Advertisement

Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್‌ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್‌ ನ ಮೊಸ್ಸಾದ್!

12:57 PM Sep 18, 2024 | Team Udayavani |

ಇಸ್ರೇಲ್/ಬೈರುತ್:‌ ಲೆಬನಾನ್‌(Lebanese) ಹಾಗೂ ಸಿರಿಯಾದ ಹಲವು ಭಾಗಗಳಲ್ಲಿ ಮಂಗಳವಾರ ಏಕಕಾಲಕ್ಕೆ ಸಾವಿರಾರು ಪೇಜರ್‌ ಗಳು ಸ್ಫೋಟಗೊಂಡು ಹೆಜ್ಬುಲ್ಲಾ ಉಗ್ರರು ಸೇರಿದಂತೆ 9 ಮಂದಿ ಸಾವಿಗೀಡಾಗಿರುವ ಘಟನೆ ಹಿಂದೆ ಇಸ್ರೇಲ್‌ ನ ಚಾಣಕ್ಯ ಗುಪ್ತಚರ ಸಂಸ್ಥೆ ಮೊಸ್ಸಾದ್‌(Mossad Spy) ಕೈವಾಡ ಇರುವುದು ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.

Advertisement

ಮೊಸ್ಸಾದ್‌ ಕೈಚಳಕ!

ಸುಮಾರು 5 ತಿಂಗಳ ಹಿಂದೆ ಲೆಬನಾನ್‌ ನಲ್ಲಿ ಕಾರ್ಯಾಚರಿಸುತ್ತಿರುವ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆ ತೈವಾನ್‌ ನಿರ್ಮಿತ 5,000 ಪೇಜರ್‌ ಗಳನ್ನು ಪೂರೈಸಲು ಬೇಡಿಕೆ ಇಟ್ಟಿತ್ತು. ಈ ಪೇಜರ್‌ (Pagers)ಗಳ ಒಳಗಡೆ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸ್ಸಾದ್‌ ಸಣ್ಣ ಪ್ರಮಾಣದ ಸ್ಫೋಟಗಳನ್ನು ಅಳವಡಿಸಿತ್ತು ಎಂಬ ಅಂಶ ವರದಿಯಲ್ಲಿ ಬಯಲಾಗಿದೆ.

ಹೆಜ್ಬುಲ್ಲಾ ಉಗ್ರರು ತರಿಸಿಕೊಂಡಿದ್ದ ತೈವಾನ್‌ ನಿರ್ಮಿತ ಪೇಜರ್ಸ್‌ ಗಳು ಮಂಗಳವಾರ ಏಕಾಏಕಿ ಸ್ಫೋಟಗೊಂಡಿರುವುದರ ಹಿಂದೆ ಇಸ್ರೇಲ್‌ ಗುಪ್ತಚರ ಸಂಸ್ಥೆ ಇದ್ದಿರುವುದಾಗಿ ಹೆಜ್ಬುಲ್ಲಾ ಆರೋಪಿಸಿದೆ.

Advertisement

ಮೊಬೈಲ್‌ ಫೋನ್‌ ಬಳಕೆಯಿಂದ ದೂರ ಇರಲು ಹೇಳಿದ್ದ ಇರಾನ್‌ ಬೆಂಬಲಿತ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆ ಸಂವಹನಕ್ಕಾಗಿ ವಯರ್‌ ಲೆಸ್‌ ಪೇಜರ್ಸ್‌ ಗಳನ್ನು ಸಂಘಟನೆಯ ಸಾವಿರಾರು ಉಗ್ರರು ಬಳಕೆ ಮಾಡುತ್ತಿದ್ದರು ಎಂದು ವರದಿ ವಿವರಿಸಿದೆ.

ಹೀಗೆ ಲೆಬನಾನ್‌ ಮತ್ತು ಸಿರಿಯಾದಲ್ಲಿ ಉಗ್ರರು ಬಳಕೆ ಮಾಡುತ್ತಿದ್ದ ಪೇಜರ್ಸ್‌ ಗಳು ಏಕಕಾಲಕ್ಕೆ ಸ್ಫೋಟಗೊಂಡಿವೆ. ಸಿರಿಯಾದಲ್ಲಿ ಸುಮಾರು ನೂರು ಸ್ಫೋಟ ಪ್ರಕರಣಗಳು ವರದಿಯಾಗಿದೆ.

