Advertisement

ಮಿಸ್‌ ಮ್ಯಾಚ್‌

12:30 AM Jan 23, 2019 | |

ಕಿವಿಯೋಲೆಯ ಸೆಟ್‌ನಲ್ಲಿ ಒಂದು ಓಲೆ ಕಳೆದುಹೋದರೆ, ಒಂದರ ಹರಳು ಉದುರಿ ಹೋದರೆ ಇನ್ನೊಂದು ಕೂಡ ವ್ಯರ್ಥವಾಗುವ ಕಾಲವಿತ್ತು. ಆದರೆ, ಈಗ ಕಾಲ ಬದಲಾಗಿದೆ. ಒಂದು ಕಿವಿಗೆ ಒಂದು ರೀತಿಯ, ಮತ್ತೂಂದು ಕಿವಿಗೆ ಬೇರೊಂದು ಬಗೆಯ ಓಲೆ ತೊಡುವುದೇ ಈಗಿನ ಫ್ಯಾಷನ್‌. ಅದುವೇ ಮಿಸ್‌ ಅಂಡ್‌ ಮ್ಯಾಚ್‌ ಫ್ಯಾಷನ್‌. ಮ್ಯಾಚಿಂಗ್‌ ಬಟ್ಟೆ, ಮ್ಯಾಚಿಂಗ್‌ ಬಳೆ-ಸರ, ಮ್ಯಾಚಿಂಗ್‌ ಚಪ್ಪಲಿ, ಮ್ಯಾಚಿಂಗ್‌ ಬ್ಯಾಗು ತೊಟ್ಟರಷ್ಟೇ ಫ್ಯಾಷನೆಬಲ… ಎಂಬುದು ಹಿಂದೆ ಇದ್ದ ನಂಬಿಕೆ. ಆದರೀಗ ಮ್ಯಾಚ್‌ ಮಾಡುವ ಜಮಾನ ಹೋಗಿದೆ. ಈಗೇನಿದ್ದರೂ ಮಿಕ್ಸ್ – ಮ್ಯಾಚ್‌ ಅಥವಾ ಮಿಸ್‌ ಮ್ಯಾಚ್‌ ಮಾಡುವುದೇ ಫ್ಯಾಷನ್‌ ಆಗಿಬಿಟ್ಟಿದೆ! ಅದರಲ್ಲೂ, ಒಂದು ಕಿವಿಗೆ ಒಂದು ಬಗೆಯ ಓಲೆ, ಇನ್ನೊಂದು ಕಿವಿಗೆ ಇನ್ನೊಂದು ಬಗೆಯ ಓಲೆ ತೊಡುವುದು ಈಗಿನ ಹೊಸ ಟ್ರೆಂಡ್‌! ಬ್ರಿಟಿಷ್‌ ರಾಯಲ… ಫ್ಯಾಮಿಲಿಯ ಹೊಸ ಸದಸ್ಯೆ, ಯುವರಾಜ ಹ್ಯಾರಿಯ ಮಡದಿ, ಮೇಗನ್‌ ಮಾರ್ಕಲ್ ಈ ರೀತಿ ಬಲಕಿವಿಗೊಂದು ರೀತಿಯ ಓಲೆ, ಎಡಕಿವಿಗೆ ಇನ್ನೊಂದು ರೀತಿಯ ಓಲೆ ತೊಟ್ಟಿದ್ದೇ ತಡ, ಹಾಲಿವುಡ್‌ ನಟಿಯರು, ಪ್ರಸಿದ್ಧ ಗಾಯಕಿಯರು, ಮಾಡೆಲ್‌ಗ‌ಳು ಮತ್ತು ಭಾರತೀಯ ಚಿತ್ರ ನಟಿಯರು ಸೇರಿದಂತೆ ಅನೇಕ ಮಹಿಳೆಯರು ಮೇಗನ್‌ರ ಈ ಶೈಲಿಯನ್ನು ಅನುಕರಿಸಲು ಮುಂದಾದರು. 

