ಕೆಂಗೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 94ಸಿಸಿ ಯೋಜನೆ ಜಾರಿಗೆ ತಂದು ಸರ್ಕಾರಿ ಜಮೀನಿನಲ್ಲಿ ಹತ್ತಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುವವರಿಗೆ ಮನೆ ಹಕ್ಕುಪತ್ರ ನೀಡಬೇಕೆಂದು ಕಾನೂನು ಜಾರಿಗೆ ತಂದ ಪರಿಣಾಮ ಎಲ್ಲರಿಗೂ ಹಕ್ಕುಪತ್ರ ಸಿಕ್ಕಿದೆ ಎಂದು ಶಾಸಕ ಮುನಿರತ್ನ ಹೇಳಿದರು.
ಹೊರವರ್ತುಲ ರಸ್ತೆಯ ಅಂಬೇಡ್ಕರ್ ಕಾಲೇಜು ಮುಂಭಾಗದ ಕೆಂಗುಂಟೆ ಬಡಾವಣೆಯ 250 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ತಿಂಗಳೊಳಗೆ ಉಳಿದ 350 ಕುಟುಂಬಗಳಿಗೂ ಹಂತ ಹಂತವಾಗಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಸತಿ ರಹಿತ ಎಲ್ಲ ವರ್ಗದ ಜನರಿಗೆ ಕೊಳೆಗೇರಿ ಅಭಿವೃದ್ಧಿ ಮಂಡಲಿ, ರಾಜೀವ್‌ಗಾಂಧಿ ವಸತಿ ನಿಗಮ, ನಗರೋತ್ಥಾನ ಇಲಾಖೆ, ಬಿಬಿಎಂಪಿ ವತಿಯಿಂದ 8500 ಮನೆಗಳನ್ನು ನಿರ್ಮಿಸಿ ಎಲ್ಲರಿಗೂ ಹಸ್ತಾಂತರ ಮಾಡಲಾಗಿದೆ ಎಂದರು.
ಜ್ಞಾನಭಾರತಿ ವಾರ್ಡ್ ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷೆ ರಾಜಕುಮಾರಿ ಮಾತನಾಡಿ, ಕಷ್ಟದ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದ ಇಲ್ಲಿನ ನಾಗರಿಕರಿಗೆ ಹಕ್ಕು ಪತ್ರಗಳು ಅಭಯ ನೀಡಿದಂತಾಗಿದೆ ಎಂದರು. ವಾರ್ಡ್ ಸಮಿತಿ ಅಧ್ಯಕ್ಷ ಎಂ.ಮಂಜುನಾಥ್ ಮಾತನಾಡಿದರು. ಶಾಸಕ ಮುನಿರತ್ನ, ಸಂಸದ ಡಿ.ಕೆ.ಸುರೇಶ್, ವಾರ್ಡ್ ಅಧ್ಯಕ್ಷ ಎಂ.ಮಂಜುನಾಥ್, ಪಾಲಿಕೆ ಸದಸ್ಯೆ ಜಿ.ಡಿ.ತೇಜಸ್ವಿನಿ ಸೀತಾರಾಮಯ್ಯ ಅವರ ಕಾರ್ಯ ಅಭಿನಂದನೀಯ ಎಂದರು.
ಕಾಂಗ್ರೆಸ್‌ನಿಂದ ಸೌಲಭ್ಯ: ಪುಟ್ಟಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ನಮಗೆ ಯಾವುದೆ ರೀತಿಯ ಮನೆಯ ದೃಢೀಕರಣ ಮತ್ತು ಹಕ್ಕುಪತ್ರಗಳು ಸಿಕ್ಕಿರಲಿಲ್ಲ. ಈ ಭಾಗದ ಶಾಸಕರಾಗಿದ್ದ ಆರ್.ಅಶೋಕ್, ಎಂ.ಶ್ರೀನಿವಾಸ್ ಅವರನ್ನು ಬೆಂಬಲಿಸಿಕೊಂಡು 25 ವರ್ಷಗಳಿಂದ ಬರುತ್ತಿದ್ದ ನಮಗೆ ಯಾವುದೇ ಸವಲತ್ತು ಸಿಕ್ಕಿರಲಿಲ್ಲ.
ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಮನೆಗಳ ಹಕ್ಕುಪತ್ರ, ಮನೆಯ ನೋಂದಣಿ, ಡಾಂಬರೀಕರಣ, ಸಿಮೆಂಟ್ ರಸ್ತೆ, ಕಾವೇರಿ ಕುಡಿಯುವ ನೀರನ್ನು ಶಾಸಕ ಮುನಿರತ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದೆ ಎಂದು ರತ್ನಮ್ಮ, ಲಕ್ಷ್ಮಮ್ಮ, ಮುನಿಯಮ್ಮ ಅವರು ಹೇಳಿದರು.