Advertisement
ಪ್ರತಿಯೊಂದು ಮನೆಗೂ ಹಿತ್ತಲೇ ಭೂಷಣ. ಈಗಿನ ಸಿಟಿಗಳ ಮನೆಗಳಲ್ಲಿ ಹಿತ್ತಲು ಕಾಣುವುದು ದೂರದ ಮಾತು. ಆದರೆ ಹಳ್ಳಿಯ ಕಡೆ ಹಾಗಲ್ಲ. ಅಲ್ಲಿ ಮನೆ ಜತೆಗೆ ಎಲ್ಲರೂ ನೋಡುವುದು ಹಿತ್ತಲು ಇದೆಯೋ ಇಲ್ಲವೋ ಎನ್ನುವುದನ್ನು. ಮುಂಬಾಗಿಲಂತೆ ಹಿಂಬಾಗಿಲು ಎನ್ನುವುದು ಆ ಮನೆಯ ರೂಪಕವಿದ್ದಂತೆ.
Related Articles
Advertisement
ಹಿತ್ತಲಿನ ಉಪಯೋಗ, ಮಹತ್ವ ಎಲ್ಲರಿಗೂ ಹೆಚ್ಚಿಗೆ ಗಮನಕ್ಕೆ ಬರುವುದು ಸದ್ದಿಲ್ಲದೆ ಮಳೆಯೊಂದು ಟಿಸಿಲೊಡೆದು ಭೂಮಿಗೆ ರಪ್ಪೆಂದು ರಚ್ಚೆ ಹಿಡಿದ ಮಗುವಿನಂತೆ ಅಪ್ಪಳಿಸಿದಾಗ. ಮೂಲೆಯಲ್ಲಿ ಒತ್ತೂತ್ತಾಗೆ ಸೇರಿ ಸಿರುವ ಕಟ್ಟಿಗೆಯ ಗುಂಪಿಗೆ ಬೇಸಗೆಯಲ್ಲಿಯೇ ಅದನ್ನು ಬೆಚ್ಚಗೆ ಮಳೆಗಾಲ, ಚಳಿಗಾಲದವರೆಗೂ ಹೇಗೆ ಕಾದಿರುಸುವುದು ಎಂಬ ಉಪಾಯ ಸಣ್ಣಗೆ ಜಾರಿಯಾಗತೊಡಗಿರುತ್ತದೆ. ಮಳೆಗಾಲಕ್ಕೆ ಎಲ್ಲವನ್ನೂ ಬೆಚ್ಚಗೆ ಕಾಪಿಟ್ಟುಕೊಳ್ಳುವ ಹೆಚ್ಚಿನ ಜವಾಬ್ದಾರಿಯ ಹೊಣೆಯೊಂದು ಹಿತ್ತಲಿನ ಮೇಲೆ ಸಣ್ಣಗೆ ಆಜ್ಞಾಪೂರ್ವಕವಾಗಿ ಜಾರಿಯಾಗುತ್ತೆ.
ಶಿಶಿರ ಋತುವೊಂದು ಮೆಲ್ಲ ಮೆಲ್ಲನೆ ಹೆಜ್ಜೆ ಇಟ್ಟೊಡನೆ, ಹಿತ್ತಲಿನ ಇಕ್ಕಟ್ಟಿನ ಜಾಗದ ನಡುವೆಯೇ ಅಲ್ಲಿಯೇ ಬೆಳೆದಿದ್ದ ಮರಗಳ ರೆಂಬೆ, ಕೊಂಬೆಗಳು, ತರಗಲೆಗಳು ಹೀಗೆ ಚಳಿಗೆ ಬೆಚ್ಚನೆಯ ಬೆಂಕಿ ಕಾಯಿಸಿಕೊಳ್ಳಲು ಉರಿಗೆ ಆಹುತಿಯಾಗುತ್ತವೆ. ಒಮ್ಮೊಮ್ಮೆ ಅದೃಷ್ಟವಿದ್ದಲ್ಲಿ ಹಿತ್ತಲಿನ ನಡುವಲ್ಲಿಯೇ ಬೆಳದಿಂಗಳ ಊಟದ ಸವಿಯನ್ನು ಸವಿಯಬಹುದು. ಆಗ ಊಟವೂ ಕೂಡ ಮತ್ತಷ್ಟು ರುಚಿಯಾಗಿರುತ್ತದೆ. ಊಟದ ಪ್ರೀತಿಯೊಂದಿಗೆ ಎಲ್ಲರ ಒಗ್ಗಟ್ಟಿನ ಬಲವೊಂದು ಅಪರಿಮಿತವಾಗಿ ಅದರೊಂದಿಗೆ ಮಿಳಿತವಾಗಿರುತ್ತದೆ.
