ಇಸ್ರೇಲ್: ಇಸ್ರೇಲ್ ನಿಯಂತ್ರಣದಲ್ಲಿರುವ ಗೋಲಾನ್ ಹೈಟ್ಸ್ ಪ್ರದೇಶದ ಮೇಲೆ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆ ರಾಕೆಟ್ ದಾಳಿ ನಡೆಸಿದ್ದು, ಘಟನೆಯಲ್ಲಿ ಮಕ್ಕಳು ಸೇರಿದಂತೆ ಹದಿಹರೆಯದ 12 ಮಂದಿ ಸಾವನ್ನಪ್ಪಿದ್ದಾರೆ. ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಹಿಜ್ಬುಲ್ಲಾ ಸಂಘಟನೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಪ್ರಧಾನಮಂತ್ರಿ ಕಚೇರಿ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ, ಕೊಲೆಗಡುಗರ ದಾಳಿಗೆ ಇಸ್ರೇಲ್ ನಿರುತ್ತರವಾಗಿ ಕುಳಿತಿರುವುದಿಲ್ಲ ಎಂದು ಕಿಡಿಕಾರಿದ್ದು, ಈ ದಾಳಿಗೆ ಹಿಜ್ಬುಲ್ಲಾ ಭಾರೀ ಬೆಲೆ ತೆರಲೇಬೇಕು ಎಂದು ಗುಡುಗಿದೆ.
ಶನಿವಾರ (ಜು.27) ಫುಟ್ಬಾಲ್ ಮೈದಾನದ ಮೇಲೆ ಹಿಜ್ಬುಲ್ಲಾ ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ 12 ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಇದು ಯುದ್ಧ ಆರಂಭವಾದ ನಂತರ ಹಿಜ್ಬುಲ್ಲಾ ಉಗ್ರರು ನಡೆಸಿದ ಮಾರಣಾಂತಿಕ ದಾಳಿಯಾಗಿದೆ ಎಂದು ವರದಿ ವಿವರಿಸಿದೆ.
ಇಸ್ರೇಲ್ ಆರೋಪವನ್ನು ಹಿಜ್ಬುಲ್ಲಾ ನಿರಾಕರಿಸಿದೆ. ಈ ದಾಳಿಯಲ್ಲಿ ಶಾಮೀಲಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ. ಅಮೆರಿಕ ಪ್ರವಾಸದ ಅವಧಿಯನ್ನು ನೆತನ್ಯಾಹು ಕಡಿತಗೊಳಿಸಿದ್ದು, ಯಾವಾಗ ಇಸ್ರೇಲ್ ಗೆ ವಾಪಸ್ ಆಗಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ವರದಿ ತಿಳಿಸಿದೆ.