Advertisement
ಕೊಕ್ಕಡ ಈಶ್ವರ ಭಟ್ಟರಿಗೆ ಈಗ ಎಪ್ಪತ್ತೈದರ ಹರೆಯ. ಈಗ ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಮೊನ್ನೆಯಷ್ಟೇ ರತಿಕಲ್ಯಾಣ ಪ್ರಸಂಗದಲ್ಲಿ ದ್ರೌಪದಿಯಾಗಿ ತನ್ನ ಪಾತ್ರಾಭಿವ್ಯಕ್ತಿಯ ಹಿಂದಿನ ಛಾಪನ್ನು ನೆನಪಿಸಿ ಕೊಟ್ಟರು. “”ಈ ಆಟಕ್ಕಾಗಿಯೇ ಮಣಿಸಾಮಾನುಗಳನ್ನು ರಿಪೇರಿ ಮಾಡಿಸಬೇಕಾಯಿತು” ಎನ್ನುತ್ತಾ ಸ್ತ್ರೀಪಾತ್ರದ ಪರಿಕರಗಳು ತುಂಬಿದ ಸೂಟ್‌ಕೇಸನ್ನು ತೋರಿಸಿ ಬಾಯಿತುಂಬಾ ನಕ್ಕರು. ಬಣ್ಣದ ಬದುಕಿನ ಬಿಡಲಾಗದ ಬಂಧ, ಸಂಬಂಧವು ಆ ನಗುವಿನಲ್ಲಿತ್ತು. ನಗುವಿನೊಂದಿಗೆ ವರ್ತಮಾನ ರಂಗದ ಸ್ತ್ರೀಪಾತ್ರಗಳು ಗೌರವದ ಸ್ಥಾನದಿಂದ ಹಳಿ ತಪ್ಪುತ್ತಿರುವ ವಿಷಾದವೂ ಇತ್ತು.
ಈಶ್ವರ ಭಟ್ಟರು ಹೆಚ್ಚು ಓದಿದವರಲ್ಲ. ಜಾಗೃತ ಗ್ರಹಿಕೆಯ ಶಕ್ತಿ. ಕ್ಷಿಪ್ರವಾಗಿ ಮನನಿಸುವ ಸ್ವ-ಸಾಮರ್ಥ್ಯಗಳು ಬೌದ್ಧಿಕವಾಗಿ ಗಟ್ಟಿಗೊಳಿಸಿ ದುವು. ನಾಟ್ಯಕ್ಕೆ ಕುಡಾನ ಗೋಪಾಲಕೃಷ್ಣ ಭಟ್ಟರು ಗುರು. ಈ ಮಧ್ಯೆ ಭರತನಾಟ್ಯ ಕಲಿಕೆ. ದಯಾನಂದ ನಾಗೂರು, ಮೊಳಹಳ್ಳಿ ಕೃಷ್ಣರಿಂದ ಬಡಗಿನ ಹೆಜ್ಜೆಗಳ ಅಭ್ಯಾಸ. ಪರಂಪರೆಗೆ ಹೆಸರಾದ ಕೆರೆಮನೆ ಮೇಳದಲ್ಲಿ ತಿರುಗಾಟ. ಅಳಿಕೆ ಸನಿಹದ ಮುಳಿಯದಲ್ಲಿ ಜನನ. ಕಡೆಂಗೋಡ್ಲಿನಲ್ಲಿ ಬದುಕು. ಬಣ್ಣದ ಸಹವಾಸದ ಬಳಿಕ ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿದ್ದುಕೊಂಡು ಬದುಕಿನ ಬಣ್ಣಕ್ಕೆ ಶ್ರೀಕಾರ. ಪೆರುವಡಿ ಕೃಷ್ಣ ಭಟ್ಟರ ನೇತೃತ್ವದ ಮೂಲ್ಕಿ ಮೇಳದಿಂದ ಬಣ್ಣದ ನಂಟು. ಬಾಲಕೃಷ್ಣ ಪಾತ್ರದ ಮೂಲಕ ಮೊದಲ ಹೆಜ್ಜೆ. ಪುಟ್ಟ ಪಾದ ಹಿರಿದಾಯಿತು. ರಂಗದಲ್ಲಿ ತ್ರಿವಿಕ್ರಮವಾಯಿತು. ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ. ಚಂದ್ರಮತಿಯ ವಿಲಾಪ, ಶಾರದೆಯ ಮೋಹ, ಚಿತ್ರಾಂಗದೆಯ ಸಂತಸ, ದ್ರೌಪದಿಯ ಅಸಹಾಯಕತೆ, ಸುಭದ್ರೆಯ ದೈನ್ಯ, ಪ್ರಭಾವತಿಯ ದೂರದೃಷ್ಟಿ, ಮಾಯಾ ಶೂರ್ಪನಖೀಯ ಕೃತಕತೆ, ಮೋಹಿನಿಯ ಮೋಹಪಾಶ… ಈಶ್ವರ ಭಟ್ಟರು ನಿರ್ವಹಿಸುವ ಪಾತ್ರಗಳಲ್ಲೆಲ್ಲ ಆಯಾಯ ಪಾತ್ರದ ಸ್ವ-ಸ್ವರೂಪಗಳು. ಕೂಡ್ಲು ಮೇಳದಲ್ಲಿ ಪ್ರದರ್ಶನವಾಗುತ್ತಿದ್ದ ಶ್ರೀದೇವಿ ಲಲಿತೋಪಾಖ್ಯಾನ ಪ್ರಸಂಗದ ಶ್ರೀಲಲಿತೆ ಪಾತ್ರವು ಈಶ್ವರ ಭಟ್ಟರ ನೆಚ್ಚಿನ, ಮೆಚ್ಚಿನ ಪಾತ್ರ. “”ಈ ಪಾತ್ರವನ್ನು ಪ್ರಥಮವಾಗಿ ಮಾಡಿದ್ದು ನಾನೇ” ಎನ್ನುವಾಗ ಭಟ್ಟರ ಕಣ್ಣುಗಳಲ್ಲಿ ಕಣ್ಣೀರು! ಇದರಲ್ಲಿ ಕಳೆದ ಕಾಲದ ಕಥನದ ನೆರಳುಗಳು ಮೂಡಿದುವು. ಆ ಕಾಲಘಟ್ಟದಲ್ಲಿ ಕೂಡ್ಲು ಮೇಳವನ್ನು ಆಧರಿಸಿದ ಪ್ರಸಂಗವಿದು.
Related Articles
Advertisement
ಅನುಭವದ ಪಕ್ವತೆಯಿಂದ ಮಾಗಿರುವ ಕೊಕ್ಕಡ ಈಶ್ವರ ಭಟ್ಟರ ಅಭಿನಂದನ ಸಮಾರಂಭವು ಫೆಬ್ರವರಿ 11ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ದಿನಪೂರ್ತಿ ಜರಗಲಿದೆ. ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನ ಕೃತಿಯ ಅನಾವರಣ ಜರಗ ಲಿದೆ. ನವರಸವಾಹಿನಿ, ನವರಸ ಅರ್ಥ ವೈಭವ, ಯಕ್ಷಗಾನ ವಿಹಾರ ಮತ್ತು ಎಡನೀರು ಮೇಳದವರಿಂದ ಸೀತಾ ಪರಿತ್ಯಾಗ-ಗದಾಯುದ್ಧ ಪ್ರಸಂಗದ ಯಕ್ಷಗಾನವಿದೆ.
ನಾ. ಕಾರಂತ ಪೆರಾಜೆ