಕ್ಕಂತಾ ಗಿದೆ. ಬಿಜೆಪಿಯ ಸಂಬಂಧ, ಲಿಂಗಾಯತರ ಬೆಂಬಲ ಹಾಗೂ ಜೆಡಿಎಸ್ ನೆಲಗಟ್ಟಿನಿಂದ ಬಿಜೆಪಿಯಲ್ಲಿದ್ದುದುಕ್ಕಿಂತಲೂ ಎನ್.ಆರ್.ಸಂತೋಷ್ ಈಗ ಶಿವಲಿಂಗೇಗೌಡರಿಗೆ ಪ್ರಬಲ ಎದುರಾಳಿಯಾಗಿ ಕಂಗೆಡಿಸಿದ್ದಾರೆ. ಎನ್.ಆರ್.ಸಂತೋಷ್ ನಿರ್ಗಮನದಿಂದ ಕ್ಷೇತ್ರದಲ್ಲಿ ಬಿಜೆಪಿ ಬಲಹೀನವಾದಂತಿದೆ. ಬಿಜೆಪಿ ಅಭ್ಯರ್ಥಿ ಜಿ.ವಿ.ಬಸವರಾಜು ಅವರು ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಮತ ಸೆಳೆಯುವಷ್ಟು ಪ್ರಭಾವಿ ನಾಯಕತ್ವ ರೂಪಿಸಿಕೊಂಡವರಲ್ಲ. ಆದರೆ ಲಿಂಗಾಯತರ ಬೆಂಬಲ, ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ನಂಬಿದ್ದಾರೆ.
~ ಎನ್. ನಂಜುಂಡೇಗೌಡ