Advertisement

ಹೇಳದೆ, ಕೇಳದೆ ಕೆಲಸ ಕಸಿಯುವ ಐಟಿ ಸಂಸ್ಥೆಗಳು

11:25 AM Jul 30, 2017 | Team Udayavani |

ಬೆಂಗಳೂರು: ಮುನ್ಸೂಚನೆ ನೀಡದೆ, ಸೂಕ್ತ ಪರಿಹಾರವನ್ನೂ ಕೊಡದೆ ಏಕಾಏಕಿ ಕೆಲಸದಿಂದ ತೆಗೆಯುತ್ತಿರುವ ಐಟಿ ಕಂಪನಿಗಳ ಕ್ರಮವನ್ನು ಖಂಡಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಐಟಿ ಉದ್ಯೋಗಿಗಳು ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಐಟಿ ಕಂಪನಿಗಳಲ್ಲಿ ಉದ್ಯೋಗ ಭದ್ರತೆ ಕಲ್ಪಿಸಲು ಸೂಕ್ತ ನಿಯಮಾವಳಿ ರೂಪಿಸಬೇಕು ಎಂದು ಒತ್ತಾಯಿಸಿದರು.

Advertisement

ಕೆಲಸ ಕಳೆದುಕೊಂಡಿರುವ ಸಾವಿರಾರು ಐಟಿ ಉದ್ಯೋಗಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಪ್ರತಿಭಟನೆ ನಡೆಸಿದರು. ಈ ವೇಳೆ ಟೆಕ್ಕಿಗಳು ವೃತ್ತಿ ಜೀವನದ ಸಮಸ್ಯೆಯ ಅಳಲು ತೋಡಿಕೊಂಡರು. ಐಟಿ ಕಂಪನಿ ಹಾಲಿ ಉದ್ಯೋಗಿಗಳು, ಸದ್ಯದಲ್ಲೇ ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಐಟಿ ಕಂಪನಿಗಳಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿದವರನ್ನು ದೇಶದಾದ್ಯಂತ ಯಾವುದೇ ಕಾರಣ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಕಾರಣವಿಲ್ಲದೇ ರಾಜಿನಾಮೆ ನೀಡುವಂತೆ ಒತ್ತಡ ಹೇರುತ್ತಿರುವುದರಿಂದ ಸೇವಾ ಭದ್ರತೆ ಇಲ್ಲದ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಐಟಿ ಕ್ಷೇತ್ರದಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿದವರು ಉತ್ತಮ ವೇತನ ಪಡೆಯುತ್ತಿರುತ್ತಾರೆ. ಅವರನ್ನು ದಿಢೀರ್‌ ಕೆಲಸದಿಂದ ತೆಗೆದರೆ ಜೀವನ ನಿರ್ವಹಣೆ ಮೇಲೆ ಪರಿಣಾಮ ಬೀರಲಿದೆ. ಉದ್ಯೋಗ ಭದ್ರತೆಯ ನಿರೀಕ್ಷೆಯಲ್ಲಿ ಪಡೆದ ಸಾಲಗಳ ಕಂತು ಪಾವತಿಗೂ ಪರದಾಡಬೇಕಾಗುತ್ತದೆ. ಕೆಲವರು ಮನೆ, ಫ್ಲ್ಯಾಟ್‌ಗಳನ್ನೇ ಉಳಿಸಿಕೊಳ್ಳದೆ ಮಾರಾಟ ಮಾಡಿ ತನ್ನ ಸ್ವಂತ ಊರುಗಳಲ್ಲಿ ನೆಲೆಸಲಾರಂಭಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸಾವಿರಾರು ಮಂದಿ ತೊಂದರೆಗೆ ಸಿಲುಕಲಿದ್ದಾರೆ ಎಂದು ಹೇಳಿದರು.

ಕಾಡುತ್ತಿರುವ ಉದ್ಯೋಗ ಅಭ್ರತೆ: ಐಟಿ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಎ.ಸಿ.ಕುಮಾರಸ್ವಾಮಿ, “ಕಳೆದ ಐದು ತಿಂಗಳಲ್ಲಿ ದೇಶಾದ್ಯಂತ 1.20 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ರಾಜ್ಯದಲ್ಲೂ 40,000ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಹಾಲಿ ಐಟಿ ಉದ್ಯೋಗಿಗಳು ಅಭದ್ರತೆಯಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ,’ ಎಂದು ಹೇಳಿದರು.

