Advertisement

ಬಗರ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ

02:15 PM Jan 19, 2020 | Suhan S |

ಗಜೇಂದ್ರಗಡ: ಬಗರ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವುದಲ್ಲದೇ ರೈತರನ್ನು ಒಕ್ಕಲೆಬ್ಬಿಸುವುದನ್ನು ಅರಣ್ಯ ಇಲಾಖೆ ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ಕಾರ್ಯಕರ್ತರು ಶನಿವಾರ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿದರು.

Advertisement

ಕಳೆದ ಹಲವಾರು ದಶಕಗಳಿಂದ ಬಡ ಕುಟುಂಬಗಳು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಬದುಕು ನಡೆಸುತ್ತಿವೆ. ಕರ್ನಾಟಕ ಭೂ ಕಂದಾಯ ನಿಯಮ 2017 ತಿದ್ದುಪಡಿಯಿಂದಾಗಿ ನೂರಾರು ದಲಿತ ಕೃಷಿ ಕಾರ್ಮಿಕರು ಮತ್ತು ಬಡ ರೈತ ಕುಟುಂಬಗಳಿಗೆ ಭೂಮಿ ಸಿಗುವ ಅವಕಾಶ ಒದಗಿಸಿದೆ. ಇದನ್ನು ನಂಬಿ ಫಾರ್ಮ್ ನಂ. 53ರ ಅಡಿ ಬಹುತೇಕ ಜನರು ಅರ್ಜಿ ಸಲ್ಲಿಸಿದ್ದರು. ಕಾನೂನಿನ ತಾಂತ್ರಿಕ ತೊಡಕುಗಳು ಅಲ್ಲದೇ ರಾಜಕೀಯ ಹಿತಾಸಕ್ತಿಗಾಗಿ ಲಕ್ಷಾಂತರ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಬಗರ ಹುಕುಂ ಸಾಗುವಳಿದಾರರ ಅರ್ಜಿ ಹಾಕಿಕೊಳ್ಳದ ಮತ್ತು ಹಾಕಿದ ಬಡ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರನ್ನು ಭೂಗಳ್ಳರ ಪಟ್ಟಿಗೆ ಸೇರಿಸಿ ಭೂಮಿಯಿಂದ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ವಿಶೇಷ ನ್ಯಾಯಾಲಯದ ಭೂ ಕಬಳಿಕೆ ನಿಷೇಧ ಕಾಯ್ದೆ ತಡೆ ಹಿಡಿದು ಊಳುವವನೇ ಭೂಮಿಯ ಒಡೆಯ ಘೋಷಣೆ ಅಡಿಯಲ್ಲಿ ಬಡವರಿಗೆ ಭೂಮಿ ಸಕ್ರಮವಾಗಿ ಮಾಡಿ ಪಟ್ಟಾ ಕೊಡಬೇಕು ಎಂದು ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. 2019ರಲ್ಲಿ ಬಗರ ಹುಕುಂ ಸಾಗುವಳಿದಾರರಿಗೆ ಆನ್‌ಲೈನ್‌ ಮೂಲಕ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿತ್ತು. ಆದರೀಗ ಸ್ಥಗಿತಗೊಳಿಸಲಾಗಿದೆ. ಕೂಡಲೇ ಆನ್‌ಲೈನ್‌ ಅರ್ಜಿ ಪಡೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಸಂಘಟಕರಿಂದ ಮನವಿ ಸ್ವೀಕರಿಸಿದರು. ಬಾಲು ರಾಠೊಡ, ಶಿವು ಚವ್ಹಾಣ, ಪೀರು ರಾಠೊಡ, ಗುರುನಾಥ ರಾಠೊಡ, ಸೂರಪ್ಪ ರಾಠೊಡ, ತುಳಜವ್ವ ಚವ್ಹಾಣ, ಪಾರವ್ವ ರಾಠೊಡ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next