ಮನೆ ಆಚೆಗೆ ಹೋಗಲು ಬಿಡದ ಬಸುರಿಯರಿಗೆಲ್ಲ ಹಿತ್ತಲೆ ಒಂದು ಪ್ರಪಂಚವಿದ್ದಂತೆ. ಹಿತ್ತಲಿನ ಬಟ್ಟೆಯನ್ನು ಒಗೆಯುವ ಕಟ್ಟೆಯ ಮೇಲೆ ಕೂಸನ್ನು ಅಜ್ಜಿಯು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅದರ ಮೈಯನ್ನು ಹದವಾಗಿ ನೀವಿ ಸ್ನಾನ ಮಾಡಿಸುತ್ತಿದ್ದರೆ, ಅದರ ಮೈಯ ಪರಿಮಳವೊಂದು ಗಂಧದಂತೆ ಸುತ್ತಲೂ ಆಘ್ರಾಣಿಸುತ್ತದೆ. ಮತ್ತೂಮ್ಮೆ ಆ ಕ್ಷಣದಲ್ಲಿ ಅಲ್ಲಿದ್ದ ಎಲ್ಲರಿಗೂ ಮಗುವಾಗಬೇಕೆಂಬ ಭಾವ ಒಮ್ಮೆಲೇ ಅಡಿಯಿಡುತ್ತದೆ.
ಹಿತ್ತಲೂ ಹೀಗೆ ಇದ್ದೂ ಇಲ್ಲದಂತೆ ತನ್ನ ಅಸ್ತಿತ್ವವನ್ನೂ ಎಲ್ಲರಿಗೂ ತೋರುತ್ತದೆ. ಒಮ್ಮೊಮ್ಮೆ ಊರಿನ ಜನರಿಗೆ ತಿಳಿಯಂದತಹ ಕೆಲವೊಂದು ಮುಚ್ಚಿಡಬೇಕಾದ ಸತ್ಯಗಳು ಹಿತ್ತಲಿನಲ್ಲಿಯೆ ಸಮಾಧಿಯಾಗುತ್ತವೆ. ಒಂದೊಂದು ವಸ್ತು, ಸ್ಥಳಗಳ ಉಪಯೋಗ ಒಮ್ಮೆಲೆ ಅರಿವಿಗೆ ಬಾರದಿದ್ದರೂ ನಿಧಾನಕ್ಕೆ ಅವುಗಳ ಸಹಚರ್ಯವಿಲ್ಲದೆ ಬದುಕು ಕಷ್ಟವಾಗು ತ್ತದೆ. ಹಿತ್ತಲೆಂಬುದು ಹಾಗೆಯೇ, ಹಿತ್ತಲು ಯಾಕೆ ಬೇಕು ಎಂದರೂ, ಅದು ಅನಿವಾರ್ಯ ಸಂಗತಿ. ಅಗತ್ಯವೂ ಹೌದು. ಅಲ್ಲಿ ಕಾಡುವ ದನಿಯಿದೆ. ಸಂಜೆಯಷ್ಟೇ ಅರಳಿ ಮರೆಯಾದ ಪಾರಿಜಾತದ ಹೂವಿನ ಘಮವಿದೆ. ಅವ್ವನ ಏರು ಬೈಗುಳ, ಅಪ್ಪನ ಬೆವರು, ಅಕ್ಕನ ನಾಚಿಕೆ, ಅಣ್ಣನ ಕಾಳಜಿ, ಹೀಗೆ ಹಿತ್ತಲಿನಲ್ಲಿ ಎಲ್ಲವೂ ಅಡಗಿದೆ.
ರಾಜೇಶ್ವರಿ ಲಕ್ಕಣ್ಣವರ, ಮಾನಸ ಗಂಗೋತ್ರಿ ಮೈಸೂರು