Advertisement
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ ಕೆ ಸುರೇಶ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, “ನನಗೆ ಕುಮಾರಸ್ವಾಮಿ ಅವರ ವಿಚಾರ ಮಾತನಾಡಲು ಇಷ್ಟವಿಲ್ಲ. ಆದರೂ ಅವರಿಗೆ ಒಂದು ವಿಚಾರ ಕೇಳಬಯಸುತ್ತೇನೆ. ನೀವು ಈ ಜಿಲ್ಲೆಯ ಕ್ಷೇತ್ರವೊಂದರ ಶಾಸಕರು. ಕೋವಿಡ್ ಬಂದಾಗ ಈ ಭಾಗದ ಬಡವರ ರಕ್ಷಣೆಗೆ ನೀವು ಯಾರಾದರೂ ಒಬ್ಬರು ಮುಂದೆ ಬಂದರಾ? ಇಲ್ಲ.ಆದರೆ, ಡಿ.ಕೆ ಸುರೇಶ್ ಅವರು ಪ್ರತಿ ಕುಟುಂಬಕ್ಕೆ ಆಹಾರ ಪದಾರ್ಥ, ಮೆಡಿಕಲ್ ಕಿಟ್ ವಿತರಿಸಿದರು. ರೈತರಿಗೆ ಮಾರುಕಟ್ಟೆ ಇಲ್ಲದಾಗ, ರೈತರು ಬೆಳೆದ ತರಕಾರಿಗಳನ್ನು ಅವರ ಜಮೀನಿನಿಂದ ಖರೀದಿ ಮಾಡಿದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತರಕಾರಿ ಖರೀದಿಸಿ ಅದನ್ನು ಜನಸಾಮಾನ್ಯರಿಗೆ ಉಚಿತವಾಗಿ ಹಂಚಿದ್ದಾರೆ. ಆ ಮೂಲಕ ರೈತರು ಹಾಗೂ ಬಡವರನ್ನು ರಕ್ಷಣೆ ಮಾಡಿದ್ದಾರೆ’ ಎಂದರು.
Related Articles
Advertisement
ದಳದ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದು, ಅದರ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ. ದಳ ಈಗ ಎಲ್ಲಿದೆ? ಕುಮಾರಣ್ಣ ಇದೇ ಜಿಲ್ಲೆಯಿಂದ 2 ಬಾರಿ ಮುಖ್ಯಮಂತ್ರಿಯಾಗಿ ಈಗ ಈ ಜಿಲ್ಲೆ ಬಿಟ್ಟು ಮಂಡ್ಯಕ್ಕೆ ಹೋಗುತ್ತಿದ್ದಾರೆ. ನೀವು ಅವರಿಗೆ ಟಾಟಾ ಗುಡ್ ಬೈ ಹೇಳಬೇಕು. ನೀವು ಯಾರಿಗೆ ಅಧಿಕಾರ ಕೊಟ್ಟಿದ್ದೀರಿ ಅವರು ನಿಮ್ಮನ್ನು ನಂಬದೇ ಪಕ್ಕದ ಕ್ಷೇತ್ರಕ್ಕೆ ಹೋಗಿದ್ದಾರೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಆ ಪಕ್ಷದ ನಾಯಕರಿಗೆ ನಂಬಿಕೆ ಇಲ್ಲ. ನಿಮ್ಮ ಪರವಾಗಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಅಧಿಕಾರ ನಮ್ಮ ಕೈಯಲ್ಲಿದೆ, ನಿಮ್ಮ ರಕ್ಷಣೆ ನಾವು ಮಾಡುತ್ತೇವೆ. ನೀವು ನಮ್ಮ ಜತೆ ಕೈಜೋಡಿಸಿ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿಹೋಯಿತು, ತೆನೆಯೊತ್ತ ಮಹಿಳೆ ತೆನೆ ಎಸೆದು ಬಿಜೆಪಿ ಸೇರಿಕೊಂಡಳು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು ಎಂದರು.