Advertisement

ಸ್ಥಳೀಯ ಸಂಸ್ಥೆಗಳ ನಿರ್ಲಕ್ಷಕ್ಕೆ ವೇದಿಕೆಯಲ್ಲಿ ಪರಿಹಾರ…

03:55 AM Jan 02, 2017 | Karthik A |

ಮಹಾನಗರ ಪಾಲಿಕೆ, ಇತರೆ ಸ್ಥಳೀಯ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಡುವ ಸಂಸ್ಥೆಗಳಿಂದ ಸಾವು, ನೋವು ಉಂಟಾದರೆ ಏನು ಮಾಡಬಹುದು? ಇದರ ವಿರುದ್ಧ ಎಲ್ಲಿ ದೂರು ಕೊಡುವುದು, ಪರಿಹಾರಕ್ಕೆ ಯಾರ ಮೊರೆ ಹೋಗುವುದು? ಇಂಥ ಪ್ರಶ್ನೆಗಳ ಇವೆ. ಇಂಥ ಸಮಸ್ಯೆಗೆ ಪರಿಹಾರ ಗ್ರಾಹಕವೇದಿಕೆಯಲ್ಲೂ ಇದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಪರಿಹಾರ ಕೊಟ್ಟಿದೆ. ಅದಕ್ಕೆ ಇಲ್ಲೊಂದು ಉದಾಹರಣೆ ಇದೆ. ನೋಡೋಣ.

Advertisement

ಇಪ್ಪತ್ತೇಳರ ಪ್ರಾಯದ ಶ್ರೀಸ್ಮತಿ ರಂಜನ್‌ ಶರ್ಮಾ ಜಯನಗರ ಬಡಾವಣೆಯಲ್ಲಿರುವ ಈಜುಕೊಳವೊಂದರಲ್ಲಿ ಈಜು ಕಲಿಯುತ್ತಿದ್ದರು. ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಕೆಲಸ. ಅವರ ವಾರ್ಷಿಕ ಆದಾಯ ಒಂಭತ್ತು ಲಕ್ಷ ರೂಪಾಯಿ. ಬೆಂಗಳೂರು ಮಹಾನಗರ ಪಾಲಿಕೆಯು ಈ ಈಜುಕೊಳವನ್ನು ಹೊಂದಿದ್ದು ಅದನ್ನು ನಡೆಸುವ ಗುತ್ತಿಗೆಯನ್ನು ಪಿಎಂ ಸ್ವಿಮಿಂಗ್‌ ಸೆಂಟರ್‌ಗೆ ನೀಡಿತ್ತು. ಗುತ್ತಿಗೆಯ ಅವಧಿ 35 ವರ್ಷಗಳು. ರಂಜನ್‌ ಶರ್ಮಾ ಈಜು ಕಲಿಯುವ ಉದ್ದೇಶದಿಂದ ಸ್ವಿಮಿಂಗ್‌ ಸೆಂಟರ್‌ಗೆ ಅರ್ಜಿ ಸಲ್ಲಿಸಿ ಅದಕ್ಕೆ ನಿಗದಿತ ಶುಲ್ಕ 2,200 ರೂಪಾಯಿಯನ್ನು ಪಾವತಿ ಮಾಡಿದ್ದರು. ಅವರನ್ನು 20 ದಿನಗಳ ಈಜು ಕಲಿಸುವ ತರಬೇತಿಗೆ ಸೇರಿಸಿಕೊಳ್ಳಲಾಗಿತ್ತು. 

ಆದರೆ ತರಬೇತಿ ನಡೆಯುತ್ತಿರುವ ಅವಧಿಯಲ್ಲಿ, ರಂಜನ್‌ ಶರ್ಮಾ ಅವರು ಈಜುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆದಿನ ಈಜು ಕೊಳದಲ್ಲಿ ವಿಪರೀತ ಜನರಿದ್ದರೂ ಈ ಅವಗಢ ತಪ್ಪಿಸಲಾಗಲಿಲ್ಲ. ಅಲ್ಲದೆ ಈಜು ತರಬೇತಿ ನೀಡುತ್ತಿದ್ದ ಸಂಸ್ಥೆಯವರ ಜೀವ ರಕ್ಷಕರು ಆ ಸ್ಥಳದಲ್ಲಿ ಇರಲಿಲ್ಲ. ಈ ರೀತಿ ತುರ್ತು ಸಂದರ್ಭದಲ್ಲಿ ಬೇಕಾಗುವ ಲೈಫ್ಗಾರ್ಡ್‌ಗಳೂ ಇರಲಿಲ್ಲ. ಆದರೆ ಅಲ್ಲಿದ್ದ ಅನೇಕ ಜನರ ಮಧ್ಯೆ ಇದ್ದ ಡಾ. ವೆಂಕಟೇಶ್‌ ಎಂಬುವವರು ರಂಜನ್‌ ಮುಳುಗುವುದನ್ನು ಗಮನಿಸಿದರು. ಆ ವೇಳೆಗಾಗಲೆ ಪರಿಸ್ಥಿತಿ ಗಂಭೀರವಾಗಿತ್ತು. ಯಾರೂ ರಂಜನ್‌ ಅವರ ಜೀವ ಉಳಿಸಲು ಆಗಲಿಲ್ಲ. ಜನರ ಮಧ್ಯೆ ಇದ್ದ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿದ ನಂತರ ರಂಜನ್‌ ಅವರನ್ನು ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ನೀಡಿದ ವೈದ್ಯರು ಚಿಕಿತ್ಸೆ ಆರಂಭಿಸಿದರು. ಆದರೆ ಇದರ ಬಗ್ಗೆ ರ‌ಂಜನ್‌ ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಚಿಕಿತ್ಸೆ ಫ‌ಲಕಾರಿಯಾಗದೆ ರಂಜನ್‌ ಶರ್ಮಾ ನಿಧನರಾದರು.

