Advertisement
ಅಂದ ಹಾಗೆ ಈ ಬಾರಿ ಇದು ಸಂಘರ್ಷದ ಹಂತಕ್ಕೆ ನಿಂತಿಲ್ಲ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಹು ಹೇಳಿರುವಂತೆ ಅಲ್ಲಿ ಈಗ ಅಲ್ಲಿ ಯುದ್ಧ ನಡೆಯುತ್ತಿದೆ. ಅಲ್ಲಿ ಹೋದವರಿಗೆ ರಾಕೆಟ್ ಹಾಗೂ ಸೈರನ್‌ನ ಶಬ್ದ ಹೊಸದೇನೂ ಅಲ್ಲ. ಅಲ್ಲಿ ದುಡಿಯುವ ಕನ್ನಡಿಗರು ಈ ಪ್ರಭಾವಿ ದೇಶದ ಮೇಲೆ ನಡೆಯುವ ರಾಕೆಟ್ ದಾಳಿ, ಐರನ್ ಡೋಮ್ ಎಂಬ ತಂತ್ರಜ್ಞಾನದ ಮೂಲಕ ಅದನ್ನು ಹೊಡೆದು ಹಾಕುವ ಇತ್ಯಾದಿಗಳ ಕುರಿತು ಆಗಾಗ್ಗೆ ತಮ್ಮ ಸಂಬಂಧಿಕರೊಂದಿಗೆ ವಿಡಿಯೋ ಹಂಚಿಕೊಳ್ಳುತ್ತಲೇ ಇರುತ್ತಾರೆ.
Related Articles
Advertisement
ಅರಬ್ ಮಾಧ್ಯಮಗಳು ನಿರಂತರವಾಗಿ ಇಸ್ರೇಲ್ ಅನ್ನು ಒಂದು ರಾಕ್ಷಸನಂತೆ ಬಿಂಬಿಸುತ್ತಾ ಬಂದಿವೆ. ಕ್ರೆ„ಸ್ತ, ಮುಸಲ್ಮಾನ ಹಾಗೂ ಯಹೂದಿಗಳಿಗೆ ಪವಿತ್ರವೆನಿಸಿರುವ ಸ್ಥಳಗಳನ್ನು ತನ್ನ ಅಂಕೆಯಲ್ಲಿ ಇರಿಸಿರುವ ಈ ಯಹೂದಿ ರಾಷ್ಟ್ರದ ಪ್ರತಿ ಹಿನ್ನಡೆಯನ್ನು ಅರಬ್ ಮಾಧ್ಯಮಗಳು ಸಂಭ್ರಮಿಸಿದರೆ, ಇಸ್ರೇಲ್ ಆಕ್ರಮಣವನ್ನು ಕಟುವಾದ ಮಾತಿನಿಂದ ಖಂಡಿಸುತ್ತಲೇ ಬಂದಿವೆ. ಈ ಯಹೂದಿ ರಾಷ್ಟ್ರವೂ ಕೂಡಾ ಅರಬ್ ರಾಷ್ಟ್ರಗಳ ಕುರಿತು ಬಿಗಿಯಾದ ಪಟ್ಟನ್ನೇ ಹೊಂದಿತ್ತು.
ಇನ್ನೊಂದೆಡೆ ಪ್ಯಾಲೆಸ್ತೀನ್ ಹೋರಾಟದ ಮುಖವೆನಿಸಿದ್ದ ಯಾಸರ್ ಅರಾಫತ್ ಅವರು ಎರಡು ದಶಕಗಳ ಹಿಂದೆ ಸಾವನ್ನಪ್ಪಿದ ನಂತರ ಇವರ ನಾಯಕತ್ವದಲ್ಲಿ ನಿರ್ವಾತವೊಂದು ಕಾಣಿಸಿಕೊಂಡಿದೆ. ಸೂಕ್ತ ನಾಯಕತ್ವದ ಕೊರತೆಯ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳು ಸಹ ಮೌನಕ್ಕೆ ಶರಣಾಗುವಂತೆ ಕಾಣುತ್ತಿದೆ. ತಮ್ಮ ಹೋರಾಟಕ್ಕೆ ಸರಿಯಾದ ಬೆಂಬಲ ಸಿಗುತ್ತಿಲ್ಲ ಎಂಬುದಾಗಿ ಪ್ಯಾಲೆಸ್ತೀನಿಯರೇ ಬೇಸರ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಸರಿಯಾಗಿ ಐದು ದಶಕಗಳ ಹಿಂದೆ ಇಸ್ರೇಲ್ ವಿರುದ್ಧದ ಹೋರಾಟಕ್ಕೆ ನಾಯಕತ್ವ ವಹಿಸಿದ್ದ ಈಜಿಪ್ಟ್ ದೇಶವು 1979ರಲ್ಲೇ ಇಸ್ರೇಲ್ ಜೊತೆಗೆ ತನ್ನ ಸಂಬಂಧವನ್ನು ಸರಿಪಡಿಸಿಕೊಂಡು ಸುಮ್ಮನಾಯಿತು. ಈ ಹೋರಾಟದಲ್ಲಿ ಈಜಿಪ್ಟ್ ಗೆ ಸಾಥ್ ನೀಡಿದ್ದ ಜೋರ್ಡಾನ್ ಸಹ 1994ರಲ್ಲಿ ಇದೇ ದಾರಿಯನ್ನು ಹಿಡಿದು ಸುಮ್ಮನಾಯಿತು. ಅಷ್ಟೇ ಅಲ್ಲದೆ ಇಸ್ರೇಲ್ ನಲ್ಲಿ ಉತ್ಪತ್ತಿಯಾಗುತ್ತಿದ್ದ ಹಣ್ಣು ಹಂಪಲುಗಳು, ಆಲಿವ್ ಎಣ್ಣೆ ಇತ್ಯಾದಿ ಉತ್ಪನ್ನಗಳನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುವುದಕ್ಕಾಗಿ ತನ್ನ ಮೂಲಕ ರಹದಾರಿಯನ್ನು ತೆರೆದುಕೊಟ್ಟಿತು. ಏಕೆಂದರೆ ಇಸ್ರೇಲ್ ಉತ್ಪನ್ನಗಳಿಗೆ ಆ ಸಂದರ್ಭದಲ್ಲಿ ಈ ತೈಲ ಸಮೃದ್ಧ ಗಲ್ಫ್ ರಾಷ್ಟ್ರಗಳಿಗೆ ನೇರ ಪ್ರವೇಶವಿರಲಿಲ್ಲ.
ಆದರೆ ಮೂರು ವರ್ಷಗಳ ಹಿಂದೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ನಡುವೆ ನಡೆದ ಒಡಂಬಡಿಕೆಯು ಮಧ್ಯಪ್ರಾಚ್ಯ ರಾಷ್ಟ್ರಗಳ ಅಂತರಾಷ್ಟ್ರೀಯ ಸಂಬಂಧದ ಸಮೀಕರಣವನ್ನೇ ಬದಲಾಯಿಸಿತು. ಪುಟ್ಟ ಗಲ್ಫ್ ರಾಷ್ಟ್ರವಾದ ಬಹ್ರೈನ್ ಸಹ ಜೆರುಸಲೇಂ ಜೊತೆಗೆ ತನ್ನ ಸಂಬಂಧವನ್ನು ಸುಧಾರಿಸಲು ಮುಂದಾಯಿತು. ಪರಿಣಾಮವಾಗಿ ಕೆಲ ಗಲ್ಫ್ ರಾಷ್ಟ್ರಗಳು ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧದ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು.
ಸೌದಿ ಅರೇಬಿಯಾ, ಒಮಾನ್, ಬಹ್ರೈನ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈಟ್ ರಾಷ್ಟ್ರಗಳನ್ನು ಒಳಗೊಂಡಿರುವ ಗಲ್ಫ್ ರಾಷ್ಟ್ರಗಳ ಹಿರಿಯಣ್ಣನೆನಿಸಿದ ಸೌದಿಯು ನೇರವಾಗಿ ಈ ಯಹೂದಿ ರಾಷ್ಟ್ರದ ಜೊತೆಗೆ ಸಂಬಂಧವನ್ನು ಸುಧಾರಿಸದೇ ಇದ್ದರೂ, ಅಮೆರಿಕದ ಒತ್ತಡಕ್ಕೆ ಮಣಿದು ತಣ್ಣಗಾಗಿದೆ. ಹೀಗಾಗಿಯೇ ಪ್ಯಾಲೆಸ್ತೀನಿನ ಹೋರಾಟವು ಕಳೆಗುಂದಿತ್ತು. ಆಗಾಗ್ಗೆ ಸಣ್ಣಪುಟ್ಟ ದಾಳಿಗಳನ್ನು ನಡೆಸಿ ಕೈ ಸುಟ್ಟುಕೊಳ್ಳುತ್ತಿದ್ದರೇ ಹೊರತು ಇಷ್ಟೊಂದು ದೊಡ್ಡ ಪ್ರಮಾಣದ ಸಂಘಟಿತ ದಾಳಿ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಲ್ಲ. ಒಂದೇ ದಿನದ ದಾಳಿಯಲ್ಲಿ 600ಕ್ಕೂ ಹೆಚ್ಚಿನ ಇಸ್ರೇಲಿಗಳು ಸಾವನ್ನಪ್ಪಿದ್ದರೆ 1,500ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇಸ್ರೇಲಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಮುಖ್ಯಸ್ಥರಾದ ನಿವೃತ್ತ ಜನರಲ್ ಜಿಯೊರಾ ಎರ್ಯಾಂಡ್ ಹೇಳಿರುವ ಪ್ರಕಾರ 50 ವರ್ಷಗಳ ಸನ್ನಿವೇಶ ಮತ್ತೆ ಮರುಕಳಿಸಿದೆ. ಈ ಸಂಯೋಜಿತ ಹೋರಾಟದಿಂದಾಗಿ ಇಸ್ರೇಲ್ ಅಚ್ಚರಿಗೊಳಗಾಗಿದೆ.