Advertisement

ಒಂದಕ್ಕೊಂದು ಸಂಬಂಧವೇ ಇಲ್ಲ…
ಒಂದು ಕಿವಿಗೆ ಹೂವಿನ ಆಕಾರದ ಬುಗುಡಿ, ಇನ್ನೊಂದು ಕಿವಿಗೆ ಎಲೆ ಆಕಾರದ ಓಲೆ. ಒಂದು ಕಿವಿಗೆ ಚಿಪ್ಪು, ಇನ್ನೊಂದು ಕಿವಿಗೆ ಮುತ್ತು. ಒಂದು ಕಿವಿಗೆ ತ್ರಿಕೋನ ಆಕಾರದ ಓಲೆ, ಇನ್ನೊಂದು ಕಿವಿಗೆ ವೃತ್ತಾಕಾರದ ಓಲೆ. ಒಂದು ಕಿವಿಗೆ ಹಕ್ಕಿಯ ಕಾಲಿನ ಆಕೃತಿಯ ಬುಗುಡಿ, ಇನ್ನೊಂದು ಕಿವಿಗೆ ಹಕ್ಕಿಯ ರೆಕ್ಕೆಯ ಗರಿ ಆಕಾರದ ಬುಗುಡಿ. ಒಂದು ಕಿವಿಗೆ ಶಂಖ, ಇನ್ನೊಂದು ಕಿವಿಗೆ ಕವಡೆ…. ಈ ರೀತಿ ಬಹಳಷ್ಟು ಪ್ರಯೋಗಗಳನ್ನು ತಾರೆಯರು ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಮಿಸ್‌ಮ್ಯಾಚ್‌ ಕಿವಿಯೋಲೆಗಳು ಫ್ಯಾಷನ್‌ ಪ್ರಪಂಚದಲ್ಲಿ ಹೊಸ ಅಲೆ ಸೃಷ್ಟಿಸಿವೆ.

ಅರ್ಧ ಚಂದ್ರ, ಪೂರ್ಣ ಚಂದ್ರ ಅಲ್ಲದೆ ಇವುಗಳಲ್ಲಿ ಕಮಲ, ಮೀನು, ನಕ್ಷತ್ರ, ನಾಣ್ಯ ಹಾಗೂ ಇನ್ನೂ ಅನೇಕ ಆಕೃತಿಗಳನ್ನು ಅಳವಡಿಸಲಾಗುತ್ತದೆ. ಚೌಕ, ಪಂಚಕೋನಾಕೃತಿ, ಷಡುಜಾಕೃತಿ, ಅಷ್ಟಭುಜ ಆಕಾರದಲ್ಲೂ ವಿನ್ಯಾಸಕರು ಕಿವಿಯೋಲೆಗಳನ್ನು ತಯಾರಿಸುವ ಕಾರಣ ಇವುಗಳಿಗೆ ಬಹು ಬೇಡಿಕೆಯೂ ಇದೆ! ಇವುಗಳು ಕಾಲೇಜು ವಿದ್ಯಾರ್ಥಿನಿಯರ ಹಾಟ್‌ ಫೇವರಿಟ್‌ ಆಗಿವೆ. ಈ ಕಿವಿಯೋಲೆಗಳು ರಸ್ತೆ ಬದಿಯ ಫ್ಯಾನ್ಸಿ ಅಂಗಡಿಗಳಲ್ಲೂ ಲಭ್ಯ. ಚಿನ್ನದ ಅಂಗಡಿಯಲ್ಲಿ ನಿಮಗೆ ಬೇಕಾದ ವಿನ್ಯಾಸದಂತೆ, ಬೇರೆ-ಬೇರೆ ಕಿವಿಗೆ, ಬೇಕಾದ ಆಕಾರದ ಕಿವಿಯೋಲೆ ಮಾಡಿಸಬಹುದು. ಇಲ್ಲವೇ ಆನ್‌ಲೈನ್‌ ಮೂಲಕ ಮಿಸ್‌-ಮ್ಯಾಚ್‌ ಇಯರ್‌ ರಿಂಗ್ಸ್ ಆರ್ಡರ್‌ ಮಾಡಿ ಕೊಂಡುಕೊಳ್ಳಬಹುದು. ಚಿತ್ರ-ವಿಚಿತ್ರ ಆಕಾರದ ಬುಗುಡಿ, ಓಲೆ, ಜುಮ್ಕಿ ಮತ್ತು ಚೈನ್‌ ಕೂಡ ತರಿಸಿ ಪ್ರಯೋಗ ಮಾಡಬಹುದು. 

“ಮಿಸ್‌ಮ್ಯಾಚ್‌’ ಮ್ಯಾಚ್‌ ಆಗುತ್ತೆ!
ಇಂಥ ಕಿವಿಯೋಲೆಗಳು, ಚೈನೀಸ್‌ ಕಾಲರ್‌, ಕೋಲ್ಡ್‌ ಶೋಲ್ಡರ್‌, ಬೋಟ್‌ ನೆಕ್‌ ಅಥವಾ ಸ್ಲಿàವ್‌ಲೆಸ್‌, ಪಾಶ್ಚಾತ್ಯ ಹೀಗೆ ಎಲ್ಲ ಉಡುಗೆಗಳಿಗೂ ಚೆನ್ನಾಗಿ ಒಪ್ಪುತ್ತವೆ. ಪ್ರಯೋಗ ಮಾಡಲು ಧೈರ್ಯ ಇದ್ದವರು ಲಂಗ ದಾವಣಿ, ಉದ್ದ ಲಂಗ, ಚೂಡಿದಾರ, ಸಲ್ವಾರ್‌ ಕಮೀಜ್‌, ಸೀರೆ-ರವಿಕೆ, ಕುರ್ತಿಯಂಥ  ಸಾಂಪ್ರದಾಯಿಕ ಉಡುಗೆಗಳ ಜೊತೆಯೂ ಇವುಗಳನ್ನು ತೊಟ್ಟು ನೋಡಬಹುದು. ಕೆಂಪು, ಪಚ್ಚೆ, ಹಳದಿ ಅಥವಾ ನೀಲಿ ಬಣ್ಣದ ಕಲ್ಲುಗಳನ್ನೂ ಇಂಥ ಕಿವಿಯೋಲೆಗಳಲ್ಲಿ ಬಳಸುತ್ತಾರೆ.

