ವಾಷಿಂಗ್ಟನ್:ಐಸಿಸ್ (ಇಸ್ಲಾಮಿಕ್ ಸ್ಟೇಟ್ ಮುಖಂಡ) ಅಬುಬಕರ್ ಅಲ್ ಬಗ್ದಾದಿ ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಘೋಷಿಸಿದ್ದಾರೆ.
ಬಗ್ದಾದಿ ಓರ್ವ ಅತ್ಯಂತ ನಿಷ್ಕರುಣಿ ಹಾಗೂ ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಯ ನಾಯಕನಾಗಿದ್ದು, ಆತನನ್ನು ಅಮೆರಿಕದ ಪಡೆಗಳು ಕಾರ್ಯಾಚರಣೆಯಲ್ಲಿ ಹತ್ಯೆಗೈದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ವಿಶ್ವದ ನಂಬರ್ ವನ್ ಉಗ್ರ ಅಬುಬಕರ್ ಅಲ್ ಬಗ್ದಾದಿ ಇನ್ನಿಲ್ಲ ಎಂಬುದನ್ನು ಟ್ರಂಪ್ ಅಧಿಕೃತವಾಗಿ ಬಹಿರಂಗಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಬಗ್ದಾದಿ ಐಸಿಸ್ ಉಗ್ರ ಸಂಘಟನೆಯ ಸ್ಥಾಪಕ ಮತ್ತು ಮುಖಂಡನಾಗಿದ್ದ. ಇಡೀ ಜಗತ್ತಿಗೆ ಐಸಿಸ್ ಸಂಘಟನೆ ಕ್ರೂರಿಯಾಗಿತ್ತು ಎಂದು ಟ್ರಂಪ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ವಿಶ್ವದ ಮೋಸ್ಟ್ ವಾಂಟೆಡ್ ಉಗ್ರನ ವಿರುದ್ಧ ಅಮೆರಿಕ ಪಡೆ ನಡೆಸಿದ ಎರಡು ಗಂಟೆಗಳ ಕಾರ್ಯಾಚರಣೆಗೆ ರಷ್ಯಾ, ಇರಾಕ್, ಟರ್ಕಿ, ಸಿರಿಯಾ ಸಹಕರಿಸಿದ್ದಕ್ಕೆ ಟ್ರಂಪ್ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ನನ್ನ ಆಡಳಿತಾವಧಿಯಲ್ಲಿ ದೇಶದ ಭದ್ರತೆಯ ದೃಷ್ಟಿಯ ಹಿನ್ನೆಲೆಯಲ್ಲಿ ಬಗ್ಗಾದಿಯನ್ನು ಸೆರೆ ಹಿಡಿಯವುದು ಅಥವಾ ಕೊಲ್ಲುವುದು ಮೊದಲ ಆದ್ಯತೆಯಾಗಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ.
ಇದ್ಲಿಬ್ ಪ್ರಾಂತ್ಯದ ಬಾಗ್ದಾದಿ ಅಡಗು ತಾಣಗಳ ಮೇಲೆ ಅಮೆರಿಕದ ವಿಶೇಷ ಪಡೆಗಳು ವಾಯುವ್ಯ ಸಿರಿಯಾದಲ್ಲಿ ಭಾರೀ ಸೇನಾ ದಾಳಿ ನಡೆಸಿದ್ದವು. ಈ ಕಾರ್ಯಾಚರಣೆಯಲ್ಲಿ ಬಾಗ್ದಾದಿ ನಾಯಿಯಂತೆ ಸಾವನ್ನಪ್ಪಿರುವುದಾಗಿ ಟ್ರಂಪ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಹೇಡಿಯಂತೆ ಬಾಗ್ದಾದಿ ಸಾವನ್ನಪ್ಪುವ ಮೂಲಕ ಇಡೀ ಜಗತ್ತು ಸುರಕ್ಷಿತ ಸ್ಥಳವಾಗಿದೆ. ಅಮೆರಿಕಕ್ಕೆ ದೇವರ ಆಶೀರ್ವಾದ ಇರಲಿ ಎಂದು ಟ್ರಂಪ್ ತಿಳಿಸಿದ್ದಾರೆ.