ಚೆನ್ನೈ: ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ) ಸೇನಾಸಹಾಯಕ ಉಪಗ್ರಹ ಮೈಕ್ರೋಸ್ಯಾಟ್ ಆರ್ ಅನ್ನು ಗುರುವಾರ ತಡರಾತ್ರಿ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಹೊಸ ವರ್ಷದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ನೆಟ್ಟಿದೆ.
ಪೋಲಾರ್ ಸ್ಯಾಟ್ ಲೈಟ್ ಲಾಂಚ್ ವೆಹಿಕಲ್(ಪಿಎಸ್ ಎಲ್ ವಿ) ಸುಮಾರು 740 ಕೆಜಿ ತೂಕದ ಸೇನಾಸಹಾಯಕ ಸೆಟ್ ಲೈಟ್ ಅನ್ನು ಯಶಸ್ವಿಯಾಗಿ ನಭೋ ಮಂಡಲಕ್ಕೆ ಕೊಂಡೊಯ್ದಿದೆ ಎಂದು ಇಸ್ರೋ ತಿಳಿಸಿದೆ.
ಪಿಎಸ್ ಎಲ್ ವಿ ಸಿ-44 ಗುರುವಾರ ರಾತ್ರಿ 11.37ಕ್ಕೆ ಮೈಕ್ರೋಸ್ಯಾಟ್ ಆರ್ ಎಂಬ ಮಿಲಿಟರಿ ಸಹಾಯಕ ಉಪಗ್ರಹದ ಜೊತೆಗೆ ವಿದ್ಯಾರ್ಥಿಗಳು ತಯಾರಿಸಿದ್ದ ಕಲಾಂಸ್ಯಾಟ್ ಉಪಗ್ರಹವನ್ನು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಉಡಾವಣೆ ಮಾಡಲಾಯಿತು.
ಇದು ಪಿಎಸ್ ಎಲ್ ವಿಯ 46ನೇ ಉಡ್ಡಯನವಾಗಿದೆ. ಅಲ್ಲದೇ ಇದು ಮೊದಲ ಭಿನ್ನರೂಪದ ಪಿಎಸ್ ಎಲ್ ವಿ ವಾಹನವಾಗಿದ್ದು, ಇದನ್ನು ಪಿಎಸ್ ಎಲ್ ವಿ-ಡಿಎಲ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಎರಡು ಹಂತಗಳಿದ್ದು, ಒಂದೊಂದು 12.2 ಟನ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ವಿವರಿಸಿದೆ.
ಇಸ್ರೋವಿನ ಈ ಮಹತ್ವದ ಯಶಸ್ವಿ ಉಡ್ಡಯನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.