ಇಸ್ರೇಲ್: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ಶನಿವಾರ(ಮೇ 15) ಐದನೇ ದಿನಕ್ಕೆ ಮುಂದುವರಿದಿದ್ದು,ರಾಕೆಟ್, ಶೆಲ್ ದಾಳಿ ಇದೀಗ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಂಡಿದೆ. ಕಳೆದ ಒಂದು ವಾರದಿಂದ ಉಭಯ ದೇಶಗಳ ನಡುವೆ ನಡೆಯುತ್ತಿರುವ ಘರ್ಷಣೆಗೆ ಗಾಜಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ ಎಂದು ಪ್ಯಾಲೆಸ್ಟೈನ್ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ ಸರಣಿ: ಟಿ20 ಬಳಿಕ ಏಕದಿನ-ಟೆಸ್ಟ್ ತಂಡಕ್ಕೂ ಆಯ್ಕೆಯಾದ 17 ವರ್ಷದ ಶಫಾಲಿ ವರ್ಮಾ
ಪ್ಯಾಲೆಸ್ಟೈನ್ ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಇಸ್ರೇಲ್ ವೈಮಾನಿಕ ದಾಳಿಗೆ ಮಸೀದಿ ಧ್ವಂಸವಾಗಿದೆ ಎಂದು ತಿಳಿಸಿದೆ. ಗಾಜಾದಿಂದಲೂ ನಿರಂತರವಾಗಿ ಇಸ್ರೇಲ್ ನಗರದ ಮೇಲೆ ರಾಕೆಟ್ ದಾಳಿ ನಡೆಯುತ್ತಿದ್ದು, ಈ ದಾಳಿಯ ಹೊಣೆಯನ್ನು ಹಮಾಸ್ ಬಂಡುಕೋರರು ಹೊತ್ತುಕೊಂಡಿರುವುದಾಗಿ ವರದಿ ವಿವರಿಸಿದೆ.
ಗಾಜಾ ಮೇಲಿನ ದಾಳಿ, ಹಿಂಸಾಚಾರಕ್ಕೆ 32 ಮಕ್ಕಳು, 21 ಮಹಿಳೆಯರು ಸೇರಿದಂತೆ ಈವರೆಗೆ 132 ಮಂದಿ ಸಾವನ್ನಪ್ಪಿದ್ದು, 950ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಗಾಜಾ ಪಟ್ಟಿ ಪ್ರದೇಶದಲ್ಲಿ ಹಮಾಸ್ ಬಂಡುಕೋರರ ಶಸ್ತ್ರಾಸ್ತ್ರ ಉತ್ಪಾದನೆಯ ಸುರಂಗಗಳ ಮೇಲೆ ಇಸ್ರೇಲ್ ಸೇನೆ ಶುಕ್ರವಾರ ಸಾವಿರಾರು ರಾಕೆಟ್, ಶೆಲ್ ದಾಳಿ ನಡೆಸುವ ಮೂಲಕ ಧ್ವಂಸಗೊಳಿಸುವ ಪ್ರಯತ್ನ ನಡೆಸಿರುವುದಾಗಿ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಅಪಾರ ಪ್ರಮಾಣದ ಸೇನೆಯನ್ನು ನಿಯೋಜಿಸಿದೆ.