ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಭಾನುವಾರ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಯಿತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಿಂದ ʼಪುಷ್ಪಕ್ʼ ಎಂಬ ಹೆಸರಿನ ಪುನರ್‌ಬಳಕೆ ಉಡಾವಣೆ ವಾಹನ (ಆರ್‌ಎಲ್‌ವಿ)ವನ್ನು ಸತತ ಮೂರನೇ ಬಾರಿಯೂ ಸುರಕ್ಷಿತವಾಗಿ ಲ್ಯಾಂಡಿಂಗ್ ನಡೆಸಿ ಹ್ಯಾಟ್ರಿಕ್ ಸಾಧನೆಗೈದಿದೆ.
ಇದು ಆರ್‌ಎಲ್‌ವಿಯ ೩ನೇಯ ಹಾಗೂ ಅಂತಿಮ ಪ್ರಾಯೋಗಿಕ ಪರೀಕ್ಷೆ ಎಂದು ಇಸ್ರೋ ಹೇಳಿದೆ. ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದಲ್ಲಿರುವ ಎಟಿಆರ್‌ನ ರನ್‌ವೇನಲ್ಲಿ ಭಾನುವಾರ ಬೆಳಗ್ಗೆ ಪ್ರಯೋಗ ನಡೆಸಿದ್ದು, ಲ್ಯಾಂಡಿಂಗ್ ಯಶಸ್ವಿಯಾಗಿದೆ. ರಾಕೆಟ್ ಉಡಾವಣೆ ಬಳಿಕ ಸುಮಾರು ೪.೫ ಕಿಲೋ ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಗೇಮ್ ಚೇಂಜರ್: ಇಸ್ರೋ ಮುಖ್ಯಸ್ಥ
ಈ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೋ ಮುಖಸ್ಥ ಎಸ್.ಸೋಮನಾಥ್ ʼ ಪುಷ್ಪಕ್ ಮೂರನೇ ಬಾರಿಗೆ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿ ಇಸ್ರೋ ಹ್ಯಾಟ್ರಿಕ್ ಜಯ ಸಾಧಿಸಿದೆ. ಇದು ಮುಂದೆ ಆರ್ಬಿಟಲ್ ಪರೀಕ್ಷೆಗೆ ಅನುಕೂಲವಾಗಿದೆ. ಇದನ್ನು ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿ ನಂತರ ಅದು ಆ ಬಳಿಕ ಸುರಕ್ಷಿತವಾಗಿ ಭೂಮಿಗೆ ಇಳಿಯುವುದರಿಂದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವೆಚ್ಚ ಕಡಿಮೆ ಮಾಡಲು ಗೇಮ್ ಚೇಂಜರ್ ಆಗಲಿದೆ. 21ನೇ ಶತಮಾನದಲ್ಲಿ ಸ್ವದೇಶಿಯಾಗಿ ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಬಳಸಿಕೊಂಡು ಆತ್ಮನಿರ್ಭರಕ್ಕೆ ಇಸ್ರೋ ಪ್ರಯತ್ನಿಸಲಿದೆ ಎಂದರು.