ಚಿತ್ರದುರ್ಗ : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿರಿಸಿ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ಭಾರೀ ದಾಳಿಯ ಬಗ್ಗೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ನ್ಯಾ.ಹೆಗ್ಡೆ ”ಖಚಿತ ಮಾಹಿತಿ ಇದ್ದು ದಾಳಿ ಮಾಡಿದರೆ ತಪ್ಪಲ್ಲ , ಅಧಿಕೃತ ಮಾಹಿತಿ ಇದ್ದು ಕಾನೂನು ಪ್ರಕಾರ ದಾಳಿ ಮಾಡುವುದು ಸರಿ, ಆದರೆ ಸಮಯ ನೋಡಿದರೆ ಯಾವುದೋ ಒಂದು ಉದ್ದೇಶ ಇದೆ ಎಂದು ಕಾಣುತ್ತದೆ” ಎಂದರು.
”ದಾಳಿ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.ನೀವೆ ಹೇಳಿದಂತೆ ಯಾರದ್ದೋ ಮನೆಯಲ್ಲಿ 11 ಕೋಟಿ ಸಿಕ್ಕಿದೆ ಅಂತ. ಅದರ ಅರ್ಥ ದಾಳಿ ಮಾಡಿದವರಿಗೆ ಮಾಹಿತಿ ಇತ್ತು ಎನ್ನುವುದಲ್ಲವೆ” ಎಂದು ಪ್ರಶ್ನಿಸಿದರು.
‘ರೆಸಾರ್ಟ್ ಸಂಸ್ಕೃತಿ ಪ್ರಾರಂಭಿಸಿದ್ದು ಬಿಜೆಪಿ, ಈಗ ಕಾಂಗ್ರೆಸ್ ಶುರು ಮಾಡಿದೆ’ ಎಂದು ಕಿಡಿ ಕಾರಿದರು.
ಆಪರೇಷನ್ ಕಮಲ ಭೀತಿಯಿಂದ ಗುಜರಾತ್‌ನ ಕಾಂಗ್ರೆಸ್ ಶಾಸಕರು ತಂಗಿದ್ದ ಬಿಡದಿಯ ಈಗಲ್ ಟನ್ ರೆಸಾರ್ಟ್ ಸೇರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದ 36 ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.