Advertisement

ನಕಲಿ ಹಕ್ಕುಪತ್ರ ನೀಡಿ ವಂಚನೆ: ಪುರಸಭೆಯಲ್ಲಿ ಕೋಲಾಹಲ

04:59 PM Jul 14, 2018 | |

ಅಣ್ಣಿಗೇರಿ: ಪಟ್ಟಣದ 5ನೇ ವಾರ್ಡ್‌ನಲ್ಲಿ ವಾಸವಾಗಿರುವ 22 ಬಡ ಕುಟುಂಬಗಳಿಗೆ ನಕಲಿ ಹಕ್ಕುಪತ್ರ ನೀಡಿ ವಂಚಿಸಲಾಗಿದೆ. ಈ ವಿಷಯ ಇತ್ಯರ್ಥವಾಗುವ ವರೆಗೆ ಸಾಮಾನ್ಯ ಸಭೆಯ ಕಲಾಪಗಳನ್ನು ನಡೆಸುವಂತಿಲ್ಲ ಎಂದು ಕೆಲ ಸದಸ್ಯರು ಪಟ್ಟು ಹಿಡಿದ ಘಟನೆ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ನ ಮಂಜುನಾಥ ಮಾಯಣ್ಣವರ, ಭೀಮಪ್ಪ ದ್ಯಾವನೂರು, ಬುಡ್ಡೇಶರೀಫ ನದೀಮುಲ್ಲಾ, ಡಿ.ಎಲ್‌. ಅಡಕಾವು, ಪುರಸಭೆ ಉಪಾಧ್ಯಕ್ಷೆ ಬಿಜೆಪಿಯ ಸುಧಾ ಜಂತ್ಲಿ, ಈಶ್ವರಪ್ಪ ಹೊಂಬಳ, ನಾಗರತ್ನ ಅಕ್ಕಿ, ಬಿಎಸ್‌ಆರ್‌ ಕಾಂಗ್ರೆಸ್‌ನ ವೀರೇಶ ಹೊಂಬಳಮಠ, ಜೆಡಿಎಸ್‌ನ ಹೇಮಚಂದ್ರ ಕಡೇಮನಿ ಕಲಾಪ ಆರಂಭಿಸಲು ಅವಕಾಶ ಕೊಡಲಿಲ್ಲ. ನಕಲಿ ಹಕ್ಕುಪತ್ರದ ಆರೋಪ ಮಾಡಿ ಕೋಲಾಹಲ ಸೃಷ್ಟಿಸಿದರು. ಸಭಾ ಮಧ್ಯದಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟನೆಗೆ ಇಳಿದರು. ಬೇಕೆಂದರಲ್ಲಿ ಸಹಿ ಮಾಡ್ತೀರಾ?: ಪುರಸಭೆ ಅಧ್ಯಕ್ಷೆ ರೂಪಾ ಕಲ್ಲೂರ ಮಾತನಾಡಿ, ಈ ಹಕ್ಕುಪತ್ರಗಳನ್ನು ಆಗಿನ ಶಾಸಕ ಎನ್‌.ಎಚ್‌. ಕೋನರಡ್ಡಿ ನೀಡಿದ್ದಾರೆ. ಅವರಿಗೆ ಗೌರವ ನೀಡಿ ತಾವು ಆ ಹಕ್ಕುಪತ್ರಗಳಿಗೆ ಸಹಿ ಹಾಕಿರುವುದಾಗಿ ತಿಳಿಸಿದರು.