ಮೃತರಾದ ರಂಜನ್‌ ಅವರ ತಂದೆ ಚಿಕಿತ್ಸೆಗಾಗಿ ಐದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಮಹಾನಗರ ಪಾಲಿಕೆ ಮತ್ತು ಸ್ವಿಮಿಂಗ್‌ ಸೆಂಟರ್‌ ವಿರುದ್ಧ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿ ಎರಡು ಕೋಟಿ ರೂಪಾಯಿ ಪರಿಹಾರ ನೀಡುವಂತೆ ನಿರ್ದೇಶನ ನೀಡಬೇಕೆಂದು ವಿನಂತಿ ಮಾಡಿಕೊಂಡರು. ಇದಲ್ಲದೆ ಮತ್ತೂಂದು ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆಯನ್ನೂ ಹೂಡಿದ್ದರು. ಈ ಪ್ರಕರಣ ಸಾಮಾನ್ಯ ವಾದದ್ದಲ್ಲವೆಂದು, ದೀರ್ಘ‌ವಾದ ವಿಚಾರಣೆ ಮತ್ತು ತನಿಖೆ ಅಗತ್ಯವಿರುವುದಲ್ಲದೆ ದೂರು ನೀಡಿರುವವರು ಗ್ರಾಹಕ ಸಂರಕ್ಷಣಾ ಅಧಿನಿಯಮದ ಪ್ರಕಾರ ಗ್ರಾಹಕರಲ್ಲ ಎಂದು ಸ್ವಿಮಿಂಗ್‌ ಸೆಂಟರ್‌  ತನ್ನ ವಾದವನ್ನು ಮುಂದಿಟ್ಟು, ದೂರನ್ನು ತಿರಸ್ಕರಿಸಬೇಕೆಂದು ಕೇಳಿತು. ಅಲ್ಲದೆ ಸ್ವಿಮಿಂಗ್‌ ಸೆಂಟರ್‌ ನ್ನದೆ ಆದ ಕೆಲವೊಂದು ವಾದವನ್ನೂ ಆಯೋಗದ ಮುಂದಿಟ್ಟಿತು. ಮೃತ ವ್ಯಕ್ತಿಗೆ ಈಜು ಕಲಿಸುತ್ತಿದ್ದ ತರಬೇತುದಾರರು ಕೆಲವೊಂದು ಸೂಚನೆಗಳನ್ನು ನೀಡಿದ್ದರೂ ಅದನ್ನು ಅವರು ಪಾಲಿಸಿರಲಿಲ್ಲ. ಈಜುಕೊಳದ ಕೊನೆ ಬಾಗದಲ್ಲಿ ಆಳ ಹೆಚ್ಚಾಗಿರುವುದರಿಂದ ಅಲ್ಲಿಗೆ ಹೋಗಬಾರದೆಂದು ಸೂಚನೆ ನೀಡಿದ್ದರೂ ಮೃತರು ಯಾರ ಸಹಾಯವೂ ಇಲ್ಲದೆ ಅಲ್ಲಿಗೆ ಈಜುಕೊಳದ ಕೊನೆಯ ಭಾಗಕ್ಕೆ ತೆರಳಿದ್ದೇ ಸಾವಿಗೆ ಕಾರಣ ಎಂಬ ವಾದವನ್ನು ಮುಂದಿಟ್ಟಿತು. ತರಬೇತುದಾರರ ಸೂಚನೆಯನ್ನು ದಿಕ್ಕರಿಸಿದ್ದು ನಿರ್ಲಕ್ಷ ಎಂದು ಪ್ರತಿಪಾದಿಸಿತು. ಆದರೆ ಮೃತರ ಪರವಾಗಿ ಸಾಕ್ಷಿದಾರರೊಬ್ಬರು ವಿವರವಾದ ಅಫಿಡವಿಟ್‌ ಸಲ್ಲಿಸಿ ಅಲ್ಲಿ ನಡೆದ ಎಲ್ಲ ವಿವರವನ್ನೂ ಆಯೋಗದ ಗಮನಕ್ಕೆ ತಂದರು.

