Advertisement
ರಾಜ್ಯಕ್ಕೆ ಮುಂಗಾರು ಆಗಮಿಸಿ ಮೂರು ವಾರ ಕಳೆದರೂ ನಿರೀಕ್ಷೆಯಷ್ಟು ಮೋಡ ಸೃಷ್ಟಿಯಾಗದ ಪರಿಣಾಮ ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂಗಾರು ಕ್ಷೀಣಿಸಿದೆ. ಕರಾವಳಿಯಲ್ಲಿ ಶೇ. 31 ಮತ್ತು ಮಲೆನಾಡಿನಲ್ಲಿ ಶೇ. 42ರಷ್ಟು ಮಳೆ ಕೊರತೆ ಇದೆ. ಆದರೆ ರಾಜ್ಯದಲ್ಲಿ ಒಟ್ಟಾರೆಯಾಗಿ ಶೇ. 8ರಷ್ಟು ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ.
ಪೂರ್ವ ಮುಂಗಾರು ಮಳೆ ಕೊನೆಗೊಳ್ಳುವ ಸಂದರ್ಭದಲ್ಲಿ ಮಾನ್ಸೂನ್ ಮಳೆ ತರುವ ಮೋಡಗಳು ಭೂ ಮಧ್ಯ ರೇಖೆಯ ಮೂಲಕ ಬಂದು ಬಾನಂಗಳದಲ್ಲಿ ಶೇಖರವಾಗಬೇಕು. ಆದರೆ ಈ ಬಾರಿ ಮೋಡದ ಬದಲು ಒಣ ಗಾಳಿ ಮಾತ್ರ ಬೀಸಿದೆ. ಇದರಿಂದಾಗಿ ಪ್ರತೀ ವರ್ಷದಂತೆ ಮುಂಗಾರು ಅವಧಿಯಲ್ಲಿ ಸುರಿಯುವ ಜಿಟಿ ಜಿಟಿ ಮಳೆ ಇನ್ನೂ ಆರಂಭವಾಗಿಲ್ಲ. ಪೂರ್ವ ಮುಂಗಾರು ಮಾರುತಗಳ ಪ್ರಭಾವ ಇನ್ನೂ ಪೂರ್ಣವಾಗಿ ಕಡಿಮೆಯಾಗದ ಪರಿಣಾಮ ಸದ್ಯ ಸಣ್ಣ ಪ್ರಮಾಣದ ಮೋಡಗಳಷ್ಟೇ ಸೃಷ್ಟಿ ಆಗುತ್ತಿವೆ. ಇದೇ ಕಾರಣದಿಂದ ಬೇಸಗೆಯ ರೀತಿಯಲ್ಲೇ ಮಳೆ ಸುರಿಯುತ್ತಿದೆ.
Related Articles
ಹವಾಮಾನ ಇಲಾಖೆ ತಜ್ಞರ ಪ್ರಕಾರ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದರೆ ಮುಂದೆ ಆಗಮಿಸುವ ಮುಂಗಾರು ಮಾರುತ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ವಿಶ್ಲೇಷಕರ ಪ್ರಕಾರ ಪೂರ್ವ ಮುಂಗಾರು ಅವಧಿಯಲ್ಲಿ ಮಳೆ ಹೆಚ್ಚಾದಾಗ ಆಯಾ ಪ್ರದೇಶದಲ್ಲಿ ತೇವಾಂಶವೂ ಹೆಚ್ಚಾಗಿರುತ್ತದೆ. ಆಗ ಆ ಭಾಗದಲ್ಲಿ ವಾತಾವರಣದ ಉಷ್ಣತಾಂಶ ಕಡಿಮೆ ಹಾಗೂ ವಾತಾವರಣದ ಒತ್ತಡ ಹೆಚ್ಚಾಗಿ ಅಲ್ಲಿ ಮೋಡ ಆವರಿಸುವ ಸಾಧ್ಯತೆ ಕಡಿಮೆ. ಇದರಿಂದ ಈ ಪ್ರದೇಶ ದ್ವೀಪದ ರೀತಿ ಮಾರ್ಪಾಡಾಗಿ ಮಳೆಯಾಗುವ ಸಂಭವ ಕಡಿಮೆ ಇರುತ್ತದೆ. ಆದರೆ ಇಲ್ಲಿ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಮಳೆ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು.
