ಹೊಸದಿಲ್ಲಿ : 2008ರ ಮುಂಬಯಿ ದಾಳಿಯ ಸೂತ್ರದಾರ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ, ಹಾಫೀಜ್ ಸಯೀದ್ ನನ್ನು ರಕ್ಷಿಸಲು ಪಾಕಿಸ್ಥಾನದ ಕುಪ್ರಸಿದ್ಧ ಬೇಹು ಸಂಸ್ಥೆ ಐಎಸ್‌ಐ ಹೊಸ ಕುಟಿಲೋಪಾಯವನ್ನು ರೂಪಿಸಿದೆ.
ಜಮಾತ್ ಉದ್ ದಾವಾ ಉಗ್ರ ಸಂಘಟನೆಯನ್ನು ಐಎಸ್‌ಐ ಎರಡು ಭಾಗಗಳನ್ನಾಗಿ ವಿಂಗಡಿಸಿದೆ. ಇವುಗಳನ್ನು – 1. ಜಮ್ಮು ಕಾಶ್ಮೀರ ಮೂವ್‌ಮೆಂಟ್, ಮತ್ತು 2. ರೆಸ್‌ಕ್ಯೂ, ರಿಲೀಫ್ ಆ್ಯಂಡ್ ಎಜುಕೇಶನ್ ಫೌಂಡೇಶನ್ ಎಂದು ಪುನರ್ ನಾಮಕರಣ ಮಾಡಲಾಗಿದೆ.
ಹೊಸ ಹೆಸರಿನ ಈ ಎರಡು ವಿಭಾಗಗಳ ರಚನೆಯ ಮೂಲ ಉದ್ದೇಶ ಹಾಫೀಜ್ ಸಯೀದ್ ನನ್ನು ರಕ್ಷಿಸುವುದೇ ಆಗಿದೆ ಎಂದು ಗುಪ್ತಚರ ದಳ ತಿಳಿಸಿದೆ.
ಪಾಕಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಮೂಹಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ಪಾಕ್ ಸರಕಾರದ ಮೇಲೆ ಜಾಗತಿಕ ಒತ್ತಡ ಹೆಚ್ಚುತ್ತಿರುವ ಕಾರಣ, ಐಎಸ್‌ಐ, ಹಾಫೀಜ್ ಮತ್ತು ಆತನ ಉಗ್ರ ಸಂಘಟನೆಯನ್ನು ರಕ್ಷಿಸುವುದಕ್ಕಾಗಿ ಈ ಹೊಸ ನಾಮಕರಣ ತಂತ್ರವನ್ನು ಅನುಸರಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇದೇ ವೇಳೆ ಲಷ್ಕರ್ ಎ ತಯ್ಯಬ ಮತ್ತು ಜಮಾದ್ ಉದ್ ದಾವಾ ಸೇರಿದಂತೆ ಪಾಕಿಸ್ಥಾನದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ಉಗ್ರ ಸಂಘಟನೆಗಳಿಗೆ ಸದ್ದಿಲ್ಲದೆ ಕೆಲಸ ಮಾಡಿಕೊಂಡಿರಲು ಸರಕಾರ ಆದೇಶಿಸಿರುವುದಾಗಿ ತಿಳಿದು ಬಂದಿದೆ.
ಜೆಯುಡಿ ಗೆ ಜಮ್ಮು ಕಾಶ್ಮೀರ ಆಂದೋಲನದ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ; ಇದರ ದಾನ-ದತ್ತಿ ವಿಭಾಗವಾಗಿರುವ ಫಲಾಹ್ ಎ ಇನ್‌ಸಾನಿಯತ್ ಫೌಂಡೇಶನ್ ಗೆ “ರೆಸ್‌ಕ್ಯೂ, ರಿಲೀಫ್ ಆ್ಯಂಡ್ ಎಜುಕೇಶನ್ ಫೌಂಡೇಶನ್” ನ ಕೆಲಸ ಕಾರ್ಯಗಳ ಹೊಣೆಗಾರಿಕೆಯನ್ನು ನೋಡಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಗೊತ್ತಾಗಿದೆ.