Advertisement

ವೀಲ್‌ಚೇರ್‌ ಸಾಧಕಿ ಇಶ್ರತ್‌ ಅಖ್ತರ್‌ ಅವರ ಬದುಕಿನ ಪರಿಚಯ…

11:40 PM Oct 15, 2022 | Team Udayavani |

ಕೈ ಕಾಲು ಗಟ್ಟಿಯಿದ್ದರೂ ಏನೋ ಕೊರತೆಯಿದೆ ಎನ್ನುವಂತೆ ಕುಳಿತುಕೊಳ್ಳುವವರ ಸಂಖ್ಯೆ ಕಡಿಮೆಇಲ್ಲ. ಇನ್ನೇನು ಭವಿಷ್ಯ ರೂಪಿಸಿಕೊಳ್ಳುವ ಹಂತಕ್ಕೆ ಬಂದೆ ಎನ್ನುವಷ್ಟರಲ್ಲಿ ಬೆನ್ನಿಗೆ ಪೆಟ್ಟು ಬಿದ್ದು, ಭವಿಷ್ಯವೇ ಮುಗಿಯಿತೆಂದು ಕೊರಗುತ್ತ ಕುಳಿತಿದ್ದ ಯುವತಿ ಇದೀಗ ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಂತಹ ವೀರ ವನಿತೆ ಇಶ್ರತ್‌ ಅಖ್ತರ್‌ ಅವರ ಬದುಕಿನ ಪರಿಚಯ ನಿಮಗಾಗಿ.

Advertisement

ಅದು 2016ರ ಆಗಸ್ಟ್‌ 24. ಆಗಷ್ಟೇ 10ನೇ ತರಗತಿಯ ಪರೀಕ್ಷೆ ಮುಗಿಸಿದ್ದ ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದ ಇಶ್ರತ್‌ ತಾನು ಯಾವ ಕಾಲೇಜಿಗೆ ಸೇರಬೇಕು? ಏನು ಓದಬೇಕು? ಭವಿಷ್ಯದಲ್ಲಿ ಏನಾಗಬೇಕು ಎಂದು ಕನಸು ಕಾಣುತ್ತಿದ್ದರು. ಎರಡನೇ ಮಹಡಿಯಲ್ಲಿದ್ದ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ ಅವರಿಗೆ ಇದ್ದಕ್ಕಿದ್ದಂತೆ ಕಾಲು ಜಾರಿತ್ತು. ಕೆಲವೇ ಸೆಕೆಂಡುಗಳಲ್ಲಿ ಇಶ್ರತ್‌ ರಸ್ತೆ ಮೇಲೆ ಬಿದ್ದಿದ್ದರು. ಎದುರಿನ ದೃಶ್ಯವೆಲ್ಲ ಮಂಜಾದಂತೆ ಭವಿಷ್ಯವೂ ಮಂಜಾಗಿಬಿಟ್ಟಿತ್ತು ಪುಟಾಣಿ ಬಾಲಕಿಗೆ.

2ನೇ ಮಹಡಿಯಿಂದ ಬಿದ್ದಿದ್ದರಿಂದಾಗಿ ಇಶ್ರತ್‌ ಅವರ ಬೆನ್ನಿನ ಹುರಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದಾಗಿ ಎದ್ದು ಕುಳಿತುಕೊಳ್ಳುವುದೂ ದೊಡ್ಡ ಸವಾಲೇ ಆಗಿತ್ತು. ಬರೋಬ್ಬರಿ ಒಂದು ವರ್ಷ ಕಾಲ ಅವರು ಮನೆಯ ಕೋಣೆಯ ಹಾಸಿಗೆಯ ಮೇಲೇ ಕಳೆದರು. ದಿನವಿಡೀ “ನನಗೇ ಏಕೆ ಈ ಶಿಕ್ಷೆ?’ ಎಂದು ದೇವರಲ್ಲಿ ಪ್ರಶ್ನಿಸುವುದು ಹಾಗೂ ನೋವಿನಿಂದ ಅಳುವುದೇ ಅವರ ಕೆಲಸವಾಗಿತ್ತು. ಬೆನ್ನು ನೋವು ಅದೆಷ್ಟರ ಮಟ್ಟಿಗಿತ್ತೆಂದರೆ ಘಟನೆಯಾಗಿ ವರ್ಷವಾದರೂ ಕುಳಿತುಕೊಳ್ಳುವುದು ಅವರ ಪಾಲಿಗೆ ದೊಡ್ಡದೊಂದು ಸಾಹಸವೇ ಆಗುತ್ತಿತ್ತು.

ಇಶ್ರತ್‌ಗೆ ದೈಹಿಕ ನೋವಿಗಿಂತಲೂ ಹೆಚ್ಚಾಗಿ ಕಾಡಿದ್ದ ಮಾನಸಿಕ ನೋವು. ದಿನೇದಿನೆ ಕುಗ್ಗಿದ್ದ ಇಶ್ರತ್‌ ಮಾನಸಿಕ ಖಿನ್ನತೆಗೆ ಒಳಗಾದರು. ಅವರನ್ನು ಮತ್ತೆ ಮೊದಲಿನಂತೆ ಲವಲವಿಕೆಯಿಂದಿರುವಂತೆ ಮಾಡಬೇಕು ಎಂದು ಕುಟುಂಬ ಹರಸಾಸಹವನ್ನೇ ಮಾಡಿತು.

