ಬೆಂಗಳೂರು: ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಾದೂರಿನಲ್ಲಿ ಕಾರ್ಯಾಚಣೆ ನಡೆಸುತ್ತಿರುವ ಐಎಸ್‌ಪಿಆರ್‌ಎಲ್ ಕಚ್ಚಾ ತೈಲ ಸಂಗ್ರಹಣಾ ಘಟಕದ ಎರಡನೇ ಹಂತದದ ಕಾಮಗಾರಿಗೆ ಜಮೀನು ಬಿಟ್ಟುಕೊಟ್ಟ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೆ ಕೇಳಿದ ಶಾಸಕ ಲಾಲಾಜಿ ಆರ್. ಮೆಂಡನ್, ಸ್ವಾಧೀನಪಡಿಸಿಕೊಂಡ ಜಮೀನಿಗೆ ದರ ನಿಗದಪಡಿಸಬೇಕು ಹಾಗೂ ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಮುರಗೇಶ ನಿರಾಣಿ, ಕಾಯ್ದೆಯನ್ವಯ ಸ್ವಾಧೀನಪಡಿಸಿಕೊಂಡ ಜಮೀನಿಗೆ ದರ ನಿಗದಿಪಡಿಸಲಾಗುವುದು. ಯೋಜನೆಗೆ ತಮ್ಮ ಭೂಮಿ ಬಿಟ್ಟುಕೊಟ್ಟ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು. ಹೆಚ್ಚಿನ ಜನ ಇದ್ದರೂ ಅವರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಐಎಸ್‌ಪಿಆರ್‌ಎಲ್ 2ನೇ ಹಂತದ ಯೋಜನೆಗೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಾದೂರು ಮತ್ತು ಕಳತ್ತೂರು ಗ್ರಾಮಗಳ ಒಟ್ಟು 210 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು 2021ರ ಜ.12ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಮಂಗಳೂರು ಇವರು ಭೂಮಾಲೀಕರಿಗೆ ಕಲಂ 28 (2)ರಡಿ ಭೂಮಾಲೀಕರಿಗೆ ನೋಟಿಸ್ ಕೊಟ್ಟು ಕಲಂ 28 (3)ರಡಿ ವಿಚಾರಣೆ ನಡೆಸಿದ್ದು, ಜಂಟಿ ಅಳತೆ ಕಾರ್ಯ ಪ್ರಗತಿಯಲ್ಲಿದೆ.
ಈ ಯೋಜನೆಗೆ ಪಾದೂರು ಮತ್ತು ಕಳತ್ತೂರು ಗ್ರಾಮಗಳ 157 ರೈತರ 199.81 ಎಕರೆ ಖಾಸಗಿ ಮತ್ತು 10.62 ಎಕರೆ ಸರ್ಕಾರಿ ಜಮೀನು ಸೇರಿ ಒಟ್ಟು 210.43 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವ ನಿರಾಣಿ ಮಾಹಿತಿ ನೀಡಿದರು.