Advertisement
ಮರು ಬಳಕೆ ಉಡ್ಡಯನ ವಾಹನ (ಆರ್‌ಎಲ್‌ವಿ)ಯನ್ನು ಇಂದು (ಶುಕ್ರವಾರ) ಬೆಳಗ್ಗೆ 7 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಚಳ್ಳಕೆರೆ ರನ್ ವೇಯಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ರಾಕೆಟ್ ಉಡಾವಣೆಯಾಗಿದೆ. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದ್ದು, ಈ ಹಿಂದೆ 2016 ರಲ್ಲಿ ಮೊದಲ ಪ್ರಯೋಗ ನಡೆಸಿದ ಬಾಹ್ಯಾಕಾಶ ಸಂಸ್ಥೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಎರಡನೇ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತ್ತು.
ಪುಷ್ಪಕ್ ಎಂದು ಹೆಸರಿಸಲಾಗಿರುವ ರಾಕೆಟ್ ಮರು ಬಳಕೆ ಮಾಡಬಹುದಾದ ಉಡ್ಡಯನ ವಾಹನವಾಗಿದೆ (ಆರ್‌ಎಲ್‌ವಿ). ವಿಮಾನದ ಮಾದರಿಯ ಅಂತರಿಕ್ಷ ನೌಕೆ ಇದಾಗಿದ್ದು, ಈ ರಾಕೆಟ್‌ನಿಂದ ಕಡಿಮೆ ವೆಚ್ಚದಲ್ಲಿ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು. ವಾಯುಪಡೆ ಹೆಲಿಕಾಪ್ಟರ್ ಸಹಾಯದಿಂದ ಇದನ್ನು ಉಡಾವಣೆ ಮಾಡಲಾಗುತ್ತದೆ. ಈಗಾಗಲೇ ಅಮೆರಿಕ, ಚೀನ ಇಂತಹ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ಉಡ್ಡಯನ ವಾಹನಗಳನ್ನು ಬಳಸುತ್ತಿದ್ದು, ಭಾರತ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದೆ.
Related Articles
ರಾಕೆಟ್‌ನ ಮೇಲ್ಭಾಗದಲ್ಲಿರುವ ಅತ್ಯಂತ ದುಬಾರಿ ಭಾಗಗಳನ್ನು ಮರು ಬಳಕೆ ಮಾಡುವ ರೀತಿಯಲ್ಲಿ ತಯಾರಿಸಲಾಗಿದೆ. ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ಮರುಪೂರಣ ಸಾಮರ್ಥ್ಯ ವನ್ನೂ ಅದು ಹೊಂದಿದೆ. ನವೀಕರಣಕ್ಕಾಗಿ ಉಪಗ್ರಹ ಗಳನ್ನು ವಾಪಸ್ ಪಡೆಯಲು ಇದು ನೆರವು ನೀಡುತ್ತದೆ. ಭಾರತವು ಬಾಹ್ಯಾಕಾಶದಲ್ಲಿ ಕನಿಷ್ಠ ತ್ಯಾಜ್ಯ ಉಳಿಸಲು ಬಯಸುತ್ತಿದ್ದು, ಪುಷ್ಪಕ ರಾಕೆಟ್ ಆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
Advertisement