Advertisement

ಮಧ್ಯರಾತ್ರಿ ದಿಢೀರ್‌ ಕರೆ ಮಾಡಿ ಮರುದಿನ ರಾಜಿನಾಮೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಸಂದರ್ಭದಲ್ಲಿ ಕಾರ್ಮಿಕ ಕಾಯ್ದೆ ನಿಯಮಗಳು ಪಾಲನೆಯಾಗುತ್ತಿಲ್ಲ. ಕೆಲಸದಿಂದ ತೆಗೆಯಬೇಕಾದ ಅನಿವಾರ್ಯತೆ ಇದ್ದರೆ ಉದ್ಯೋಗಿಗೆ ಮೂರು ತಿಂಗಳ ನೋಟಿಸ್‌ ನೀಡಿ ಆರು ತಿಂಗಳ ವೇತನ ಭತ್ಯೆಯನ್ನಾದರೂ ನೀಡಬೇಕು. ದಿಢೀರ್‌ ಕೆಲಸದಿಂದ ತೆಗೆಯುವುದರಿಂದ ನಿರುದ್ಯೋಗ ಸಮಸ್ಯೆ ಮಾತ್ರವಲ್ಲದೇ ಕೌಟುಂಬಿಕ ಸಮಸ್ಯೆಗಳು ತಲೆದೋರಲಾರಂಭಿಸಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಿರುದ್ಯೋಗ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಜಾಗೃತಿ: ಐಟಿ ಉದ್ಯೋಗಿಗಳನ್ನು ವಿನಾಕಾರಣ ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಐಟಿ ಸಚಿವರ ಗಮನಕ್ಕೆ ತಂದು ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗುವುದು. ಅಲ್ಲಿಯೂ ಸ್ಪಂದನೆ ಸಿಗದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಐಟಿ ಕ್ಷೇತ್ರದಲ್ಲಿ ಉದ್ಯೋಗ ಅಭದ್ರತೆಯಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಹೋರಾಟಕ್ಕೆ ಆಪ್‌ ಬೆಂಬಲ: ಹೋರಾಟ ಬೆಂಬಲಿಸಿ ಮಾತನಾಡಿದ ಆಪ್‌ ಮುಖಂಡ ಪೃಥ್ವಿರೆಡ್ಡಿ, “ಬೆಂಗಳೂರಿನಲ್ಲಿ ಐಟಿ ಕ್ಷೇತ್ರವನ್ನು ನೆಚ್ಚಿಕೊಂಡು 10 ಲಕ್ಷಕ್ಕೂ ಹೆಚ್ಚು ಮಂದಿಯಿದ್ದು, ಬಹಳಷ್ಟು ಮಂದಿ ಉದ್ಯೋಗ ಅಭದ್ರತೆಯಿಂದ ಒತ್ತಡಕ್ಕೆ ಸಿಲುಕಿದ್ದಾರೆ. ಈ ನಡುವೆ ಸರ್ಕಾರದಿಂದ ನೌಕರರಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆದಿರುವುದರಿಂದ ಅನೇಕರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಹೋರಾಟ ಉಗ್ರ ಸ್ವರೂಪ ಪಡೆಯಲಿದೆ’ ಎಂದು ಹೇಳಿದರು.

ರಾಜ್ಯದಲ್ಲಿ ಉಚಿತ ಭೂಮಿ, ತೆರಿಗೆ ವಿನಾಯಿತಿ ಸೇರಿದಂತೆ ನಾನಾ ಸೌಲಭ್ಯಗಳನ್ನು ಪಡೆಯುತ್ತಿರುವ ಐಟಿ ಸಂಸ್ಥೆಗಳು ಏಕಾಏಕಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಖಂಡನೀಯ. ಅಮೆರಿಕದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುತ್ತಿದ್ದರೆ, ಭಾರತದಲ್ಲಿ ಐಟಿ ಉದ್ಯೋಗಿಗಳನ್ನು ಮನಬಂದಂತೆ ವಜಾ ಮಾಡಲಾಗುತ್ತಿದೆ. ಅಚ್ಚೇ ದಿನ್‌ ಎಲ್ಲಿ ಹೋಗಿದೆ. ಐದು ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಏನಾಯಿತು ಎಂದು ಪ್ರಶ್ನಿಸಿದರು.

ಐಟಿ ಕಂಪನಿಗಳು ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕುತ್ತಿರುವ ಬಗ್ಗೆ ಐಟಿ ಉದ್ಯೋಗಿಗಳ ಸಂಘ ಮನವಿ ಸಲ್ಲಿಸಿದೆ. ಈ ಸಂಬಂಧ ಕಾರ್ಮಿಕ ಸಚಿವರೊಂದಿಗೂ ಚರ್ಚಿಸಲಾಗುತ್ತಿದೆ. ಕೆಲ ಪ್ರತಿಷ್ಠಿತ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಕಾರ್ಮಿಕರ ಹಿತಕ್ಕೂ ಧಕ್ಕೆಯಾಗದಂತೆ ಹಾಗೂ ಕಂಪನಿಗಳ ವ್ಯವಹಾರ ಮುಂದುವರಿಕೆ, ಹೊಸ ಹೂಡಿಕೆಗೂ ಯಾವುದೇ ರೀತಿಯಲ್ಲಿ ಹಾನಿಯಾಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಗಮನ ಹರಿಸಲಾಗಿದೆ.
-ಪ್ರಿಯಾಂಕ್‌ ಖರ್ಗೆ, ಐಟಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next