ಬೆಂಗಳೂರು: ಇಸ್ರೋ ಚಂದ್ರಯಾನ ಮಾಡಿರುವುದರಿಂದ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನದ ಕಡೆಗೆ ವಾಲುತ್ತಿ¨ªಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಟೌನ್ ಹಾಲ್‌ನಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಬುಧವಾರ ಹಮ್ಮಿಕೊಂಡಿದ್ದ “ವೀರಭದ್ರೇಶ್ವರ ಜಯಂತ್ಯುತ್ಸವ ಹಾಗೂ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ 2023ನೇ ಸಾಲಿನ ಶ್ರೀ ವೀರಭದ್ರೇಶ್ವರ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ವಿಜ್ಞಾನಿಗಳು ಹುಟ್ಟಿಕೊಳ್ಳಬಹುದು. ಇಸ್ರೊ ಅಧ್ಯಕ್ಷ ಸೋಮನಾಥ ಅವರ ಮುಖದಲ್ಲಿ ಮಗುವಿನ ಮುಗ್ಧತೆ ಈಗಲೂ ಇದೆ. ಇಸ್ರೋ ಅಧ್ಯಕ್ಷರಿಗೆ ವೀರಭದ್ರೇಶ್ವರ ಅವರ ಪ್ರಶಸ್ತಿ ನೀಡಿರುವುದು ಸಮಂಜಸವಾಗಿದೆ. ಇದಕ್ಕೆ ವಿಜ್ಞಾನಕ್ಕೆ ಗೌರವ ಸಲ್ಲಿಸಿದಂತಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ: 2023ನೇ ಸಾಲಿನ ಶ್ರೀ ವೀರಭದ್ರೇಶ್ವರ ಪ್ರಶಸ್ತಿ ಸ್ವೀಕರಿಸಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾತನಾಡಿ, ಚಂದ್ರಯಾನದಲ್ಲಿ ಇಸ್ರೋ ಯಶಸ್ಸು ಸಾಧಿಸಲು ಭಾಗಿಯಾಗಿರುವ ನೂರಾರು ವಿಜ್ಞಾನಿಗಳ ಪೈಕಿ ನಾನೂ ಒಬ್ಬ ಅಷ್ಟೆ. ಈ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ. ಇದು ಭಾರತದ ವಿಜ್ಞಾನಿಗಳಿಗೆ ಸಂದ ಪ್ರಶಸ್ತಿ.ವೀರಶೈವ ಲಿಂಗಾಯತರ ಇತಿಹಾಸದ ಬಗ್ಗೆ ತಿಳಿದುಕೊಂಡಿದ್ದೇನೆ. ವೀರಶೈವ ಲಿಂಗಾಯತರು ಸಮಾಜಕ್ಕೆ ಸಾಹಿತ್ಯ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಅಧ್ಯಾತ್ಮ, ವಿಜ್ಞಾನ ಜತೆಗೆ ಸಾಗಬೇಕು: ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ವಿಜ್ಞಾನ ಇಲ್ಲದೇ ಧರ್ಮವಿಲ್ಲ. ಧರ್ಮವಿಲ್ಲದೇ ವಿಜ್ಞಾನವಿಲ್ಲ. ಆಧ್ಯಾತ್ಮ ಮತ್ತು ವಿಜ್ಞಾನ ಜೊತೆಗೆ ಸಾಗಬೇಕಾಗಿದೆ. ಅಂತರಂಗದ ಬದುಕು ಪವಿತ್ರಗೊಳಿಸಲು ಅಧ್ಯಾತ್ಮ ಬೇಕು. ಬಹಿರಂಗ ಬದುಕು ಚೆನ್ನಾಗಿಟ್ಟುಕೊಳ್ಳಲು ವಿಜ್ಞಾನ ಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ಆಧ್ಯಾತ್ಮ ಸಾಧಕ ವಿನಯ್ ಗುರೂಜಿ, ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಸೋಮಶೇಖರ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.