ನವದೆಹಲಿ:ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋವಿಡ್ 19 ವೈರಸ್ ಅಟ್ಟಹಾಸ ಮುಂದುವರಿದಿದ್ದು, ಮತ್ತೊಂದೆಡೆ ಐಸಿಸ್ ಉಗ್ರಗಾಮಿ ಸಂಘಟನೆ ತನ್ನ ಬಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ಉಗ್ರರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿರುವ ಬಗ್ಗೆ ಭಾರತೀಯ ಭದ್ರತಾ ಏಜೆನ್ಸಿ ಕಳವಳ
ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಅವೆಲ್ಲಕ್ಕಿಂತ ಹೆಚ್ಚಾಗಿ ಅಂತರ್ಜಾಲ ಬಳಸುವಾಗ ಭದ್ರತಾ ಸಂಸ್ಥೆಗಳ ರೇಡಾರ್ ಅನ್ನು ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಬಗ್ಗೆ ಐಸಿಸ್ ಸಂಘಟನೆಯಲ್ಲಿರುವ ಉಗ್ರರಿಗೆ ಮಾಹಿತಿ ನೀಡುತ್ತಿರುವುದಾಗಿಯೂ ವರದಿ ಹೇಳಿದೆ.
ಈ ಬಗ್ಗೆ ಸೈಬರ್ ಸೆಕ್ಯೂರಿಟಿ ಮ್ಯಾಗಜೀನ್ ನಲ್ಲಿ “ದ ಸಪೋರ್ಟರ್ಸ್ ಸೆಕ್ಯೂರಿಟಿ” ಲಿಂಕ್ ಟು ಐಸಿಸ್ ಹೆಸರಿನಲ್ಲಿ ಪ್ರಕಟವಾದ ಲೇಖನದಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. ಸಾಮಾಜಿಕ ಜಾಲತಾಣ ಉಪಯೋಗಿಸುವಾಗಲೂ ಭದ್ರತಾ ಸಂಸ್ಥೆಯ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಎಚ್ಚರಿಕೆ ನೀಡುತ್ತಿರುವುದಾಗಿಯೂ ವಿವರಿಸಿದೆ.
ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್ ಬಳಕೆ ವೇಳೆ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಐಸಿಸ್ ಹೇಗೆ ತಂತ್ರಗಾರಿಕೆ ಹೆಣೆದಿದೆ ಎಂಬುದನ್ನು 24 ಪುಟಗಳ ಮ್ಯಾಗಜಿನ್ ನಲ್ಲಿ ವಿವರಿಸಿರುವುದಾಗಿ ವರದಿ ತಿಳಿಸಿದೆ. ಈ ಲೇಖನ ಪ್ರಕಟವಾದ ನಂತರ ಭಯೋತ್ಪಾದಕ ಸಂಘಟನೆಯ ಆನ್ ಲೈನ್ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಭದ್ರತಾ ಏಜೆನ್ಸಿ ತಿಳಿಸಿದೆ.
ತಜ್ಞರ ಪ್ರಕಾರ, ವಿಶೇಷ ವಿಡಿಯೋ ಗೇಮ್ ಗಳ ಮೂಲಕ ಜಿಹಾದ್ ಹರಡಿಸುವ ಐಸಿಸ್ ಸಂಚು ಭದ್ರತಾ ಏಜೆನ್ಸಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 2020ರ ಆರಂಭದಲ್ಲಿ ಬಾಂಗ್ಲಾದೇಶದಿಂದ ಕಾರ್ಯಾಚರಿಸುತ್ತಿರುವ ಅಲ್ ಖೈದಾ ಸಂಘಟನೆ ಕೂಡಾ ತನ್ನ ವೆಬ್ ಸೈಟ್ ಮೂಲಕ ಭಾರತದಲ್ಲಿ ಒಂಟಿ ತೋಳ (ಏಕಾಂಗಿ) ದಾಳಿ ನಡೆಸುವ ಬೆದರಿಕೆ ಒಡ್ಡಿತ್ತು.