ತಂತ್ರಜ್ಞಾನ, ಮಾಧ್ಯಮ ಸೇರಿ ಈಗಾಗಲೇ ಹಲವು ಕ್ಷೇತ್ರಗಳಿಗೆ ಕಾಲಿಟ್ಟಿರುವ ಕೃತಕ ಬುದ್ಧಿಮತ್ತೆ ಇದೀಗ ರಕ್ಷಣಾ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಲು ಮುಂದಾಗಿದೆ.
ಇಸ್ರೇಲ್‌ನ ವಾಯುಪಡೆಯಲ್ಲಿ ವೈಮಾನಿಕ ದಾಳಿಗಳ ಮುಂದಾಳತ್ವವನ್ನು ಇನ್ನು ಎಐ ಆಧಾರಿತ ತಂತ್ರಜ್ಞಾನ ಫೈರ್ ಫ್ಯಾಕ್ಟರಿ ನೋಡಿಕೊಳ್ಳಲಿದೆ.
ಇರಾನ್ ಜತೆಗಿನ ಇಸ್ರೇಲ್ ಸಂಘರ್ಷದ ಕಿಡಿ ಹೊತ್ತಿಕೊಳ್ಳುತ್ತಿರುವ ನಡುವೆಯೇ, ಇಸ್ರೇಲ್‌ನ ಈ ಜಾಣ ನಡೆ ಮಹತ್ವ ಪಡೆದಿದೆ. ವರದಿಗಳ ಪ್ರಕಾರ, ಈಗಾಗಲೇ ಇಸ್ರೇಲ್‌ನಲ್ಲಿ ವೈಮಾನಿಕ ದಾಳಿಗಳ ಗುರಿ ನಿರ್ಣಯ, ದತ್ತಾಂಶ ಸಂಗ್ರಹಣೆಗೆ ಎಐ ಬಳಕೆ ಮಾಡಲಾಗುತ್ತಿದೆ.
ಈಗ ಇದರ ಜತೆಗೆ ಫೈರ್ ಫ್ಯಾಕ್ಟರಿ ಎಂಬ ಮತ್ತೊಂದು ಎಐ ತಂತ್ರಜ್ಞಾನದ ಸಹಾಯ ಪಡೆದುಕೊಳ್ಳಲಾಗುತ್ತದೆ. ಇದರ ಮೂಲಕ ಏಕಕಾಲದಲ್ಲೇ ಯುದ್ಧವಿಮಾನ ಹಾಗೂ ಡ್ರೋನ್‌ಗಳಿಗೆ ಸಾವಿರಾರು ದಾಳಿ ಗುರಿಗಳನ್ನು ನಿಶ್ಚಯಿಸುವ, ಅದಕ್ಕೆ ಪೂರಕ ಶಸ್ತ್ರಾಸ್ತ್ರಗಳ ಮಾಹಿತಿ ಮತ್ತು ಲೋಡಿಂಗ್ ಮಾತ್ರವಲ್ಲದೇ, ಯಾವ ಸಮಯಕ್ಕೆ ಶಸ್ತ್ರಾಸ್ತ್ರ ಉಡಾವಣೆಯಾಗಬೇಕೆಂದು ನಿಶ್ಚಯಿಸುವ ಕೆಲಸವನ್ನೂ ಎಐ ಮಾಡಲಿದೆ.