ಹೊಸದಿಲ್ಲಿ: ಕಳೆದ ಎರಡು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಗಾಜಾಪಟ್ಟಿಯಲ್ಲಿ ನಡೆದ ಯುದ್ಧದ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(CWC) ತನ್ನ ನಿರಾಶೆ ಮತ್ತು ದುಃಖವನ್ನು ವ್ಯಕ್ತಪಡಿಸಿ, ನಿರ್ಣಯವನ್ನು ಅಂಗೀಕರಿಸಿದೆ.
ಇಸ್ರೇಲ್ ಜನರ ಮೇಲಿನ ಹಮಾಸ್ ಉಗ್ರರ ಕ್ರೂರ ದಾಳಿಯನ್ನು ಖಂಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ಯಾಲೇಸ್ಟಿನಿಯನ್ ಜನರ ಹಕ್ಕುಗಳ ಕುರಿತಾಗಿ ಧ್ವನಿಯೆತ್ತಿದೆ.
ಭೂಮಿ, ಸ್ವ-ಸರಕಾರ, ಘನತೆ ಮತ್ತು ಗೌರವದಿಂದ ಬದುಕಲು ಪ್ಯಾಲೇಸ್ಟಿನಿಯನ್ ಜನರ ಹಕ್ಕುಗಳಿಗಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತನ್ನ ದೀರ್ಘಕಾಲದ ಬೆಂಬಲವನ್ನು ಪುನರುಚ್ಚರಿಸುತ್ತದೆ.ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತತ್ ಕ್ಷಣವೇ ಕದನ ವಿರಾಮಕ್ಕೆ ಬೇಡಿಕೆ ಮಂದಿಡುತ್ತದೆ ಮತ್ತು ಪ್ರಸ್ತುತ ಸಂಘರ್ಷಕ್ಕೆ ಕಾರಣವಾದ ಅನಿವಾರ್ಯ ಸಮಸ್ಯೆಗಳು ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ವಿಷಯಗಳ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಸಬೇಕು ಎಂದು ಸೋಮವಾರ ನಡೆದ CWC ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಹಮಾಸ್ ಉಗ್ರರ ಭಾರೀ ದಾಳಿಗೆ ಪ್ರತಿಯಾಗಿ ಇಸ್ರೇಲ್ ತೀವ್ರ ಪ್ರತಿ ದಾಳಿ ಆರಂಭಿಸಿದ್ದು, ಗಾಜಾ ಮೇಲೆ ದಿಗ್ಬಂಧನ ವಿಧಿಸಿದೆ. ಈಗಾಗಲೇ ಯುದ್ಧ ಆರಂಭವಾಗಿದ್ದು 1,200 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್ ನಾಗರಿಕರ ಮೇಲಿನ ಭೀಕರ ದಾಳಿಯನ್ನು ಕಾಂಗ್ರೆಸ್ ಭಾನುವಾರ ಖಂಡಿಸಿತ್ತು, ಯಾವುದೇ ರೀತಿಯ ಹಿಂಸಾಚಾರವು ಎಂದಿಗೂ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಮತ್ತು ಅದು ನಿಲ್ಲಬೇಕು. ಇಸ್ರೇಲಿಗಳ ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಖಾತ್ರಿಪಡಿಸುವ ಮೂಲಕ ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಪೂರೈಸಬೇಕು ಎಂದು ಪಕ್ಷ ಯಾವಾಗಲೂ ನಂಬುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಹೇಳಿಕೆ ನೀಡಿದ್ದರು.