Advertisement

Israel vs Iran; ಯುದ್ದೋನ್ಮಾದ ತೀವ್ರ ಹೆಚ್ಚಳ: ಇರಾನ್‌ಗೆ ಅಮೆರಿಕ ಎಚ್ಚರಿಕೆ

08:26 AM Oct 02, 2024 | Team Udayavani |

ಟೆಹರಾನ್ : ಯುದ್ದೋನ್ಮಾದ ತೀವ್ರವಾಗಿ ಹೆಚ್ಚಾಗಿದ್ದು ಇರಾನ್‌ ಬುಧವಾರ(ಅ2 )ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಅಮೆರಿಕ ಎಚ್ಚರಿಕೆ ನೀಡಿದೆ.

Advertisement

ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್  ಬಲವಾದ ಬೆಂಬಲವನ್ನು ವ್ಯಕ್ತಪಡಿಸಿ ಇರಾನ್‌ನ ದಾಳಿಯನ್ನು ನಿಷ್ಪರಿಣಾಮಕಾರಿ ಎಂದು ಬಣ್ಣಿಸಿದರು. ಇಸ್ರೇಲ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.

ಅಮೆರಿಕ ಸೇನಾ ಪಡೆಗಳು ಇಸ್ರೇಲ್ ಮೇಲಿನ ದಾಳಿಯನ್ನು ಸೋಲಿಸಲು ಸಹಾಯ ಮಾಡಿದ್ದು, ಬೈಡೆನ್ ಆಡಳಿತವು ಇಸ್ರೇಲಿ ಅಧಿಕಾರಿಗಳೊಂದಿಗೆ ಮುಂದಿನ ಕ್ರಮಗಳ ಕುರಿತು ಸಮಾಲೋಚನೆ ನಡೆಸುತ್ತಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.

ಧ್ವಂಸ ಮಾಡುವ ಪ್ರತಿಜ್ಞೆ

ಇರಾನ್‌ ಮಂಗಳವಾರ ರಾತ್ರಿ ಏಕಾಏಕಿ ಇಸ್ರೇಲ್‌ ಮೇಲೆ 180ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗಿದೆ.

Advertisement

ಇಸ್ರೇಲ್‌ಗೆ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿ, ನಾವು ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರ ನೀಡಿದರೆ ಧ್ವಂಸ ಮಾಡುವ ಪ್ರತಿಜ್ಞೆ ಮಾಡಿದೆ.

ಇಸ್ರೇಲಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಶೀಘ್ರ ಪ್ರತೀಕಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಇರಾನ್ ತನ್ನ ಕ್ಷಿಪಣಿ ದಾಳಿಯನ್ನು ಮತ್ತಷ್ಟು ಹೆಚ್ಚಿಸದೆ ಮುಕ್ತಾಯಗೊಳಿಸಿರುವುದಾಗಿ ಘೋಷಿಸಿತು.

ಇರಾನ್ ಮಂಗಳವಾರ ಕ್ಷಿಪಣಿಗಳ ಸುರಿಮಳೆ ಪ್ರಾರಂಭಿಸಿ ಟೆಲ್ ಅವೀವ್ ಬಳಿಯ ಮೂರು ಸೇನಾ ನೆಲೆಗಳು ಮತ್ತು ಪ್ರಮುಖ ವಾಯು ಮತ್ತು ರಾಡಾರ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದೆ. 90 ಪ್ರತಿಶತ ಕ್ಷಿಪಣಿಗಳು ತಮ್ಮ ಗುರಿಗಳನ್ನು ತಲುಪಿವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ. ಇಸ್ರೇಲಿ ಅಧಿಕಾರಿಗಳಿಂದ ಯಾವುದೇ ಗಾಯಗಳ ಬಗ್ಗೆ ಇದುವರೆಗೂ ವರದಿಯಾಗಿಲ್ಲ.

ಇಸ್ರೇಲ್ ಪ್ರತೀಕಾರ ತೀರಿಸಿಕೊಂಡರೆ “ಅಗಾಧ ವಿನಾಶ” ಸಂಭವಿಸುತ್ತದೆ ಎಂದು ಇರಾನ್ ಎಚ್ಚರಿಸಿದೆ. ಇರಾನ್ ಸಶಸ್ತ್ರ ಪಡೆಗಳು ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ “ನಿರ್ಣಾಯಕ ಪ್ರತಿಕ್ರಿಯೆ” ನೀಡಲಾಗಿದೆ ಎಂದು ಹೇಳಿದ್ದು, ‘ಇರಾನ್ ಯುದ್ಧಪಿಪಾಸು ಅಲ್ಲ, ಆದರೆ ಯಾವುದೇ ಬೆದರಿಕೆಗಳನ್ನು ದೃಢವಾಗಿ ವಿರೋಧಿಸುತ್ತದೆ. ಇದು ಕೇವಲ ನಮ್ಮ ಶಕ್ತಿಯ ಒಂದು ನೋಟವಾಗಿದೆ. ಇರಾನ್ ಅನ್ನು ಪ್ರಚೋದಿಸಬೇಡಿ” ಎಂದು ನೆತನ್ಯಾಹು ಅವರು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next