ಹಳೆ ಲೋಹ, ಹೊಸ ಲುಕ್‌
ಆಕ್ಸಿಡೀಕೃತ ಜರ್ಮನ್‌ ಬೆಳ್ಳಿ, ಮುತ್ತು, ರತ್ನ, ಬಣ್ಣಬಣ್ಣದ ಗಾಜಿನ ತುಂಡು, ಪ್ಲಾಸ್ಟಿಕ್‌ ಆಕೃತಿಗಳನ್ನೂ ಆರ್ಟಿಫಿಷಿಯಲ… (ಕೃತಕ) ಆಭರಣಗಳಲ್ಲಿ ಬಳಸುತ್ತಾರೆ. ಚಿನ್ನ, ಬೆಳ್ಳಿ ಪ್ಲಾಟಿನಂ, ವೈಟ್‌ಮೆಟಲ…, ತಾಮ್ರ ಅಥವಾ ಕಂಚಿಗೆ ಹೋಲುವ ಲೋಹದಿಂದ ಇಂಥ ಕಿವಿಯೋಲೆಗಳನ್ನು ತಯಾರಿಸುತ್ತಾರೆ. ಕೃತಕ ಆಭರಣಗಳಲ್ಲಿ ಪ್ಲಾಸ್ಟಿಕ್‌, ಕಾರ್ಡ್‌ಬೋರ್ಡ್‌, ಮರದ ತುಂಡು, ಗಾಜಿನ ಚೂರು ಅಥವಾ ಮಣ್ಣಿನಿಂದ ತಯಾರಿಸಿ ಅವುಗಳ ಮೇಲೆ ಲೋಹದಂತೆ ಕಾಣುವ ಬಣ್ಣ ಬಳಿಯುತ್ತಾರೆ. 

Advertisement

ಮನೆಯಲ್ಲೇ ತಯಾರಿಸಿ
ಬಣ್ಣದ ದಾರ, ಗೆಜ್ಜೆ, ಬಳೆಯ ಚೂರುಗಳಿಂದಲೂ ಕಿವಿಯೋಲೆಗಳನ್ನು ನಾವೇ ಸ್ವತಃ ತಯಾರಿಸಬಹುದು. ಇದಕ್ಕೆ ಸಂಬಂಧಿಸಿದ ಅದೆಷ್ಟೋ ವಿಡಿಯೋಗಳು ಯುಟ್ಯೂಬ್‌ನಲ್ಲಿ ಲಭ್ಯ ಇವೆ. ನಿಮ್ಮ ಬಳಿ ಇಂಥ ಕಿವಿಯೋಲೆಗಳು ಇದ್ದರೆ ಮತ್ತು ಇವುಗಳ ಬಣ್ಣದಿಂದ ನೀವು ಬೋರ್‌ ಆಗಿದ್ದರೆ, ನೈಲ್ ಪಾಲಿಶ್‌ ಬಳಸಿ ಅದಕ್ಕೆ ಹೊಸ ಮೆರುಗು ನೀಡಬಹುದು! ನೈಲ್‌ ಪಾಲಿಶ್‌ ರಿಮೂವರ್‌ ಬಳಸಿ ಹಳೆಯ ಬಣ್ಣವನ್ನು ಒರೆಸಿ ತೆಗೆದು, ಬೇರೆ ಬಣ್ಣ ಹಚ್ಚಿ, ಮತ್ತೆ ಆ ಕಿವಿಯೋಲೆಗಳಿಗೆ ಇನ್ನೊಂದು ಹೊಸ ಲುಕ್‌ ನೀಡಲೂಬಹುದು. ಆದರೆ, ಈ ಕಿವಿಯೋಲೆಗಳ ನೈಜ ಬಣ್ಣಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರದಿಂದ ನೋಡಿಕೊಳ್ಳಬೇಕಾಗುತ್ತದೆ.

ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next