ನ್ಯೂಯಾರ್ಕ್: ಅಮೆರಿಕದಲ್ಲಿ 9/11 ಉಗ್ರ ದಾಳಿ ನಡೆದ ಬಳಿಕ ಮಂಗಳವಾರ ಭೀಕರ ದಾಳಿ ನಡೆದಿದೆ. ಉಗ್ರ ಸಂಘಟನೆ ಐಸಿಸ್‌ನಿಂದ ಪ್ರೇರಿತನಾದ ವ್ಯಕ್ತಿ ಪಿಕ್‌ಅಪ್ ಟ್ರಕ್ ಅನ್ನು ಪಾದಚಾರಿಗಳ ಮೇಲೆ ಚಲಾಯಿಸಿ ಎಂಟು ಮಂದಿಯನ್ನು ಕೊಂದಿದ್ದಾನೆ. ಈ ಘಟನೆಯಲ್ಲಿ ಇತರ 11 ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಜ್ಬೇಕಿನಸ್ತಾನ ಮೂಲದ 29 ವರ್ಷದ ವ್ಯಕ್ತಿ ಈ ಕೃತ್ಯವೆಸಗಿದ್ದಾನೆ. ಪೊಲೀಸರು ಆತನಿಗೆ ಹೊಟ್ಟೆಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ಅಸುನೀಗಿದವರ ಪೈಕಿ ಐವರು ಅರ್ಜೆಂಟೀನಾದ ವಿದ್ಯಾರ್ಥಿಗಳಾಗಿದ್ದರೆ, ಮತ್ತೂಬ್ಬ ಬಲ್ಗೇರಿಯಾದವನೆಂದು ಗುರುತಿಸಲಾಗಿದೆ.
ನ್ಯೂಯಾರ್ಕ್‌ನ ಲೋವರ್ ಮ್ಯಾನ್‌ಹಟನ್‌ನ ಪಶ್ಚಿಮ ಭಾಗದಲ್ಲಿರುವ ಹಡ್ಸನ್ ನದಿ ಪಕ್ಕದಲ್ಲಿ ಉತ್ಸವೊಂದರಲ್ಲಿ ಸಂಭ್ರಮಾಚರಣೆಯಲ್ಲಿ ನಿರತವಾಗಿರುವಾಗ ಸೈಫುಲ್ಲೊ ಸೈಪೊವ್ ಎಂಬ ಹೆಸರಿನ ವ್ಯಕ್ತಿ ಪಿಕ್‌ಅಪ್ ಟ್ರಕ್ ಅನ್ನು ಏರಿ ದೇವರ ಹೆಸರಿನ ಘೋಷಣೆ ಮಾಡುತ್ತಾ ಪಾದಚಾರಿ ಮಾರ್ಗದ ಮೇಲೆ ಚಲಾಯಿಸಿದ. 2001ರಲ್ಲಿ ಉಗ್ರರ ದಾಳಿಗೀಡಾಗಿದ್ದ ವರ್ಲ್x ಟ್ರೇಡ್ ಸೆಂಟರ್‌ನ ನೂತನ ಕಟ್ಟಡಗಳ ಬಳಿಯೇ ಈ ದಾಳಿ ನಡೆದಿದೆ. ಏಕಾಏಕಿ ಟ್ರಕ್ ವೇಗದಲ್ಲಿ ಬರುತ್ತಿದ್ದುದನ್ನು ನೋಡಿದ ಪಾದಚಾರಿಗಳು, ಸೈಕಲ್ ಸವಾರರು ದಿಕ್ಕಾಪಾಲಾಗಿ ಓಡಿದರು. ಈ ವೇಳೆ ಸ್ಥಳದಲ್ಲಿಯೇ ಆರು ಮಂದಿ ಅಸುನೀಗಿದ್ದಾರೆ. ತೀವ್ರವಾಗಿ ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಂಧನಕ್ಕೆ ಒಳಗಾದ ವ್ಯಕ್ತಿ 60 ಕಿಮೀ ವೇಗದಲ್ಲಿ ಚಲಾಯಿಸುತ್ತಾ ಸಾಗುತ್ತಿದ್ದ. ಶಾಲಾ ಬಸ್ ಬಳಿಕ ಸೈಕಲ್ ಒಂದಕ್ಕೆ ಡಿಕ್ಕಿ ಹೊಡೆಯಿತು. ಇದೇ ಸಂದರ್ಭದಲ್ಲಿ ಹತ್ತು ಬಾರಿ ಗುಂಡು ಹಾರಿದ ಸದ್ದು ಕೇಳಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಎಬಿಸಿ ಚಾನೆಲ್‌ಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಾಚರಣೆಗೆ ಇಳಿದ ನ್ಯೂಯಾರ್ಕ್ ಪೊಲೀಸರು ಗುಂಡು ಹಾರಿಸುತ್ತಾ ಆತನ ನಿಯಂತ್ರಣಕ್ಕೆ ಮುಂದಾದರು. 2001ರ ಬಳಿಕ ನ್ಯೂಯಾರ್ಕ್‌ನಲ್ಲಿ ವ್ಯಕ್ತಿಯೊಬ್ಬ ನಡೆಸಿದ ದಾಳಿ ಇದಾಗಿದೆ.
ಪಿಕ್‌ಅಪ್‌ನಲ್ಲಿ ಇಂಗ್ಲಿಷ್ ಬರೆದಿತ್ತು ಎಂದು ಹೇಳಲಾ ಗಿರುವ ಟಿಪ್ಪಣಿಯೊಂದು ಸಿಕ್ಕಿದೆ. ಅದರಲ್ಲಿ ಉಗ್ರ ಸಂಘಟನೆ ಐಸಿಸ್‌ಗೆ ಸೇರಿದ ಬರಹ ಇತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪೊಲೀಸರು ಆತನ ಹೊಟ್ಟೆಗೆ ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದ್ದಾರೆ.
ಯಾರೀತ ದಾಳಿಕೋರ?: ಮೂಲತಃ ಉಜ್ಬೇಕಿಸ್ತಾನದ ವ್ಯಕ್ತಿಯಾಗಿರುವ ಈತ 2010ರಲ್ಲಿ ಅಮೆರಿಕಕ್ಕೆ ಆಗಮಿಸಿದ್ದ. ಆತ ನ್ಯೂಜರ್ಸಿಯಲ್ಲಿರುವ ಪ್ಯಾಟರ್ಸನ್‌ನಲ್ಲಿ ನೆಲೆಸಿದ್ದ ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ವಿದೇಶಗಳಿಂದ ಬರುವ ಪ್ರಯಾಣಿಕರನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು’ ಎಂದು ಎಚ್ಚರಿಸಿದ್ದಾರೆ.
ಮ್ಯಾನ್‌ಹಟನ್ ಮೇಲಿನ ದಾಳಿ ಉಗ್ರರ ಜಾಲ ವಿಶ್ವದೆಲ್ಲೆಡೆ ಪಸರಿಸಿರುವುದಕ್ಕೆ ಸಾಕ್ಷಿ. ನಾವೆಲ್ಲರೂ ಇದನ್ನು ಖಂಡಿಸಬೇಕಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಬರಲಿ.
– ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