ಇಸ್ರೇಲ್: ಗಾಜಾ-ಈಜಿಪ್ಟ್ ಗಡಿಭಾಗದಲ್ಲಿ ಹಮಾಸ್ ಜತೆ ಸಂಭಾವ್ಯ ಕದನವಿರಾಮ ಒಪ್ಪಂದದಂತೆ ಮಿಲಿಟರಿ ಪಡೆಯನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದ್ದೇನೆ ಎಂಬ ಹೇಳಿಕೆಯನ್ನು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಗುರುವಾರ (ಆ.22) ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ಅಮೆರಿಕ ಬೆಂಬಲಿತ ಪ್ರಸ್ತುತ ಕದನ ವಿರಾಮ ಪ್ರಸ್ತಾಪದಂತೆ ಒತ್ತೆಯಾಳುಗಳ ಬಿಡುಗಡೆ ಹಾಗೂ ಗಾಜಾಪಟ್ಟಿ ಮತ್ತು ಈಜಿಪ್ಟ್ ಗಡಿಭಾಗದಲ್ಲಿನ ಸೇನಾಪಡೆಯನ್ನು ಹಿಂಪಡೆಯಬೇಕೆಂಬ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ಸೂಚನೆಯನ್ನು ಇಸ್ರೇಲ್ ಅಂಗೀಕರಿಸಿರುವುದಾಗಿ ಇಸ್ರೇಲ್ ಸ್ವಾಮಿತ್ವದ Kan ಟಿವಿ ವರದಿ ಪ್ರಸಾರ ಮಾಡಿತ್ತು.
ಮಾತುಕತೆಯಲ್ಲಿ ಹಮಾಸ್ ಮತ್ತು ಈಜಿಪ್ಟ್ ಮಹತ್ವದ ಪಾತ್ರ ವಹಿಸಿದ್ದು, ಫಿಲಡೆಲ್ಫಿ ಕಾರಿಡಾರ್ ಮೇಲೆ ಇಸ್ರೇಲ್ ಹಿಡಿತವನ್ನು ಪ್ರಬಲವಾಗಿ ವಿರೋಧಿಸಿರುವುದಾಗಿ ವರದಿ ವಿವರಿಸಿತ್ತು.
ಸೇನಾಪಡೆ ಹಿಂಪಡೆಯುವ ಈ ವರದಿ ಸತ್ಯಕ್ಕೆ ದೂರವಾದದ್ದು, ಫಿಲಡೆಲ್ಫಿ ಕಾರಿಡಾರ್ ಮೇಲಿನ ಹಿಡಿತ ಬಿಟ್ಟುಕೊಡಲು ಇಸ್ರೇಲ್ ಸಹಮತ ಸೂಚಿಸಿಲ್ಲ ಎಂದು ನೆತನ್ಯಾಹು ಪ್ರತಿಕ್ರಿಯೆ ನೀಡಿರುವುದಾಗಿ ಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.