Advertisement
“ಅನುಭವ ಜ್ಞಾನ’ ಏನು ಹೇಳುತ್ತದೆ?ಯಾವ ವರ್ಷ ಚಳಿಗಾಲದಲ್ಲಿ ಚಳಿ ಕಡಿಮೆ ಇರುತ್ತದೆಯೋ ಆ ವರ್ಷ ಮಳೆಯೂ ಕಡಿಮೆ ಎಂಬುದು ಕರಾವಳಿಯ ಕೃಷಿಕರ ಅನುಭವದ ಮಾತು. ಈ ವರ್ಷ ಚಳಿಗಾಲದಲ್ಲಿ ಚಳಿ ಕಡಿಮೆ ಇತ್ತು, ಈಗ ಮಳೆಯೂ ಕಡಿಮೆ ಇದೆ. ಕಳೆದ ವರ್ಷವೂ ಹೀಗೆಯೇ ಇತ್ತು ಎಂಬುದಾಗಿ ಸುಳ್ಯ ಭಾಗದ ಹಿರಿಯ ಕೃಷಿಕ ಎ.ಪಿ. ಸದಾಶಿವ ಮರಿಕೆ ಗಮನ ಸೆಳೆದಿದ್ದಾರೆ. ಕಳೆದ ವರ್ಷವೂ ಹೀಗಾಗಿತ್ತು
ಕಳೆದ ವರ್ಷ (2023) ರಾಜ್ಯ ಕರಾವಳಿಗೆ ತಡವಾಗಿ ಅಂದರೆ ಜೂ. 10ರಂದು ಮುಂಗಾರು ಪ್ರವೇಶ ಪಡೆದಿತ್ತು. ಮೊದಲ ದಿನ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದರೂ ಬಳಿಕದ ದಿನಗಳಲ್ಲಿ ಮಳೆ ಕ್ಷೀಣಿಸಿತ್ತು. ವ್ಯಾಪಕವಾಗಿ ಮೋಡ ಸೃಷ್ಟಿಯಾಗದ ಕಾರಣ ಹೀಗಾಗಿತ್ತು. ಮುಂಗಾರು ಆಗಮನದ ಎರಡು ವಾರಗಳ ಬಳಿಕ ಮತ್ತೆ ಮೋಡಗಳು ಸೃಷ್ಟಿಯಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಬಿರುಸಿನ ಮಳೆ ಆರಂಭವಾಗಿತ್ತು. ಅಲರ್ಟ್ ರೆಡ್: ಮಳೆ ಇಲ್ಲ !
ಭಾರತೀಯ ಹವಾಮಾನ ಇಲಾಖೆ ಕರಾವಳಿಗೆ “ರೆಡ್ ಅಲರ್ಟ್’ ಘೋಷಣೆ ಮಾಡಿದರೂ ದ.ಕ., ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿಲ್ಲ. ರೆಡ್ ಅಲರ್ಟ್ ಅವಧಿಯಲ್ಲಿ ಕರಾವಳಿಯಲ್ಲಿ 204.5 ಮಿ.ಮೀ.ಗೂ ಅಧಿಕ ಮಳೆಯಾಗಬೇಕು. ಮುಂಗಾರು ಆರಂಭದ ಬಳಿಕ ಜೂ. 9ರಂದು “ರೆಡ್ ಅಲರ್ಟ್’ ಘೋಷಿಸಲಾಗಿತ್ತು. ಈ ವೇಳೆ ಕೇವಲ 38 ಮಿ.ಮೀ. ಮಳೆ ಮಾತ್ರ ಸುರಿದಿದೆ. ಬಳಿಕ ಜೂ. 22ರಂದು “ರೆಡ್ ಅಲರ್ಟ್’ ಘೋಷಿಸಲಾಗಿದೆ. ಮುಂಗಾರು ಆಗಮನದ ವೇಳೆ ಜಿಟಿ ಜಿಟಿ ಮಳೆ ದಿನವಿಡೀ ಸುರಿಯುತ್ತದೆ. ಕೇರಳದಿಂದ ರಾಜ್ಯ ಕರಾವಳಿ ಭಾಗಕ್ಕೆ ಜೂನ್ 2ರಂದು ಮುಂಗಾರು ಪ್ರವೇಶ ಪಡೆದಿತ್ತು. ಆದರೆ ಆ ವೇಳೆ ಮಳೆ ತರುವ ಮೋಡಗಳು ಸೃಷ್ಟಿಯಾಗದೆ ಮಳೆಯ ಪ್ರಮಾಣ ಕಡಿಮೆ ಇತ್ತು. ಸದ್ಯ ಅದೇ ಪರಿಸ್ಥಿತಿ ಇದ್ದು, ಮುಂದಿನ ಕೆಲವು ದಿನಗಳಲ್ಲಿ ಮತ್ತೆ ಭಾರೀ ಮಳೆ ಆರಂಭವಾಗುವ ನಿರೀಕ್ಷೆ ಇದೆ.
– ಡಾ| ರಾಜೇಗೌಡ, ಹವಾಮಾನ ವಿಜ್ಞಾನಿ, ಬೆಂಗಳೂರು - ನವೀನ್ ಭಟ್ ಇಳಂತಿಲ