ಬಾಗಲಕೋಟೆ: ಐಟಿ ತಂತ್ರಜ್ಞಾನ ಎನ್ನುವುದು ಇಂದು ಕುದುರೆ ಓಟವಿದ್ದಂತೆ. ನಿರಂತರ ನಾವು ವೇಗವಾಗಿ ಓಡಬೇಕು. ನಮ್ಮನ್ನು ಸದಾಕಾಲ ಉನ್ನತೀಕರಿಸಿಕೊಂಡು ಎಲ್ಲ ಕಡೆಯಿಂದ ವೇಗವಾಗಿ ಗ್ರಹಿಸಿ ನಮ್ಮ ಕೌಶಲ್ಯದೊಂದಿಗೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಮುನ್ನುಗ್ಗುವುದು ಇಂದು ಅನಿವಾರ್ಯವಾಗಿದೆ ಎಂದು ಅಮೆರಿಕಾ ದೇಶದ ಸಿಟ್ರಿಕ್ಸ್ ಕಂಪನಿಯ ಹಿರಿಯ ತಾಂತ್ರಿಕ ಯೋಜನಾ ವ್ಯವಸ್ಥಾಪಕ ಮತ್ತು ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಸಿದ್ದನಗೌಡ ರಾಠಿ ಹೇಳಿದರು.
ನಗರದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಐಟಿ ಕ್ಷೇತ್ರದ ಆಧುನಿಕ ತಂತ್ರಜ್ಞಾನಗಳಾದ ಕ್ಲೌಡ್ ಮೈಗ್ರೇಶನ್, ಆರ್ಟಿಫಿಸಿಯಲ್ ಇಂಟೆಲಿಜೆನ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್ಚೆನ್, ಸೈಬರ್ ಸೆಕ್ಯೂರಿಟಿ, ಇಂತಹ ಆಧುನಿಕ ಜ್ಞಾನಗಳನ್ನು ಅಧ್ಯಯನ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉತ್ತಮ ಸಂವಹನ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಗುಣಾತ್ಮಕ ಸೇವೆ ಒದಗಿಸುವುದು ಐಟಿ ತಂತ್ರಜ್ಞರ ಜವಾಬ್ದಾರಿಯಾಗಿದೆ ಎಂದರು.
ಬಿವಿವಿಎಸ್ ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ| ಆರ್. ಎನ್. ಹೆರಕಲ್ ಮಾತನಾಡಿ, ತಂತ್ರಜ್ಞಾನವು ಇಂದು ಅಡುಗೆ ಮನೆಯಿಂದ ಹಿಡಿದು ಮಿಸಾಯಿಲ್ ಕ್ಷೇತ್ರದವರೆಗೆ ವ್ಯಾಪಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರೋಬೋಟ್ ಸರ್ಜರಿ, ಎಂಆರ್‌ಐ ಸ್ಕ್ಯಾನಿಂಗ್, 3ಡಿ ಪ್ರಿಂಟಿಂಗ್ ನಂತಹ ತಂತ್ರಜ್ಞಾನಗಳು ಜನರಿಗೆ ಬಹಳ ಸಹಕಾರಿಯಾಗುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ|ಎಸ್. ಎಸ್. ಇಂಜಗನೇರಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ನಾವಿಂದು ನಮ್ಮ ಹಿರಿಯರಿಗಿಂತ ಉತ್ತಮ ಗುಣಮಟ್ಟದ ಜೀವನ ಸಾಗಿಸುತ್ತಿದ್ದೇವೆ. ತಂತ್ರಜ್ಞಾನವು ಬದುಕಿನ ಎಲ್ಲ ಆಯಾಮಗಳಲ್ಲಿ ಪ್ರಮುಖ ಪಾತ್ರ ವಹಿಸಿ ಹಲವಾರು ಸಮಸ್ಯೆಗಳಿಂದ ಮುಕ್ತಗೊಳಿಸಿ ಜೀವನಮಟ್ಟವನ್ನು ಸಂತೋಷದಿಂದ ಸಾಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ನಡೆದಿದ್ದ ಯಶಸ್ವಿ ಅಣುನ್ಪೋಟ ಪರೀಕ್ಷೆ ಸ್ಮರಣಾರ್ಥ ಪ್ರತಿವರ್ಷ ಹಮ್ಮಿಕೊಳ್ಳುವ ಇಂತಹ ತಂತ್ರಜ್ಞಾನ ದಿನಾಚರಣೆಗಳು ಮುಂಬರುವ ಯುವ ತಂತ್ರಜ್ಞರಿಗೆ ಉನ್ನತ ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದರು.
ಡಾ|ಅನಿಲ್ ದೇವನಗಾವಿ ಪರಿಚಯಿಸಿದರು. ಅನುಷಾ ದೇಶಪಾಂಡೆ ಪ್ರಾರ್ಥಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ವಿ.ಬಿ. ಪಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಕ್ ಡಾ|ಪಿ.ಎನ್. ಕುಲಕರ್ಣಿ ಸ್ವಾಗತಿಸಿದರು. ಡಾ| ಛಾಯಾ ಲಕ್ಷ್ಮೀ ವಂದಿಸಿದರು.