ಇಸ್ರೇಲ್ ಮೇಲಿನ ದಾಳಿಯನ್ನು ಹಮಾಸ್ ಸಂಭ್ರಮಿಸುತ್ತಿದೆ. ಇಸ್ರೇಲ್ ನಡೆಸುತ್ತಿರುವ ಅನ್ಯಾಯ, ಅತಿಕ್ರಮಣದ ವಿರುದ್ಧ ತನ್ನ ಗೆಲುವೆಂದು ಈ ಉಗ್ರರ ಸಂಘಟನೆಯು ಹೇಳಿಕೊಂಡಿದೆ. ಈ ಹಮಾಸ್‌ಗೆ ಇರಾನ್‌ನ ಬೆಂಬಲವೇನೋ ಇದೆ. ಲೆಬನಾನಿನ ಹಿಜ್ಬುಲ್ಲಾ ಎಂಬ ಉಗ್ರವಾದಿ ಸಂಘಟನೆಯೂ ಇವರೊಂದಿಗೆ ಕೈ ಜೋಡಿಸಿದೆ ಎನ್ನಲಾಗುತ್ತಿದೆ. ಆದರೆ ಈ ಯಹೂದಿ ರಾಷ್ಟ್ರ ಸುಮ್ಮನಿರುವುದಿಲ್ಲ ಎಂಬುದು ಅವರಿಗೂ ಗೊತ್ತು. ಇಸ್ರೇಲ್ ನಡೆಸುವ ಪ್ರತಿದಾಳಿ ಎಷ್ಟು ಭೀಕರವಾಗಿರುತ್ತದೆ ಎಂಬುದು ಒಂದು ದಿನದೊಳಗೆಯೇ ತಿಳಿದು ಬಂದಿದೆ. ಹಮಾಸ್ ಬಂಡುಕೋರರು ಮಾತ್ರವಲ್ಲದೆ, ಪ್ಯಾಲೆಸ್ತೀನಿನ ನಿವಾಸಿಗಳು ಸಹ ಇಸ್ರೇಲ್ ನೊಳಗೆ ನಡೆಯುವ ಪ್ರತಿಯೊಂದು ಸಾವಿಗೂ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಪ್ರತಿ ಬಾರಿಯೂ ಪ್ಯಾಲೆಸ್ತೀನ್ ಕಡೆಯಿಂದ ದಾಳಿ ನಡೆದಾಗ ಪ್ರತಿದಾಳಿ ನಡೆಸುವ ಇಸ್ರೇಲ್, ವಿರೋಧಿ ಪಾಳಯದಲ್ಲಿ ಹತ್ತು ಪಟ್ಟು ನಷ್ಟವನ್ನುಂಟು ಮಾಡಿ ಸುಮ್ಮನಾಗುತ್ತದೆ. ಅಲ್ಲಿಗೆ ಒಂದು ಅಧ್ಯಾಯವು ಮುಗಿಯುತ್ತದೆ. ಆ ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದವರಿಗೆ ಇದರಲ್ಲೇನೂ ಹೊಸತು ಕಾಣಿಸಿಕೊಳ್ಳುವುದಿಲ್ಲ. ಆದರೂ ಹಮಾಸ್ ಬಂಡುಕೋರರು ಈ ಹುಂಬ ಧೈರ್ಯವನ್ನು ತೋರುವ ಸಾಹಸಕ್ಕೆ ಯಾಕೆ ಕೈ ಹಾಕಿದ್ದಾರೆ ಎಂಬ ಯಕ್ಷಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ.
ಮೆಲ್ವಿನ್ ಕಲತ್ರಪಾದೆ