ಹೊಸದಿಲ್ಲಿ: ಇದೇ ಮೊದಲ ಬಾರಿಗೆ “ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಫೈನಲ್’ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಭಾರತದ ಅಮನ್‌ಪ್ರೀತ್ ಸಿಂಗ್ ಕಂಚಿನ ಪದಕವನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಶುಕ್ರವಾರ ನಡೆದ ಪುರುಷರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ತೃತೀಯ ಸ್ಥಾನದೊಂದಿಗೆ ಈ ಗೌರವಕ್ಕೆ ಪಾತ್ರರಾದರು.
7 ಮಂದಿಯ ಫೈನಲ್ ಸ್ಪರ್ಧೆಯಲ್ಲಿ ಅಮನ್‌ಪ್ರೀತ್ 202.2 ಅಂಕ ಸಂಪಾದಿಸಿದರು. ಆದರೆ ಭಾರತದ ಸ್ಟಾರ್ ಶೂಟರ್ ಜಿತು ರಾಯ್ ಅವರದು ಕಳಪೆ ನಿರ್ವಹಣೆ ಎನಿಸಿಕೊಂಡಿತು. ಕೇವಲ 123.2 ಅಂಕ ಪಡೆದ ಅವರು ಅಂತಿಮ 7ನೇ ಸ್ಥಾನಕ್ಕೆ ಕುಸಿದರು! ಇಬ್ಬರೂ ಆರ್ಹತಾ ಸುತ್ತಿನಲ್ಲಿ ಉತ್ತಮ ನಿರ್ವಹಣೆಯೊಂದಿಗೆ ಫೈನಲ್ ತಲಪುವಲ್ಲಿ ಯಶಸ್ವಿಯಾಗಿದ್ದರು.
ಥ್ರಿಲ್ಲಿಂಗ್ ಫೈನಲ್‌ನಲ್ಲಿ ಸರ್ಬಿಯಾದ ದಮಿರ್ ಮೈಕೆಕ್ ಚಿನ್ನಕ್ಕೆ ಗುರಿ ಇರಿಸಿದರೆ (229.3 ಅಂಕ), ಉಕ್ರೇನಿನ ಒಲೇಹ್ ಒಮೆಲುcಕ್ (228.0) ಬೆಳ್ಳಿ ಪದಕ ಜಯಿಸಿದರು. ಕಂಚಿನ ಹಾದಿಯಲ್ಲಿ ಅಮನ್‌ಪ್ರೀತ್ ಟರ್ಕಿಯ ಯೂಸುಫ್ ಡಿಕೆಕ್ ಹಾಗೂ ಸರ್ಬಿಯಾದ ಡಿಮಿಟ್ರಿಜ್ ಗ್ರಿಗಿಕ್ ಅವರಿಂದ ತೀವ್ರ ಪೈಪೋಟಿ ಎದುರಿಸಬೇಕಾಯಿತು. ಇರಾನಿನ ವಾಹಿದ್ ಗೋಲVಂಡನ್ ಕೂಡ ಕಂಚಿನ ರೇಸ್‌ನಲ್ಲಿದ್ದರು.
ವರ್ಷಾರಂಭದಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಸ್ಟೇಜ್-1ರಲ್ಲಿ ಅಮನ್‌ಪ್ರೀತ್ ಬೆಳ್ಳಿ ಪದಕ ಜಯಿಸಿದ್ದರು. ಆಗ ಜಿತು ರಾಯ್ ಬಂಗಾರಕ್ಕೆ ಕೊರಳೊಡ್ಡಿದ್ದರು.
“ವಿಶ್ವಕಪ್ ಫೈನಲ್ ಅಂದಮೇಲೆ ಅಲ್ಲಿ ವಿಶ್ವ ದರ್ಜೆಯ ಶೂಟರ್‌ಗಳೇ ಇರುತ್ತಾರೆ, ಭಾರೀ ಸ್ಪರ್ಧೆ ಇರುತ್ತದೆ. ಇದನ್ನೆಲ್ಲ ಪರಿಗಣಿಸಿದರೆ ನನ್ನದು ಉತ್ತಮ ಸಾಧನೆ ಎನಿಸಿಕೊಳ್ಳುತ್ತದೆ. ಆದರೆ ಮಹಾನ್ ಸಾಧನೆ ಏನಲ್ಲ. ನ್ನೂ ಸಾಕಷ್ಟು ಸುಧಾರಣೆ ಮಾಡಿಕೊಳ್ಳಬೇಕಿದೆ’ ಎಂದು ಅಮನ್‌ಪ್ರೀತ್ ಅಭಿಪ್ರಾಯಪಟ್ಟರು.
ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ವೈಯಕ್ತಿಕ ಪದಕವಾದರೆ, ಒಟ್ಟಾರೆಯಾಗಿ ಎರಡನೆಯದು. ಜಿತು ರಾಯ್-ಹೀನಾ ಸಿಧು 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.