ಚೆನ್ನೈ : ಕೇಂದ್ರ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ಅವರ ಪತ್ನಿ ನಳಿನಿ, ಪುತ್ರ ಕಾರ್ತಿ ಮತ್ತು ಸೊಸೆ ಶ್ರೀನಿಧಿ ಇವರು ತಮ್ಮ ವಿದೇಶಿ ಆಸ್ತಿಪಾಸ್ತಿಗಳನ್ನು ಬಹಿರಂಗಪಡಿಸದಿರುವ ಆರೋಪದ ಮೇಲೆ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾಳಧನ ಕಾಯಿದೆಯಡಿ ನಾಲ್ಕು ಚಾರ್ಜ್ ಶೀಟ್‌ಗಳನ್ನು ದಾಖಲಿಸಿದೆ.
ಕಾಳ ಧನ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಸೊತ್ತು) ಕಾಯಿದೆಯ ಸೆ.50ರ ಪ್ರಕಾರ ಮತ್ತು 2015ರ ತೆರಿಗೆ ಹೇರಿಕೆ ಕಾಯಿದೆಯಡಿ ಆದಾಯ ತೆರಿಗೆ ಇಲಾಖೆ ಈ ನಾಲ್ಕು ಚಾರ್ಜ್ ಶೀಟ್ ಅಥವಾ ಪ್ರಾಸಿಕ್ಯೂಶನ್ ಕಂಪ್ಲೇಂಟ್‌ಗಳನ್ನು ಚೆನ್ನೈನಲ್ಲಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ನಳಿನಿ ಚಿದಂಬರಂ, ಕಾರ್ತಿ ಮತ್ತು ಶ್ರೀನಿಧಿ ಅವರು ಬ್ರಿಟನ್‌ನ ಕೇಂಬ್ರಿಜ್‌ನಲ್ಲಿರುವ ತಮ್ಮ 5.37 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಅಮೆರಿಕದಲ್ಲಿರುವ 3.28 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಆಂಶಿಕವಾಗಿ ಇಲ್ಲವೇ ಪೂರ್ತಿಯಾಗಿ ಬಹಿರಂಗಪಡಿಸದಿರುವುದಕ್ಕೆ ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿದೆ.
ಚಿದಂಬರಂ ಕುಟುಂಬ ಸದಸ್ಯರು ತಮ್ಮ ಈ ಹೂಡಿಕೆಗಳನ್ನು ತೆರಿಗೆ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿಲ್ಲ; ಅಂತೆಯೇ ಕಾರ್ತಿ ಅವರ ಜಂಟಿ ಒಡೆತನದ ಚೆಸ್ ಗ್ಲೋಬಲ್ ಅಡ್‌ವೈಸರಿ ಸಂಸ್ಥೆ ಕಾಳಧನ ಕಾಯಿದೆಯ ಉಲ್ಲಂಘನೆ ಮಾಡಿದೆ ಎಂದು ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿದೆ.
ವಿದೇಶದಲ್ಲಿ ರಹಸ್ಯವಾಗಿ ಅಕ್ರಮ ಸಂಪತ್ತು ಕೂಡಿಟ್ಟಿರುವ ಭಾರತೀಯರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಕಪ್ಪು ಹಣದ ವಿರುದ್ಧ ಕಾನೂನು ಅಭಿಯಾನವನ್ನು ಕೈಗೊಳ್ಳಲು ಮೋದಿ ಸರಕಾರ 2015ರಲ್ಲಿ ಈ ಕಾಯಿದೆಗಳನ್ನು ಜಾರಿಗೆ ತಂದಿತ್ತು.
ಐಟಿ ಇಲಾಖೆ ಈಚೆಗೆ ಕಾರ್ತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಸಂಬಂಧ ನೊಟೀಸ್ ಜಾರಿ ಮಾಡಿದ್ದು ಅದನ್ನುಅವರು ಮದ್ರಾಸ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.