ಬೆಂಗಳೂರು: ಮಾನವ ಸಹಿತ ಗಗನಯಾನಕ್ಕೆ ಬೇಕಾದ ಸಿದ್ಧತೆ ಆರಂಭವಾಗಿದೆ. ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಮೂಲಕ ಈ ಸಾಧನೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದರು.
2022 ವೇಳೆಗೆ ಭಾರತದಿಂದ ಮಾನವ ಸಹಿತ ಗಗನಯಾನ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಸ್ವಾತಂತ್ರೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದ ನಂತರ ಬೆಂಗಳೂರಿನ ಅಂತರಿಕ್ಷ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಸ್ರೋ ಕಾರ್ಯಚಟುವಟಿಕೆಯ ಮೇಲೆ ಅತ್ಯಂತ ಹೆಚ್ಚು ವಿಶ್ವಾಸ ಇಟ್ಟು ಪ್ರಧಾನಿ ಮೋದಿಯವರು ಈ ಘೋಷಣೆ ಮಾಡಿರುವುದಕ್ಕೆ ಅವರಿಗೆ ಧನ್ಯವಾದಗಳು. 2022ರ ವೇಳೆಗೆ ಮಾನವ ಸಹಿತ ಗಗನಯಾನ ಕಠಿಣ ಸವಾಲಾದರೂ, ಇದಕ್ಕೆ ಬೇಕಾದ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಕ್ರೇವ್ ಮ್ಯಾಡುಲ್, ಕ್ರೇವ್ ಎಸ್ಕೇಪ್, ಪರಿಸರ ನಿಯಂತ್ರಣ, ಲೈಫ್ ಸಪೋರ್ಟ್ ಸಿಸ್ಟಮ್ ಮತ್ತು ಸ್ಪೇಸ್ ಸೈಟ್ ಅಭಿವೃದ್ಧಿಪಡಿಸಿದ್ದೇವೆ ಎಂದು ವಿವರಿಸಿದರು.
4 ವರ್ಷದಲ್ಲಿ ಗುರಿ ತಲುಪಲು ಬೇಕಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಿದ್ದೇವೆ. ಸದ್ಯ ಮಾನವರಹಿತ ಗಗನಯಾನ ಮಾಡುವ ತಂತ್ರಜ್ಞಾನ ನಮ್ಮಲ್ಲಿದೆ. ಎರಡು ಅಥವಾ ಮೂರು ಉಡಾವಣೆ ನಡೆಸಿದ ನಂತರವೇ ಮಾನವ ಸಹಿತ ಗಗನಯಾನಕ್ಕೆ ಮುಂದಾಗಬೇಕಿದೆ. ಆಪ್ತ ರಾಷ್ಟ್ರಗಳ ಸಹಕಾರ ಪಡೆದು ಈ ಯೋಜನೆ ಯಶಸ್ವಿ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾನವಸಹಿತ ಗಗನಯಾನ ಯೋಜನೆಗೆ 10 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ತಂತ್ರಜ್ಞಾನ ಅಭಿವೃದ್ಧಿಗೆ 200 ಕೋಟಿ ರೂ.ಗೂ ಹೆಚ್ಚಿನ ಹಣ ಬೇಕಾಗಬಹುದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್ ಇರುವುದರಿಂದ ಅಗತ್ಯ ಅನುದಾನ ಪೂರೈಕೆಯಾಗುವ ಭರವಸೆ ಇದೆ ಎಂದರು.
2022ರ ಒಳಗೆ ಮಾನವ ಸಹಿತ ಅಂತರಿಕ್ಷ ಯಾತ್ರೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಲಿದೆ. ನೌಕೆಯಲ್ಲಿ ಇಸ್ರೊ ವಿಜ್ಞಾನಿಗಳೇ ಇರುತ್ತಾರೆ. ಆದರೆ ಯಾರು ಹೋಗ್ತಾರೆ ಅನ್ನೋದನ್ನು ಈಗಲೇ ಹೇಳಲಾಗದು. 10 ಸಾವಿರ ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ಈ ಯೋಜನೆ ಸಿದ್ಧವಾಗುತ್ತದೆ. ದೇಶದ ಹೆಮ್ಮೆಯ ವಿಚಾರ ಮಾತ್ರವಲ್ಲ, ಇದರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತಷ್ಟು ಉನ್ನತ ದರ್ಜೆಗೆ ಏರಲಿದೆ. ದೇಶದ ತಂತ್ರಜ್ಞಾನ ವ್ಯವಸ್ಥೆಗೆ ಇದು ಉಪಯುಕ್ತವಾಗಲಿದೆ ಎಂದು ವಿವರಿಸಿದರು.
ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಸಾಧ್ಯವಿದೆ. ಆದರೆ, ಮಾನವರಹಿತ ಗಗನಯಾನ ನಮಗೆ ಸವಾಲು ಮತ್ತು ಘನತೆಯ ವಿಚಾರವಾಗಿದೆ. ಇದೊಂದು ದೊಡ್ಡ ಯೋಜನೆಯಾಗಿರುವುದರಿಂದ ಕೆಲಸವೂ ಹೆಚ್ಚಿದೆ. ಇದಕ್ಕೆ ಬೇಕಾದ ತಂತ್ರಜ್ಞಾನದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇಸ್ರೋ, ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಕವಚ ಅಭಿವೃದ್ಧಿ ಪಡಿಸಿದೆ ಎಂದರು.