ಹೊಸದಿಲ್ಲಿ: ಪಾಕಿಸ್ಥಾನದ ಐಎಸ್‌ಐ ಭಾರತದ ಹೈ ಕಮಿಷನ್‌ನ ಮೂವರು ಅಧಿಕಾರಿಗಳನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿ ವಿಫಲವಾಗಿದೆ.
ಇಸ್ಲಮಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ರಹಸ್ಯಗಳನ್ನು ಪಡೆಯುವ ಸಂಚು ಬಯಲಾಗಿದೆ.ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು ಅಧಿಕಾರಿಗಳ ಹೆಸರುಗಳನ್ನು ಗೌಪ್ಯವಾಗಿ ಇರಿಸಲಾಗಿದೆ.
ಮೂವರು ಅಧಿಕಾರಿಗಳು ಎಚ್ಚರಿಕೆಯಿಂದ ಇದ್ದ ಕಾರಣ ಐಎಸ್‌ಐನ ಸಂಚು ಕೆಲಸ ಮಾಡಲು ಸಾಧ್ಯವಾಗಿಲ್ಲ. ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳು ಯಾವುದೇ ತಪ್ಪು ಎಸಗದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅವರಿಗೆ ಇಸ್ಲಮಬಾದ್‌ನಲ್ಲೇ ಸೇವೆ ಮುಂದುವರಿಸಲು ಸೂಚನೆ ನೀಡಿರುವ ಬಗ್ಗೆ ವರದಿಯಾಗಿದೆ.
ಹನಿಟ್ರ್ಯಾಪ್‌ಗೆ ಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳು ದೆಹಲಿಯ ಉನ್ನತ ಅಧಿಕಾರಿಗಳು ಸಂಪರ್ಕಿಸಿ ಸಲಹೆ ಕೋರಿದ್ದರು. ಕೂಡಲೇ ಅವರಿಗೆ ದೆಹಲಿಗೆ ಬರುವಂತೆ ಸೂಚಿಸಲಾಗಿತ್ತು.
2010 ರಲ್ಲಿ ಭಾರತದ ಹೈಕಮಿಷನ್ ನ ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿದ್ದ ಮಾಧುರಿ ಗುಪ್ತಾ ಅವರನ್ನು ಐಎಸ್‌ಐ ಅಧಿಕಾರಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕೆ ಬಂಧಿಸಲಾಗಿತ್ತು.