ಸಾವಿರಾರು ಪೇಜರ್ಸ್‌ ಗಳಿಗೆ ಏಕಕಾಲಕ್ಕೆ ಕೋಡೆಡ್‌ (Coded) ಸಂದೇಶಗಳನ್ನು ರವಾನಿಸಿದ್ದು, ಅದನ್ನು ಸ್ವೀಕರಿಸಿದ ಉಗ್ರರು ಪೇಜರ್‌ ಬಟನ್‌ ಒತ್ತಿದಾಗ ಸ್ಫೋಟ ಸಂಭವಿಸಿರುವುದಾಗಿ ಲೆಬನಾನ್‌ ನ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ರಾಯಿಟರ್ಸ್‌ ನ್ಯೂಸ್‌ ಏಜೆನ್ಸಿಗೆ ತಿಳಿಸಿದ್ದಾರೆ.

ಛಿದ್ರಗೊಂಡ ಪೇಜರ್ಸ್‌ ಚಿತ್ರಗಳಲ್ಲಿ ಗೋಲ್ಡ್‌ ಅಪೋಲೋ ಕಂಪನಿ ಲಿಮಿಟೆಡ್ ಇದನ್ನು ತಯಾರಿಸಿರುವ ಸ್ಟಿಕ್ಕರ್ಸ್‌ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಸ್ಕೈ ನ್ಯೂಸ್‌ ಅರೇಬಿಯಾ ವರದಿ ಪ್ರಕಾರ, ಇಸ್ರೇಲ್‌ ನ ಗುಪ್ತಚರ ಸಂಸ್ಥೆ ಮೊಸ್ಸಾದ್‌, ಪೇಜರ್ಸ್‌ ಒಳಗೆ PETN ಸ್ಫೋಟಕವನ್ನು ಸಣ್ಣ ಪ್ರಮಾಣದಲ್ಲಿ ಅಳವಡಿಸಲಾಗಿತ್ತು. ಇದು ಭಾರೀ ದುರಂತದ ಸ್ಫೋಟಕವಾಗಿದೆ. ಪೇಜರ್ಸ್‌ ನ ಬ್ಯಾಟರಿಯ ಟೆಂಪರೇಚರ್‌ ಅನ್ನು ಇದು ಹೆಚ್ಚಳ ಮಾಡುವ ಮೂಲಕ ಸ್ಫೋಟಗೊಳ್ಳಲಿದೆ ಎಂದು ವಿವರಿಸಿದೆ.

ಲೆಬನಾನ್‌ ನಲ್ಲಿ ಸಂಭವಿಸಿದ ಪೇಜರ್ಸ್‌ ಸ್ಫೋಟಕ್ಕೆ ಇಸ್ರೇಲ್‌ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೆಜ್ಬುಲ್ಲಾ ಶಪಥ ಮಾಡಿದ್ದು, ಲೆಬನಾನ್‌ ಮಾಹಿತಿ ಸಚಿವ ಝಿಯಾದ್‌ ಸ್ಫೋಟವನ್ನು ಖಂಡಿಸಿ, ಇದೊಂದು ಇಸ್ರೇಲ್‌ ಆಕ್ರಮಣ ಎಂದು ಆರೋಪಿಸಿದ್ದಾರೆ.

ಆದರೆ ಲೆಬನಾನ್‌ ನಲ್ಲಿ ಸಂಭವಿಸಿದ ಸಾವಿರಾರು ಪೇಜರ್ಸ್‌ ಗಳ ಸ್ಫೋಟದ ಬಗ್ಗೆ ಕೇಳಿ ಬಂದ ಆರೋಪದ ಬಗ್ಗೆ ಇಸ್ರೇಲ್‌ ಅಧಿಕಾರಿಗಳು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next