ಮಂಗಳೂರು/ಕಾಸರಗೋಡು/ಕುಂದಾಪುರ: ಐಸಿಸ್ ಉಗ್ರರು ಶ್ರೀಲಂಕಾದಿಂದ ಲಕ್ಷ ದ್ವೀಪಕ್ಕೆ ಹೊರಟಿದ್ದಾರೆ ಎಂಬ ಬೇಹು ಮಾಹಿತಿಯ ಹಿನ್ನೆಲೆಯಲ್ಲಿ ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶ್ರೀಲಂಕಾದಲ್ಲಿ ಐಸಿಸ್ ಉಗ್ರರ ದಾಳಿ ಘಟನೆ ಸಂಭವಿಸಿದಂದಿನಿಂದ ಭಾರತದ ಪಶ್ಚಿಮ ಕರಾವಳಿ ಉದ್ದಕ್ಕೂ ಪೊಲೀಸರು, ಕೋಸ್ಟ್ ಗಾರ್ಡ್, ನೌಕಾ ಪಡೆಯವರು ಕಣ್ಗಾವಲು ಇರಿಸಿದ್ದಾರೆ. ರಾಜ್ಯದ ಕರಾವಳಿ ಕಾವಲು ಪೊಲೀಸರು ಕರಾವಳಿ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರಿಗೂ ಸಂಶಯಾಸ್ಪದ ಬೋಟುಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ನೌಕಾಪಡೆ ಸಜ್ಜು: ವಾರಿಯರ್
ಕಾಸರಗೋಡು: ಬೇಹುಗಾರಿಕೆ ಸಂಸ್ಥೆಗಳ ವರದಿಯ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಆಕ್ರಮಣವನ್ನು ಎದುರಿಸಲು ನೌಕಾ ಪಡೆ ಸಿದ್ಧವಾಗಿದೆ ಎಂದು ನೌಕಾ ಪಡೆಯ ರಕ್ಷಣಾ ವಕ್ತಾರ ಕಮಾಂಡರ್ ಶ್ರೀಧರ್ ವಾರಿಯರ್ ಹೇಳಿದ್ದಾರೆ.
Advertisement
ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಕೇರಳ ಕರಾವಳಿಯಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಸಮುದ್ರದಲ್ಲಿ ಲಕ್ಷದ್ವೀಪಕ್ಕೆ ಹೋಗುವ ಮಾರ್ಗದಲ್ಲಿ ಈ ಉಗ್ರರು ಕರ್ನಾಟಕಕ್ಕೆ ನುಸುಳಬಹುದೇ ಎಂಬ ಗುಮಾನಿಯ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.
Related Articles
Advertisement
ಉಗ್ರರು ಬಿಳಿ ಬಣ್ಣದ ದೋಣಿಯಲ್ಲಿ ಸಾಗುತ್ತಿದ್ದಾರೆ ಎಂದು ಬೇಹು ಮಾಹಿತಿಯಿದ್ದು, ಕರಾವಳಿ ಪೊಲೀಸ್ ಠಾಣೆಗಳು, ಕೋಸ್ಟಲ್ ಗಾರ್ಡ್, ನೌಕಾಪಡೆ ಕಟ್ಟುನಿಟ್ಟಿನ ಕಣ್ಗಾವಲು ಮತ್ತು ಪಹರೆಯನ್ನು ತೀವ್ರಗೊಳಿಸಿದೆ. ಕರಾವಳಿ ಪ್ರದೇಶಗಳಲ್ಲಿನ ಅಸಹಜ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಮೀನುಗಾರರ ಸಮಿತಿಗಳಿಗೆ ಸೂಚನೆ ನೀಡಲಾಗಿದೆ.
ಕರಾವಳಿ ಪ್ರದೇಶದ ಎಲ್ಲ ಸಮುದ್ರ ತೀರ ಪೊಲೀಸ್ ಠಾಣೆ ಗಳನ್ನು ಜಾಗೃತಗೊಳಿಸಲಾಗಿದೆ. ಕೇರಳ ಕರಾವಳಿಯ ಮೂಲಕ ಉಗ್ರರು ದಾಳಿ ಸಂಚು ಹೂಡಿದ್ದಾರೆಂದು ಬೇಹು ಗಾರಿಕೆ ಸಂಸ್ಥೆಗಳು ವರದಿ ಮಾಡಿವೆ.
