ಜಾಲಹಳ್ಳಿ: ಸಮಾಜ, ನಾಡಿನ ಏಳಿಗೆ, ಲೋಕ ಕಲ್ಯಾಣಕ್ಕಾಗಿ ಸುಕ್ಷೇತ್ರ ವೀರಘೋಟದಲ್ಲಿ ಹಮ್ಮಿಕೊಂಡಿರುವ 1.96 ಲಕ್ಷ ಇಷ್ಟಲಿಂಗ ಪೂಜಾ ಐತಿಹಾಸಿಕವಾಗಿದ್ದು, ಎಲ್ಲರ ಸಹಕಾರದಿಂದ ಯಶಸ್ವಿಯಾಗಲಿದೆ. ಇಂತಹ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯಾಗುತ್ತಿರುವುದು ನಮ್ಮ ಪುಣ್ಯ ಎಂದು ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಸಮೀಪದ ಸುಕ್ಷೇತ್ರ ವೀರಘೋಟ ಗ್ರಾಮದ ಆದಿಲಿಂಗ ಮೌನೇಶ್ವರ ಆಸನಕಟ್ಟೆಯಲ್ಲಿ ಶುಕ್ರವಾರ ಆರಂಭವಾದ 1.96ಲಕ್ಷ ಗಣಗಳ ಇಷ್ಟಲಿಂಗ ಪೂಜೆ, 50ನೇ ವರ್ಷದ ಸ್ಮರಣೋತ್ಸವ ಸಮಾರಂಭದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೂರ್ವಭಾವಿ ಸಭೆಗೆ ನಾನು ಬಂದಾಗ ಇದು ಸಾಧ್ಯನಾ ಎನ್ನುವ ಅನುಮಾನ ಮೂಡಿತು. ಆದರೆ ಇವತ್ತು ಅನ್ನಿಸುತ್ತಿದೆ 1.96ಲಕ್ಷ ಗಣಗಳ ಇಷ್ಟಲಿಂಗ ಪೂಜಾ ಸಮಾರಂಭ ಯಶಸ್ವಿಯಾಗಿ ಇತಿಹಾಸದ ಪುಟ ಸೇರುವುದು ಖಂಡಿತ. ಅಡವಿಲಿಂಗ ಸ್ವಾಮೀಜಿಗಳನ್ನು ನೋಡಿದರೆ ಅವರು ಶರಣರು ಅನ್ನುವುದಕ್ಕಾಗಲ್ಲ. ಆದರೆ ಅವರಲ್ಲಿ ಅಗಾಧವಾದ ದೈವಶಕ್ತಿ ಇದೆ. ಸುಕ್ಷೇತ್ರ ವೀರಘೋಟ ಒಂದು ಶಕ್ತಿ ಕೇಂದ್ರವಾಗಿದೆ.
ಸ್ವಾಮೀಜಿ ಲೋಕ ಕಲ್ಯಾಣಕ್ಕಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದ ಅವರು, ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಬರಬೇಕಿತ್ತು. ಕಾರಣಾಂತರದಿಂದ ಬರಲು ಆಗದ್ದಕ್ಕೆ ಅವರು ಶುಭ ಕೋರಿ ಕಳಿಸಿದ ಪತ್ರವನ್ನು ಸಚಿವರು ವಾಚಿಸಿದರು. ಈ ಕಾರ್ಯಕ್ರಮಕ್ಕೆ ಸರಕಾರದಿಂದ ಒಂದು ಕೋಟಿ ರೂ. ಮಂಜೂರು ಮಾಡಿದ್ದಾರೆ.
ಒಂದೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಹಣ ಬರುತ್ತದೆ. ಮತ್ತು ಸ್ನಾನಘಟ್ಟ ಸೇರಿದಂತೆ ಇತರೆ ಕಾಮಗಾರಿಗಳ ನಿರ್ಮಾಣಕ್ಕಾಗಿ ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ 1.5 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ, ಜಾಲಹಳ್ಳಿ ಜಯಶಾಂತಲಿಂಗೇಶ್ವರ ಸ್ವಾಮೀಜಿ, ದೇವಾಪುರು ಶಿವಮೂರ್ತಿ ಸ್ವಾಮೀಜಿ ಮಾತನಾಡಿದರು. ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ| ಶಿವರಾಜ ಪಾಟೀಲ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎನ್.ಶಂಕ್ರಪ್ಪ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಕ್ಯಾದಿಗೇರ ಜಿಪಂ.ಮಾಜಿ ಸದಸ್ಯ ವೆಂಕಟೇಶ ಪೂಜಾರಿ, ಜೆಡಿಎಸ್ ಮುಖಂಡರಾದ ಕರಿಯಮ್ಮ ಜಿ.ನಾಯಕ, ವೀರಘೋಟ ಸುಕ್ಷೇತ್ರದ ಅಡವಿಲಿಂಗ ಮಹಾರಾಜ ಸ್ವಾಮೀಜಿ ಸೇರಿದಂತೆ ಅನೇಕರು ಗಣ್ಯರು, ಶ್ರೀಗಳು ಉಪಸ್ಥಿತರಿದ್ದರು. ಸುಭಾಶ್ಚಂದ್ರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಹುತಾತ್ಮ ಯೋಧರಿಗೆ ನಮನ: ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಉಜ್ಜಯಿನಿ ಶ್ರೀಗಳು ಸೇರಿ ಬಹುತೇಕ ಗಣ್ಯರು ಮಾತನಾಡಿ
ಉಗ್ರರ ಹೇಯ ಕೃತ್ಯವನ್ನು ಖಂಡಿಸಿದರು. ಉಗ್ರರ ದಮನಕ್ಕೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ದೇಶದ ಜನರ ಬೆಂಬಲವಿದೆ ಎಂದರು.