Advertisement

ಪ್ರಸಿದ್ಧ ಜಾಲತಾಣ ಸಂಶೋಧಿಸದ ಐಟಿ ಹಬ್‌

11:57 AM Oct 29, 2017 | Team Udayavani |

ಬೆಂಗಳೂರು: ನಗರ ಐಟಿ ಸೂಪರ್‌ ಹಬ್‌ ಆದರೂ ನಮ್ಮಿಂದ  ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಹಾಗೂ ಗೂಗಲ್‌ ಸೇರಿ ಯಾವುದೇ ಪ್ರಸಿದ್ಧ ಸಾಮಾಜಿಕ ಜಾಲತಾಣದ ಸಂಶೋಧನೆ ಸಾಧ್ಯವಾಗಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆ ಸಚಿವ ಪ್ರಕಾಶ್‌ ಜಾವಡೇಕರ್‌ ಕಳವಳ ವ್ಯಕ್ತಪಡಿಸಿದರು.

Advertisement

ಯಲಂಹಕದ ರೇವಾ ವಿಶ್ವವಿದ್ಯಾಲಯದಲ್ಲಿ ಶನಿವಾರ ಸರ್‌.ಎಂ.ವಿಶ್ವೇಶ್ವರಯ್ಯ ಬ್ಲಾಕ್‌ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲಿ ನಡೆಯುವ ಎಲ್ಲ  ಪ್ರಮುಖ ಸಂಶೋಧನೆ, ಅನ್ವೇಷಣೆ ತಂಡಗಳಲ್ಲಿ ಭಾರತೀಯ ಪ್ರತಿನಿಧಿಗಳು ಇದ್ದೇ ಇರುತ್ತಾರೆ. ಆದರೆ, ನಮ್ಮಿಂದಲೇ ನವ ಭಾರತ ನಿರ್ಮಾಣದ ಸಂಶೋಧನೆ, ಅನ್ವೇಷಣೆ ನಡೆಯಬೇಕು. ಈ ನಿಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳ ಕೌಶಲತೆ, ಜಾಣ್ಮೆ ಸದ್ಬಳಕೆಯಾಗಬೇಕು ಎಂದು ಕರೆ ನೀಡಿದರು.

ಸಂಶೋಧನೆಗೆ ಆದ್ಯತೆ
ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳು ಉದ್ಯೋಗಾವಕಾಶ, ಬೋಧನಾ ಕೌಶಲತೆ ಇತ್ಯಾದಿ ಅಂಶಗಳನ್ನೂ ಗಮನಿಸುತ್ತಾರೆ. ದೇಶದಲ್ಲಿ 150ಕ್ಕೂ ಅಧಿಕ ಎಂಜಿನಿಯರಿಂಗ್‌ ಸಂಸ್ಥೆಗಳ ಗುಣಮಟ್ಟ ಅತ್ಯಂತ ದುಸ್ಥಿತಿಯಲ್ಲಿದೆ. 500 ಸಂಸ್ಥೆಗಳು ಮಾನ್ಯತೆ ರದ್ದು ಮಾಡಲು ಪ್ರಸ್ತಾವನೆ ಸಲ್ಲಿಸಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಸಂಸ್ಥೆಗಳ ಮಾನ್ಯತೆ ರದ್ದತಿಗೆ ನಾವೂ ಸಿದ್ಧರಿದ್ದೇವೆ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಸುಧಾರಣೆಯಾಗಬೇಕು. ಜಾಗತಿಕ ಸ್ಪರ್ಧೆಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಹಾಗೂ ಅನ್ವೇಷಣೆಯಲ್ಲಿ ಮುಂದಿರಬೇಕು. ಈ ನಿಟ್ಟಿನಲ್ಲಿ ರೇವಾ ವಿವಿಯ ಕಾರ್ಯಸಾಧನೆ ಶ್ಲಾಘನೀಯ ಎಂದು ಹೇಳಿದರು.

ರೇವಾ ವಿಶ್ವವಿದ್ಯಾಲಯ 2017-18ನೇ ಸಾಲಿಗೆ ರೂಪಿಸಿರುವ “ಡಿಜಿಟಲ್‌ ರೇವಾ’ ಮತ್ತು ಆನ್‌ಲೈನ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಿರ್ಮಿಸಿರುವ “ರೇವಾ ಟ್ಯೂಬ್‌’ಗೆ ಚಾಲನೆ ನೀಡಲಾಯಿತು.  ಶಾಸಕ ಅರವಿಂದ ಲಿಂಬಾವಳಿ, ರೇವಾ ವಿವಿ ಕುಲಾಧಿಪತಿ ಡಾ.ಪಿ.ಶ್ಯಾಮ್‌ರಾಜು, ಕುಲಪತಿ ಡಾ.ಎಸ್‌.ವೈ.ಕುಲಕರ್ಣಿ, ಕುಲಸಚಿವ ಡಾ.ಎಂ.ಧನಂಜಯ ಮೊದಲಾದವರು ಉಪಸ್ಥಿತರಿದ್ದರು.

