Advertisement

2022ರೊಳಗೆ ಇಸ್ರೋ ವತಿಯಿಂದ ಮಾನವಸಹಿತ ಬಾಹ್ಯಾಕಾಶ ಯಾನ

06:40 AM Jan 11, 2019 | Team Udayavani |

ಬೆಂಗಳೂರು: “ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಿಂದ 2022ರೊಳಗಾಗಿ ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಲಾಗುವುದು’ ಎಂದು ಇಸ್ರೋ ನಿವೃತ್ತ ಅಧ್ಯಕ್ಷ ಎ.ಎಸ್‌.ಕಿರಣ್‌ಕುಮಾರ್‌ ತಿಳಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಒಕ್ಕೂಟ (ಐಎಯು) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಜವಾಹರ್‌ ಲಾಲ್‌ ನೆಹರು ತಾರಾಲಯ ಮತ್ತು ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಷನ್‌ (ಬೇಸ್‌) ನಿಂದ ಗುರುವಾರ ಹಮ್ಮಿಕೊಂಡಿದ್ದ ಖಗೋಳ ಉತ್ಸವದಲ್ಲಿ ಮಾತನಾಡಿದರು.

“ಮುಂದಿನ ದಿನಗಳಲ್ಲಿ ಭಾರತದಿಂದ ಬಾಹ್ಯಾಕಾಶಕ್ಕೆ ಮನುಷ್ಯನನ್ನು ಕಳುಹಿಸಲು ಇಸ್ರೋ ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಕೂಡ ಈ ಯೋಜನೆಗೆ ಅನುಮತಿ ನೀಡಿದ್ದು, 75ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ವೇಳೆಗೆ ಭಾರತ ತನ್ನ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ಮುಗಿಸಿರಲಿದೆ’ ಎಂದು ಹೇಳಿದರು.

900 ವಿಜ್ಞಾನಿಗಳ ಅಗತ್ಯ: ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಗೆ ಇಸ್ರೋ ಅಗತ್ಯ ಸಂಶೋಧನೆಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಮಾನವಸಹಿತ ಬಾಹ್ಯಾಕಾಶ ನೌಕಾ ಕೇಂದ್ರ (ಹ್ಯೂಮನ್‌ಸ್ಪೇಸ್‌ ಫ್ಲೈಟ್‌ ಸೆಂಟರ್‌) ತೆರೆಯಲಾಗಿದೆ. ಈ ಯೋಜನೆಯ ಯಶಸ್ವಿಗಾಗಿ ಇಸ್ರೋನಲ್ಲಿರುವ ಎಲ್ಲ ವಿಜ್ಞಾನಿಗಳು ಶ್ರಮಿಸುತ್ತಿದ್ದು, ಇನ್ನೂ 900 ವಿಜ್ಞಾನಿಗಳು ಅಗತ್ಯವಿದ್ದಾರೆ. ಜಿಎಸ್‌ಎಲ್‌ವಿ ಎಂಕೆ 3 ಮೂಲಕ ಮಾನವನನ್ನು ಅಂತರಿಕ್ಷಕ್ಕೆ ಕಳುಹಿಸಲಾಗುವುದು. ಒಂದು ವಾರ ಬಾಹ್ಯಾಕಾಶದಲ್ಲಿ ಕಳೆಯುವ ಅವಕಾಶ ಗಗನಯಾತ್ರಿಗಳಿಗೆ ದೊರೆಯಲಿದೆ ಎಂದರು.

ಪ್ರಾಯೋಗಿಕ ಜ್ಞಾನ ಅತ್ಯಗತ್ಯ: ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮಾತನಾಡಿ, ತರಗತಿಗಳಲ್ಲಿ ಪಠ್ಯದ ಮೂಲಕ ಮಕ್ಕಳಿಗೆ ವಿಜ್ಞಾನದ ಬಗ್ಗೆ ಕುತೂಹಲ ಹುಟ್ಟಿಸಬಹುದು. ಆದರೆ ಪ್ರಾಯೋಗಿಕ ಜ್ಞಾನ ಅವರಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಲಿದೆ. ವಿಜ್ಞಾನ ವಿಷಯದಲ್ಲಿ ತರಗತಿಯಲ್ಲಿ ನೀಡುವ ಪಠ್ಯದ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವೂ ಅತ್ಯಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಖಭೌತ ಸಂಸ್ಥೆಯ ನಿರ್ದೇಶಕ ಪ್ರೊ.ಜಯಂತ್‌ ಮೂರ್ತಿ ಹಾಗೂ ಜವಾಹರ್‌ ಲಾಲ್‌ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್‌ ಜಿ.ಗಲಗಲಿ ಉಪಸ್ಥಿತರಿದ್ದರು.

Advertisement

ಪ್ರಪಂಚದ ಸಣ್ಣ ದೂರದರ್ಶಕ ಭಾರತದ ಸಂಶೋಧನೆ: ಭಾರತದ ಆಸ್ಟ್ರೋಸ್ಯಾಟ್‌ ಎಂಬ ಉಪಗ್ರಹದಿಂದ ವಾತಾವರಣದಲ್ಲಿ ನಡೆಯುವ ಕ್ರಿಯೆಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು. ಈ ಉಪಗ್ರಹದಲ್ಲಿ ಪ್ರಪಂಚದಲ್ಲಿಯೇ ಅತಿಸೂಕ್ಷ್ಮವಾದ ದೂರದರ್ಶಕವನ್ನು (ಟೆಲಿಸ್ಕೊಪ್‌) ಅಳವಡಿಸಲಾಗಿದೆ. ಇದರಿಂದಾಗಿ ವಾತಾವರಣದಲ್ಲಿ ಯಾವುದೇ ರೀತಿಯ ಕ್ರಿಯೆಗಳು ನಡೆದರೂ ನಮಗೆ ಸ್ಪಷ್ಟವಾದ ಚಿತ್ರಣ ದೊರೆಯಲಿದೆ.

ಈ ದೂರದರ್ಶಕ ಭಾರತೀಯರ ಸಂಶೋಧನೆಯಾಗಿದೆ ಎಂಬುದು ಹೆಮ್ಮೆಯ ವಿಚಾರ. ಭಾರತ ಇಂದು ಖಗೋಳಶಾಸ್ತ್ರದಲ್ಲಿ ವಿದೇಶಗಳಿಗೆ ಸರಿಸಮಾನವಾಗಿ ಹಾಗೂ ಕೆಲವು ವಿಭಾಗಳಲ್ಲಿ ಅನ್ಯ ದೇಶಗಳಿಗಿಂತ ಮುಂದುವರಿದ ಸಾಧನೆ ಮಾಡುತ್ತಿದೆ ಎಂದು ಕಿರಣ್‌ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next