ವಿಚಾರಣೆ ಬಳಿಕೆ ಆಯೋಗ ಕೆಲವೊಂದು ಅಂಶಗಳನ್ನು ಗಮನಿಸಿತು. ಬೆಂಗಳೂರು ಮಹಾನಗರ ಪಾಲಿಕೆ ವಿಚಾರಣೆಗೆ ಬಾರದಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಪಾಲಿಕೆಗೆ ಈ ವಿಷಯದಲ್ಲಿ ಆಸಕ್ತಿ ಇಲ್ಲವೆಂದು ತೋರುತ್ತದೆ. ಪಾಲಿಕೆಯು ಸ್ವಿಮಿಂಗ್‌ ಸೆಂಟರ್‌ಗೆ ದೀರ್ಘ‌ಕಾಲದ 35 ವರ್ಷದ ಗುತ್ತಿಗೆಯನ್ನು ನೀಡಿದ್ದು ಸರಿಯಾದ ಕ್ರಮವಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಅಷ್ಟೊಂದು ಜನರಿದ್ದರೂ ಕೇವಲ ಒಬ್ಬರು ಮಾತ್ರ ತರಬೇತುದಾರರು ಇದ್ದದ್ದು ಪಾಲಿಕೆ ಮತ್ತು ಸ್ವಿಮಿಂಗ್‌ ಸೆಂಟರ್‌ನ ನಿರ್ಲಕ್ಷವನ್ನು ತೋರಿಸುತ್ತದೆ ಎಂದು ಹೇಳಿದೆ. ಸ್ವಿಮಿಂಗ್‌ ಸೆಂಟರ್‌ಗೆ ಗುತ್ತಿಗೆ ನೀಡುವಾಗ ಪಾಲಿಕೆ ಹಾಕಿದ್ದ ಷರತ್ತುಗಳನ್ನೆಲ್ಲಾ ಪಾಲಿಸಲಾಗುತ್ತಿದಿಯೇ ಎಂಬುದರ ಬಗ್ಗೆ ನಿಗಾ ಇಲ್ಲದ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ಇದೇ ರೀತಿಯ ಇತರೆ ಪ್ರಕರಣಗಳಲ್ಲಿ ಆಯೋಗವು ಈಗಾಗಲೆ ಕೆಲವೊಂದು ತೀರ್ಪುಗಳನ್ನು ನೀಡಿದ್ದು ಅದರ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಹ ಗ್ರಾಹಕರ ಪರ ತೀರ್ಮಾನಿಸಿದೆ.

Advertisement

ಮೃತರ ಪರ ದೂರು ಸಲ್ಲಿಸಿದವರು ಕೋರಿದ್ದ ಪರಿಹಾರದ ಮೊತ್ತ ಸರಿಯಾಗಿದ್ದು ಅದನ್ನು ನೀಡುವಂತೆ ಆಯೋಗ ತೀರ್ಪು ನೀಡಿದೆ. ಆದರೆ ಸ್ವಿಮಿಂಗ್‌ ಸೆಂಟರ್‌ ತನ್ನ ಎಲ್ಲಾ ವ್ಯವಹಾರ ಮತ್ತು ಅದರಿಂದ ಉಂಟಾಗುವ ನಷ್ಟವನ್ನು ತುಂಬಿಕೊಡಲು ವಿಮೆ ಪಾಲಿಸಿ ಹೊಂದಿತ್ತು. ಆದ್ದರಿಂದ ಪರಿಹಾರದ ಮೊತ್ತದಲ್ಲಿ ಸ್ವಲ್ಪ ಹಣವನ್ನು ವಿಮೆ ಕಂಪನಿ ನೀಡಬೇಕೆಂದು ಆಯೋಗ ಹೇಳಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಗ್ರಾಹಕರಿಗೆ ಜಯದೊರೆತಿದೆ. ಆದರೆ ಮಹಾನಗರ ಪಾಲಿಕೆ ಸ್ವಲ್ಪವೂ ತಲೆಕೆಡಿಸಿಕೊಳ್ಳದಿರುವುದು ತಾನು ನಾಗರಿಕರ ಸುರಕ್ಷತೆಗೆ ಎಷ್ಟು ಬೆಲೆ ನೀಡುತ್ತದೆ ಎಂಬುದನ್ನು ತೋರಿಸುತ್ತದೆ.

– ವೈ.ಜಿ.ಮುರಳೀಧರನ್‌, ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next