Advertisement

ಹತ್ತು ವರ್ಷದಲ್ಲಿ 20 ವಿಶ್ವ ಶ್ರೇಷ್ಠ ವಿವಿಗಳ ಅಭಿವೃದ್ಧಿ
ದೇಶದಲ್ಲಿ 800 ವಿಶ್ವವಿದ್ಯಾಲಯ, 40 ಸಾವಿರ ಕಾಲೇಜು, 3 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯವಸ್ಥೆಯೊಳಗಿದ್ದಾರೆ. ಶೇ.25ರಷ್ಟಿರುವ ಉನ್ನತ ಶಿಕ್ಷಣದ ನೋಂದಣಿ ಪ್ರಮಾಣವನ್ನು 2025 ವೇಳೆಗೆ ಶೇ.50ಕ್ಕೆ ಏರಿಸಲಿದ್ದೇವೆ. 800 ವಿವಿಗಳ ಪೈಕಿ ಒಂದೂ ವಿಶ್ವದ ಪ್ರಮುಖ ವಿವಿ ಎಂದೆನಿಸಿಕೊಂಡಿಲ್ಲ.

ಹೀಗಾಗಿ ಮುಂದಿನ 10 ವರ್ಷಗಳಲ್ಲಿ ದೇಶದ 20 ವಿವಿಗಳನ್ನು ವಿಶ್ವಶ್ರೇಷ್ಠ ವಿಶ್ವವಿದ್ಯಾಲಯಗಳಾಗಿ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂಬ ಜಾವಡೇಕರ್‌ ಮಾಹಿತಿ ನೀಡಿದರು. ಇದರಲ್ಲಿ 10 ಸರ್ಕಾರಿ ಹಾಗೂ 10 ಖಾಸಗಿ ವಿವಿ ಸೇರಿಕೊಂಡಿದೆ. ವಿಶ್ವವಿದ್ಯಾಲಯದ ಸಂಶೋಧನೆ ಗುಣಮಟ್ಟದ ಪ್ರಸ್ತುತಿಯ ಆಧಾರದಲ್ಲಿ ಮುಕ್ತ ಆಯ್ಕೆ ನಡೆಯಲಿದೆ.

ಈ 20 ವಿಶ್ವವಿದ್ಯಾಲಯಕ್ಕೆ ಗುಣಮಟ್ಟ ಸುಧಾರಣೆಯ ಸ್ವಾಯತ್ತ ಸ್ಥಾನಮಾನ ನೀಡಲಿದ್ದೇವೆ. ಸರ್ಕಾರದ 10 ವಿವಿಗೆ ತಲಾ 1 ಸಾವಿರ ಕೋಟಿ ಅನುದಾನ ಪೂರೈಸಲಿದ್ದೇವೆ. 10 ಖಾಸಗಿ ವಿವಿಗಳನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಸವಾಲು:
“ಬ್ರಿಟಿಷರು ಬಳುವಳಿಯಾಗಿ ನೀಡಿರುವ ಗೌನ್‌ಗಳನ್ನೇ ದೇಶದ ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವದ ಸಂದರ್ಭದಲ್ಲಿ ಬಳಸಲಾಗುತ್ತಿದೆ. ನಾವು ಇದನ್ನು ಬದಲಿಸಲಿದ್ದೇವೆ. ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಭಾರತೀಯ ಗೌನ್‌ ಧರಿಸುವ ವ್ಯವಸ್ಥೆಯನ್ನು ಮುಂದಿನ ವರ್ಷದಿಂದ ಜಾರಿಗೆ ತರಲಿದ್ದೇವೆ.

ಇದಕ್ಕಾಗಿ ಎಂಎಚ್‌ಆರ್‌ಡಿ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳಿಗೆ ಮುಕ್ತ ಸವಾಲು ನೀಡಿದ್ದೇವೆ. ವಿದ್ಯಾರ್ಥಿಗಳು ತಮ್ಮ ಚಿಂತನಾ ಶಕ್ತಿ ಉಪಯೋಗಿಸಿ ಗೌನ್‌ ಡಿಸೈನ್‌ ಮಾಡಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ಅದರಲ್ಲಿ ಉತ್ತಮ ಗೌನ್‌ ಆಯ್ಕೆ ಮಾಡಲಿದ್ದೇವೆ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ಮಾಹಿತಿ ನೀಡಿದರು.

ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಡಿಜಿಟಲ್‌ ಲಾಕರ್‌ನಲ್ಲಿ ಸಂಗ್ರಹಿಸುವ ಹೊಸ ವ್ಯವಸ್ಥೆ ನಡೆಯುತ್ತಿದೆ. ಅಂಕಪಟ್ಟಿ, ಪದವಿ ಸೇರಿದಂತೆ ಎಲ್ಲಾ ದಾಖಲೆ ಇದರಲ್ಲೇ ಲಭ್ಯವಾಗುತ್ತದೆ ಹಾಗೂ ಹೆಚ್ಚು ಸುರಕ್ಷಿತವಾಗಿರುತ್ತದೆ. ಈ ಸಂಬಂಧ ಎಲ್ಲಾ ರಾಜ್ಯದ ಶಿಕ್ಷಣ ಬೋರ್ಡ್‌ಗೆ ಸೂಚನೆ ನೀಡಿದ್ದೇವೆ.
-ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next