ಹಾಗಾದರೆ ಅವರು ಹೇಳಿದರೆಂದು ಯಾವುದಕ್ಕೆ ಬೇಕಾದರೂ ಸಹಿ ಹಾಕುತ್ತೀರಾ ಎಂದು ಮರು ಪ್ರಶ್ನೆ ಎಸೆದ ಮಾಯಣ್ಣವರ, ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕಿಸುವ ಸಲುವಾಗಿ ಈ ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿ ನೀಡಿದ್ದು ಗಂಭೀರ ಅಪರಾಧ ಎಂದು ಆರೋಪಿಸಿದರು. ಮೇಲ್ನೋಟಕ್ಕೆ ಖೊಟ್ಟಿ: ನಕಲಿ ಹಕ್ಕುಪತ್ರ ವಿಷಯಕ್ಕೆ ಸಂಬಂಧಿಸಿ ಪುರಸಭೆ ಮುಖ್ಯಾಧಿಕಾರಿ ಬಿ.ಎಫ್‌. ಜಿಡ್ಡಿ ಮಾತನಾಡಿ, ಈ ಹಕ್ಕುಪತ್ರಗಳು ಖೊಟ್ಟಿ ಎಂದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇದನ್ನು ಪುರಸಭೆಯ ದಾಖಲೆಗಳಲ್ಲಿ ನಮೂದು ಮಾಡಿಲ್ಲ. ವಾಸ್ತವವಾಗಿ ರಾಜೀವ ವಸತಿ ನಿಗಮದ ಕಚೇರಿಯಿಂದ ನೀಡುವ ಹಕ್ಕುಪತ್ರಗಳು ಅಧಿಕೃತವಾಗಿದ್ದು, ಈಗ ನೀಡಲಾಗಿರುವ ಹಕ್ಕುಪತ್ರಗಳಿಗೂ ಪುರಸಭೆಗೂ ಯಾವುದೇ ಸಂಬಂಧ ಇಲ್ಲ. ಅವುಗಳಿಗೆ ಯಾವುದೇ ಮಾನ್ಯತೆ ಇಲ್ಲ. ಅವು ಎಲ್ಲಿಂದ ಬಂದವೋ, ಹೇಗೆ ಬಂದವೋ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನೀವು ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ಏಕೆ ತರಲಿಲ್ಲ, ದೂರನ್ನು ಏಕೆ ನೀಡಲಿಲ್ಲ ಎಂದು ಸದಸ್ಯರು ಮುಗಿಬಿದ್ದರು. ಈ ಕುರಿತು ಮುಖ್ಯಾಧಿಕಾರಿ ಗೊಂದಲಮಯ ಹೇಳಿಕೆ ನೀಡಿದರು. ಪುರಸಭೆ ಕಾಂಗ್ರೆಸ್‌ನ ನಾಮ ನಿರ್ದೇಶಿತ ಸದಸ್ಯರಾದ ಪ್ರಹ್ಲಾದ ಬೆಳಗಲಿ ಹಾಗೂ ಬಸವರಾಜ ಕುಬಸದ ನಕಲಿ ಹಕ್ಕುಪತ್ರ ವಿಷಯ ತನಿಖೆಯಾಗಲೇ ಬೇಕು ಎಂದು ಹಠಕ್ಕೆ ಬಿದ್ದರು.

ಈ ವೇಳೆ ಕಾಂಗ್ರೆಸ್‌ನ ಮತ್ತೊಂದು  ಬಣದ ಸದಸ್ಯರು ಅಧ್ಯಕ್ಷೆ ರೂಪಾ ಅವರ ನೆರವಿಗೆ ಧಾವಿಸಿ ಅವರ ಪರವಾಗಿ ಪ್ರತಿಪಾದಿಸಿದರು. ಇದಾವುದನ್ನು ವಿರೋಧಿ  ಬಣ ಗಣನೆಗೆ ತೆಗೆದುಕೊಳ್ಳಲಿಲ್ಲ. ಗೊಂದಲಮಯ ವಾತಾವರಣದಿಂದಾಗಿ ಅಧ್ಯಕ್ಷರು ಸಭೆ ಮುಂದೂಡಿದರು. ಪುನಃ ಆರಂಭಗೊಂಡ ಸಭೆಗೆ ಮುಖ್ಯಾಧಿಕಾರಿ ಒಳಹೋಗಲು ವಿರೋಧಿ ಸದಸ್ಯರು ಅಡ್ಡಿಪಡಿಸಿ ಅವರು ಒಳಹೋಗದಂತೆ ಬಾಗಿಲ ಮುಂದೆ ಕುಳಿತುಕೊಂಡರು. ಸಭೆ ನಡೆಸಲು ಅನುವು ಮಾಡಿಕೊಡಬೇಕೆಂದು ಅಧ್ಯಕ್ಷೆ ಮನವಿ ಮಾಡಿದರೂ ಕೇಳಲಿಲ್ಲ. ಬಳಿಕ ಸಭೆ ನಡೆಸಲು ಒಳಹೋದ ಅಧ್ಯಕ್ಷೆ ರೂಪಾ ಅವರು, ಭರ್ತಿಯಾದ ಕೋರಂನಲ್ಲಿ ಈಗ ನೀಡಲಾಗಿರುವ ಹಕ್ಕುಪತ್ರಗಳೇ ಅಸಲಿಯಾಗಿದ್ದು ವಿರೋಧಿ ಸದಸ್ಯರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ವಿಷಯ ಪಟ್ಟಿಯಲ್ಲಿದ್ದ ಎಲ್ಲ ವಿಷಯಗಳನ್ನು ಓದಿ ಅಂಗೀಕಾರವಾಗಿವೆ ಎಂದು ಘೋಷಿಸಿದರು. ಸಭೆಯ ಕೊನೆಗೆ ಮುಖ್ಯಾಧಿಕಾರಿಗಳು ಹಾಜರಾದರು.

Advertisement

ನೂತನ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ನಡೆದು ನಕಲಿ ಹಕ್ಕುಪತ್ರದ ವಿಷಯ ಇತ್ಯರ್ಥವಾಗುವ ವರೆಗೆ ನಾವು ಬಿಡುವುದಿಲ್ಲ.
ಮಂಜುನಾಥ ಮಾಯಣ್ಣವರ,
ಪುರಸಭೆ ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next