Advertisement
ಈ ಪ್ರಕರಣ ರಾಜ್ಯ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದು, ಸಿಎಂ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮನ್ನೇ ಗುರಿಯಾಗಿಸಿಕೊಂಡು ಮಾಡುತ್ತಿರುವ ಆರೋಪಗಳಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತ್ರ ವ್ಯಗ್ರರಾಗಿದ್ದಾರೆ. ಇದೆಲ್ಲದರ ಮಧ್ಯೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಎಳೆತರುವ ಪ್ರಯತ್ನ ನಡೆಸಿದ್ದಾರೆ. ಜತೆಗೆ ಈ ಬಗ್ಗೆ ಇಡಿ ಹಾಗೂ ಸಿಬಿಐ ಎರಡೂ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಕಮಿಷನ್ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಯಾರಾದರೂ ನೋಡಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಸರಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದಾಗ ನೀವು ನೋಡಿದ್ದೀರಾ? ಈ ಪ್ರಕರಣದಲ್ಲಿ ನಿಮಗೆ ಸಂಬಂಧಪಟ್ಟವರ ಪಾತ್ರ ಇಲ್ಲದಿದ್ದರೆ, ನೀವೇ ನೇಮಿಸಿರುವ ನ್ಯಾ| ನಾಗಮೋಹನ್ ದಾಸ್ ಆಯೋಗಕ್ಕೆ ಈ ಪ್ರಕರಣವನ್ನು ತನಿಖೆಗೆ ಒಪ್ಪಿಸಿ ಇಲ್ಲವೇ ಲೋಕಾಯುಕ್ತಕ್ಕೆ ನೀಡಿ ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. ರಾಜ್ಯ ಸರಕಾರ ಬಂದಾಗಿನಿಂದ ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರ ಇದು. ಗ್ರಾಮದಿಂದ ಹಿಡಿದು ವಿಧಾನಸೌಧದವರೆಗೂ ಲಂಚದ ಹಾವಳಿ ನಡೆಯುತ್ತಿದೆ. ಬಾಕಿ ಹಣ ಬಿಡುಗಡೆಯಾದ ತತ್‌ಕ್ಷಣವೇ ಗುತ್ತಿಗೆದಾರನ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿರುವುದು ಇದೇ ಮೊದಲು. ಇನ್ನಷ್ಟು ಜನರ ಮನೆಮೇಲೆ ದಾಳಿ ಮಾಡಿದರೆ ಇನ್ನಷ್ಟು ಕಮಿಷನ್ ಹಣ ಹೊರ ಬರಲಿದೆ ಎಂದು ಆರೋಪಿಸಿದ್ದಾರೆ.
Related Articles
ಗುತ್ತಿಗೆದಾರರ ಸಂಘದವರು ನಮ್ಮ ಮೇಲೆ ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡಿದ್ದರು. ಈಗ ಕಂಟ್ರಾಕ್ಟರ್ ಅಸೋಸಿಯೇಶನ್ ಸರಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಗುತ್ತಿಗೆದಾರರು ಮತ್ತು ಸರಕಾರ ಒಂದಾಗಿ ರಾಜ್ಯ ಲೂಟಿ ಮಾಡಿದ್ಧಾರೆ. ಅಕ್ರಮ ಹಣ ಸಂಗ್ರಹದ ಹಿನ್ನೆಲೆಯಲ್ಲಿ ಹಣ ಲೇವಾದೇವಿ ಕಾಯ್ದೆ ಅನ್ವಯ ಇಡಿ ತನಿಖೆ ಆಗಬೇಕು. ಭ್ರಷ್ಟಾಚಾರ ಕಾಯ್ದೆಯಡಿ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
Advertisement
ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ರೂ. ಲಭಿಸಿದ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಎಲ್ಲೆಲ್ಲಿಗೆ ಎಷ್ಟೆಷ್ಟು? ಪಂಚರಾಜ್ಯ ಚುನಾವಣೆಗೆ ಹಣ ಕೊಡುವುದಾಗಿ ಎಐಸಿಸಿ ಜತೆಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶಕ್ಕೆ 600 ಕೋಟಿ ರೂ., ರಾಜಸ್ಥಾನಕ್ಕೆ 200 ಕೋಟಿ ರೂ., ಛತ್ತೀಸಗಡಕ್ಕೆ 200 ಕೋಟಿ ರೂ., ತೆಲಂಗಾಣಕ್ಕೆ 600 ಕೋಟಿ ರೂ. ಮತ್ತು ಮಿಜೋರಾಂಗೆ 100 ಕೋಟಿ ರೂ. ಕೊಟ್ಟು ಸೋನಿಯಾ ಗಾಂಧಿಯವರ ಶಹಬ್ಟಾಸ್‌ಗಿರಿ ಪಡೆಯಲು ಕಾಂಗ್ರೆಸ್ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು. ಗುತ್ತಿಗೆದಾರರಿಗೆ ನೀಡಲು ಬಾಕಿ ಇದ್ದ ಹಣವನ್ನು 5 ರಾಜ್ಯಗಳ ಚುನಾವಣೆ ಹೊಸ್ತಿಲಲ್ಲಿ ಯಾಕೆ ಬಿಡುಗಡೆ ಮಾಡಿದ್ದಾರೆ? ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ, ವಿಷ ಕುಡಿಯುವ ಬೆದರಿಕೆ ಹಾಕಿದಾಗಲೂ ಸರಕಾರ ಹೆದರಿರಲಿಲ್ಲ. 5 ರಾಜ್ಯಗಳ ಚುನಾವಣೆ ಬಂದ ಕೂಡಲೇ ಕಾಂಚಾಣ ಆಟ ಆರಂಭವಾಯಿತು. ಅಂಬಿಕಾಪತಿ ಮನೆಯಲ್ಲಿ ಹಣ ಶೇಖರಿಸಿ ತೆಲಂಗಾಣಕ್ಕೆ ಕಳಿಸಲು ತಯಾರಿ ನಡೆದಿತ್ತೆಂದು ತೆಲಂಗಾಣದ ಹಣಕಾಸು ಸಚಿವರೂ ನೇರ ಆಪಾದನೆ ಮಾಡಿದ್ದಾರೆ ಎಂದರು. ಹಣ ಬಿಜೆಪಿಗೆ ಸೇರಿದ್ದು ಎಂದು ಸಚಿವ ಎಂ.ಬಿ.ಪಾಟೀಲರ ಆರೋಪಕ್ಕೆ ತಿರುಗೇಟು ನೀಡಿ ಬಿಡುಗಡೆ ಮಾಡಿದ್ದು ನಿಮ್ಮ ಸರಕಾರ, ಸಿಕ್ಕಿ ಹಾಕಿಕೊಂಡವರೂ ನಿಮ್ಮದೇ ಮಾಜಿ ಜನಪ್ರತಿನಿಧಿ. ಕೆಂಪಣ್ಣ ಹಾಗೂ ಇನ್ನಿತರ ಜನಪ್ರತಿನಿಧಿಗಳು ಈ ಹಿಂದೆ ನಮ್ಮ ಸರಕಾರದ ವಿರುದ್ಧ ಕಾಂಗ್ರೆಸ್ ಏಜೆಂಟ್‌ಗಳ ರೀತಿ ಆರೋಪ ಹೊರಿಸಿದ್ದರು. ಈಗ ಅವರ ಪ್ರತಿನಿಧಿಗಳೇ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿದರು.