ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರ ಆಪ್ತ ಸ್ನೇಹಿತೆ, ಪರಪ್ಪನ ಅಗ್ರಹಾರದಲ್ಲಿರುವ “ಮೌನವ್ರತಧಾರಿ’ ಶಶಿಕಲಾ ಅವರ ಬಾಯಿ ಬಿಡಿಸಲು ಆದಾಯ ತೆರಿಗೆ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ಕಳೆದ ನ.7 ರಂದು ಶಶಿಕಲಾಗೆ ಸೇರಿದ 187 ಸ್ಥಳಗಳಲ್ಲಿ ಭರ್ಜರಿ “ಆಪರೇಶನ್ ಕ್ಲೀನ್ ಮನಿ’ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು 1400 ಕೋಟಿ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದ್ದರು. ಈ ಬಗ್ಗೆ ಬೆಂಗಳೂರಿನ ಜೈಲಿನಲ್ಲಿರುವ ಶಶಿಕಲಾ ಬಳಿ ಹೇಳಿಕೆ ಪಡೆಯಲು ಆಗಿನಿಂದಲೂ ಐಟಿ ಅಧಿಕಾರಿಗಳು ಯತ್ನಿಸುತ್ತಿದ್ದರೂ ಅವರು ಒಂದಲ್ಲಾ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.
ಅಲ್ಲದೆ ಜನವರಿ ಮೊದಲ ವಾರವೇ ಪರಪ್ಪನ ಅಗ್ರಹಾರಕ್ಕೆ ಸಮನ್ಸ್ ಕಳುಹಿಸಿರುವ ಅಧಿಕಾರಿಗಳು, ಶಶಿಕಲಾ ಉತ್ತರಕ್ಕಾಗಿ ಕಾಯುತ್ತಲೇ ಇದ್ದಾರೆ. ವಿಚಿತ್ರವೆಂದರೆ, ಅವರು ಫೆ.10ರ ವರೆಗೆ ಮೌನವ್ರತ ತಾಳಿದ್ದೇನೆ. ಯಾವುದೇ ಕಾರಣಕ್ಕೂ ಬಾಯಿ ಬಿಡುವುದಿಲ್ಲವೆಂದು ಹೇಳಿದ್ದಾರೆ.
ಐಟಿ ಅಧಿಕಾರಿಗಳಿಗೆ ಸಂದಿಗ್ಧಕ್ಕೆ ಕಾರಣವಾಗಿರುವುದೂ ಇದೇ ಅಂಶ. ಜಯಲಲಿತಾ ಅವರ ವೇದ ನಿಲಯಂನಲ್ಲಿ ಸಿಕ್ಕಿರುವ ಭಾರಿ ಪ್ರಮಾಣದ ದಾಖಲೆಗಳು, ಆಸ್ತಿ ಪತ್ರಗಳ ಬಗ್ಗೆ ಮಾಹಿತಿ ಪಡೆಯಬೇಕಾದರೆ ಶಶಿಕಲಾ ಅವರ ಹೇಳಿಕೆ ಪಡೆಯಲೇಬೇಕು. ಆದರೆ, ಪರಪ್ಪನ ಅಗ್ರಹಾರದಲ್ಲೇ ಇದ್ದುಕೊಂಡು ಮಾಹಿತಿ ನೀಡದೇ ತಪ್ಪಿಸಿಕೊಳ್ಳುತ್ತಿರುವ ಶಶಿಕಲಾ ಐಟಿ ಅಧಿಕಾರಿಗಳಿಗೆ ತಲೆನೋವಾಗಿದ್ದಾರೆ.
ಹೀಗಾಗಿ, ವಿಧಿ ಇಲ್ಲದೇ ಫೆ.10ರ ವರೆಗೆ ಕಾಯಲು ನಿರ್ಧರಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಂತರವೇ ಶಶಿಕಲಾ ಇರುವ ಕಾರಾಗೃಹಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿಗೆ ದಿನಕರನ್ ಭೇಟಿ
ಈ ಬೆಳವಣಿಗೆಗಳ ಮಧ್ಯೆ ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಅವರು, ಮಂಗಳವಾರ ಪರಪ್ಪನ ಅಗ್ರಹಾರಕ್ಕೆ
ಆಗಮಿಸಿ ಭೇಟಿ ಮಾಡಿದ್ದಾರೆ. ಈ ವೇಳೆ ಮೌನವ್ರತ ಧರಿಸಿರುವ ಶಶಿಕಲಾ ದಿನಕರನ್ ಅವರನ್ನು ಭೇಟಿಯಾದರೋ ಅಥವಾ ಇಲ್ಲವೋ ಎಂಬುದು ತಿಳಿದುಬಂದಿಲ್ಲ.