ಕೊಚ್ಚಿಯ ದಕ್ಷಿಣ ನೌಕಾ ಪಡೆಯ ಜಂಟಿ ಆಪರೇಶನ್ ಸೆಂಟರ್‌ನಲ್ಲಿ ಸಂಭಾವ್ಯ ಉಗ್ರ ದಾಳಿಯನ್ನು ತಡೆಯಲು ಸಜ್ಜುಗೊಳಿಸಲಾಗಿದೆ. ನೌಕಾಪಡೆ, ಕೋಸ್ಟ್‌ಗಾರ್ಡ್ ಕಟ್ಟೆಚ್ಚರ ವಹಿಸಿದ್ದು, ಶಂಕಿತ ದೋಣಿಗಳನ್ನು ತಪಾಸಣೆ ನಡೆಸುತ್ತಿವೆ. ಕೋಸ್ಟಲ್ ಪೊಲೀಸ್ ಕರಾವಳಿ ಪ್ರದೇಶಗಳಲ್ಲಿ ತಪಾಸಣೆ ಬಿಗುಗೊಳಿಸಿದೆ.
ಗಂಗೊಳ್ಳಿ ಭಾಗದಲ್ಲಿಯೂ ಕಟ್ಟೆಚ್ಚರ
ಕುಂದಾಪುರ: ದ್ವೀಪ ರಾಷ್ಟ್ರ ಶ್ರೀಲಂಕಾದಿಂದ 15 ಮಂದಿ ಶಂಕಿತ ಐಸಿಸ್ ಉಗ್ರರು ಕೇರಳ ಕರಾವಳಿಯತ್ತ ನುಸುಳಿದಿದ್ದಾರೆ ಎನ್ನುವ ಕೇಂದ್ರ ಗುಪ್ತಚರ ಇಲಾಖೆಯ ಸಂದೇಶದ ಹಿನ್ನೆಲೆಯಲ್ಲಿ ಗಂಗೊಳ್ಳಿ ಕರಾವಳಿಯಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕರಾವಳಿ ನಿಯಂತ್ರಣ ಪೊಲೀಸರು, ಸಾಗರ ರಕ್ಷಕ್ ದಳ ಮತ್ತು ಕರಾವಳಿ ಕಾವಲು ಪಡೆ ಪೊಲೀಸರ ಮೂರು ಜಂಟಿ ತಂಡಗಳಿಂದ ಗಂಗೊಳ್ಳಿ ಸುತ್ತಮುತ್ತ ಕರಾವಳಿ ಭಾಗದಲ್ಲಿ ಬಿಗಿ ಭದ್ರತೆ, ನಿಗಾ ವಹಿಸಲಾಗಿದೆ. ಗಂಗೊಳ್ಳಿಯ ಕರಾವಳಿ ಕಾವಲು ಪಡೆಯ ಪೊಲೀಸರು ಒಂದು ಗಸ್ತು ಬೋಟ್‌ನಲ್ಲಿ ದಿನಕ್ಕೆ 5 ಗಂಟೆ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾರೆ. ಇದಲ್ಲದೆ ಮೀನುಗಾರಿಕೆ ದೋಣಿಗಳು, ಬೋಟುಗಳು ಮೀನುಗಾರಿಕೆ ಮುಗಿಸಿ ಬರುವ ಎಲ್ಲ ಪಾಯಿಂಟ್‌ಗಳಲ್ಲಿಯೂ ಈ ಮೂರು ತಂಡದ ಶಸ್ತ್ರಸಜ್ಜಿತ ಪೊಲೀಸರನ್ನು ನಿಲ್ಲಿಸಲಾಗಿದೆ. ಇದರ ಜತೆಗೆ ಕೆಲವು ಪ್ರಮುಖ ಸ್ಥಳಗಳಲ್ಲಿಯೂ ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಈ ಬಗ್ಗೆ ಯಾವುದೇ ರೀತಿಯಾಗಿ ಆತಂಕ ಪಡಬೇಕಾಗಿಲ್ಲ ಎಂದು ಎಂದು ಕರಾವಳಿ ಕಾವಲು ಪಡೆಯ ಪೊಲೀಸರು ‘ಉದಯವಾಣಿ’ಗೆ ತಿಳಿಸಿದ್ದಾರೆ.