ಬೀಳಗಿ: ನಾನು ಪ್ರತಿನಿಧಿಸುವ ಬೀಳಗಿ ಮತಕ್ಷೇತ್ರ ಮತ್ತು ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪ್ರತಿ ತಾಲೂಕಿನಲ್ಲಿ ಪ್ರಾಯೋಗಿಕವಾಗಿ 100 ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿ ನೀರಾವರಿ ಪದ್ದತಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ನಿರಾಣಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಕ್ಕಳಿಗೆ ಟ್ಯಾಬ್ ವಿತರಣೆ ಹಾಗೂ ಎಂ.ಎನ್. ನಿರಾಣಿ ಕಾಲೇಜು ಆವರಣದಲ್ಲಿ 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ 5 ಕೊಠಡಿಗಳ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಹೆಚ್ಚಿನ ಇಳುವರಿ ಪದ್ದತಿ ಅಳವಡಿಸುವ ಯೋಜನೆ ಮಾಡಲಾಗಿದ್ದು ಬರುವ ದಿನಗಳಲ್ಲಿ ಬೀಳಗಿ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆ ಸವಳು-ಜವಳು ಜಮೀನಿದ್ದು ಅದನ್ನು ಮತ್ತೆ ಫಲವತ್ತಾದ ಜಮೀನು ಮಾಡಲು ಬೇಕಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಆದ್ಯತೆ: ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಕಲಿಕಾ ಪದ್ದತಿ ಹಾಗೂ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಬೇಕಿರುವ ಹೊಸ ಹೊಸ ವಿಧಾನಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ತಂದು ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚುವಂತೆ ಮಾಡಲಾಗುವುದು ಎಂದು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಆದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಅದಕ್ಕಾಗಿ ಮಕ್ಕಳ ಆಸಕ್ತಿಗೆ ಅನುಸಾರವಾಗಿ ಅವರ ಬುದ್ದಿ ಶಕ್ತಿ ಹೆಚ್ಚಳ ಮಾಡುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ತಾಲೂಕಿನ ಬಿಇಒ ಹಾಗೂ ಶಿಕ್ಷಕರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ಈ ಬಾರಿಯೂ ತಾಲೂಕು 10 ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಜತೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ರ್‍ಯಾಂಕ್ ಪಡೆಯುವಂತಾಗಬೇಕು ಎಂದು ಹೇಳಿದರು. ಗುಣಮಟ್ಟದ ಕಾಮಗಾರಿಗೆ ಸೂಚನೆ: ಸರ್ಕಾರದಿಂದ ಜನರ ಅನುಕೂಲಕ್ಕಾಗಿ ಮಂಜೂರಾಗುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ನಿರ್ಮಿತಿ ಕೇಂದ್ರದಿಂದ ಆಗುವ ಕೆಲಸಗಳ ಬಗ್ಗೆ ನಿರಂತರ ನಿಗಾ ವಹಿಸಿ ಎಂದು ಕಾಲೇಜು ಸಿಬ್ಬಂದಿಗೆ ಸೂಚಿಸಿದರು.
ಪಪಂ ಸದಸ್ಯ ಮುತ್ತು ಬೋರ್ಜಿ, ಶ್ರೀಶೈಲ ಯಂಕಂಚಿಮಠ, ಬಸವರಾಜ ಉಮಚಗಿಮಠ, ಆನಂದ ಇಂಗಳಗಾಂವಿ, ಈರಣ್ಣ ತೋಟದ, ರಾಜೇಶ ಗುರಾಣಿ, ವಿಜಯಲಕ್ಷ್ಮೀ ಪಾಟೀಲ, ತಹಶೀಲ್ದಾರ್ ಶಂಕರ ಗೌಡಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ಎಸ್.ಎನ್. ಹಿರೇಮಠ, ಮಾಹಾಂತೇಶ ಕಪಾಲಿ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ಮಾರನೂರ ಮುಂತಾದವರು ಉಪಸ್ಥಿತರಿದ್ದರು.