ಹೀಗಿರುವಾಗ ಇಶ್ರತ್‌ಗೆ ವೈದ್ಯಕೀಯ ಸಮಾಜ ಸೇವಕ ಸಂಘವಾದ “ವಾಲಂಟರಿ ಮೆಡಿಕೇರ್‌ ಸೊಸೈಟಿ’ ಬಗ್ಗೆ ತಿಳಿದುಬಂತು. ಅಂಗ ವೈಕಲ್ಯದಿಂದ ಬಳಲುವವರಿಗೆ ಈ ಸೊಸೈಟಿ ಆತ್ಮಸ್ಥೈರ್ಯ ತುಂಬಿ, ಕೌಶಲಾಭಿವೃದ್ಧಿ ಮಾಡಿಸುತ್ತಿದ್ದ ವಿಚಾರ ಗೊತ್ತಾಗಿದೆ. ಆ ಸೊಸೈಟಿ 2017ರಲ್ಲಿ ಬಾರಮುಲ್ಲಾದಲ್ಲಿ ಕ್ಯಾಂಪ್‌ ಒಂದನ್ನು ಹಾಕಿದ್ದು, ಅದರಲ್ಲಿ ಇಶ್ರತ್‌ ಭಾಗಿಯಾದರು. ಆಗ ಅವರ ಮಾನಸಿಕ ತೊಳಲಾಟಗಳ ಬಗ್ಗೆ ತಿಳಿದುಕೊಂಡ ಸೊಸೈಟಿಯ ವೈದ್ಯರು, ನೀವು ನಮ್ಮೊಂದಿಗೆ ಶ್ರೀನಗರದಲ್ಲಿ ಕೆಲವು ಕಾಲ ಬಂದಿರಿ ಎಂದು ಸೂಚಿಸಿದರು. ಅದರಂತೆ ಇಶ್ರತ್‌ ತನ್ನ ತಂದೆಯೊಂದಿಗೆ ಒಂದು ವರ್ಷದ ಕಾಲ ಶ್ರೀನಗರದಲ್ಲಿ ಈ ಎನ್‌ಜಿಒನೊಂದಿಗಿದ್ದರು. ಆ ಸಮಯದಲ್ಲಿ ಇಶ್ರತ್‌ರನ್ನು ವೈದ್ಯಕೀಯವಾಗಿ ಗಟ್ಟಿ ಮಾಡುವ ಜತೆಗೆ ಮಾನಸಿಕವಾಗಿಯೂ ಗಟ್ಟಿ ಮಾಡುವ ಕೆಲಸ ನಡೆಯಿತು.

Advertisement

ಒಂದು ವರ್ಷ ಎನ್ನುವಷ್ಟರಲ್ಲಿ ಇಶ್ರತ್‌ ತಾನು ಗಟ್ಟಿಯಾಗುವುದಷ್ಟೇ ಅಲ್ಲದೆ, ತನ್ನಂತಹ ಅನೇಕ ಅಂಗ ವಿಕಲರಿಗೆ ಧೈರ್ಯ ಹೇಳುವ ಕೆಲಸವನ್ನು ಆರಂಭಿಸಿದ್ದರು.

ಅದೊಂದು ದಿನ ಇಶ್ರತ್‌ ಅದೇ ಎನ್‌ಜಿಒದಲ್ಲಿ ಒಂದಿಷ್ಟು ಗಂಡು ಮಕ್ಕಳು ವೀಲ್‌ಚೇರ್‌ನಲ್ಲಿ ಕುಳಿತು ಕೊಂಡೇ ಬಾಸ್ಕೆಟ್‌ ಬಾಲ್‌ ಆಡುವುದನ್ನು ನೋಡಿದರು. ನೋಡಿದಾಕ್ಷಣ ಇಶ್ರತ್‌ಗೆ “ವ್ಹಾವ್‌’ ಎನಿಸಿದೆ. ಅವರ ಬಗ್ಗೆ ವಿಚಾರಿಸಿದಾಗ ತಿಳಿದುಬಂದದ್ದು ಅವರು ಜಮ್ಮು ಮತ್ತು ಕಾಶ್ಮೀರದ ವೀಲ್‌ಚೇರ್‌ ಬಾಸ್ಕೆಟ್‌ ಬಾಲ್‌ ತಂಡದವರು ಎಂದು. ತನಗೂ ಬಾಸ್ಕೆಟ್‌ ಬಾಲ್‌ ಆಡಬೇಕು ಅನಿಸಿದ ಹಿನ್ನೆಲೆ ಅವರು ಆ ವಿಚಾರವನ್ನು ಎನ್‌ಜಿಒ ಅಧಿಕಾರಿಗಳ ಬಳಿ ಹೇಳಿಕೊಂಡರು. ಅವರನ್ನು ಪ್ರೋತ್ಸಾಹಿಸಿದ ಎನ್‌ಜಿಒ ಪ್ರತಿನಿತ್ಯ ಗಂಡು ಮಕ್ಕಳ ತಂಡದೊಂದಿಗೇ ಇಶ್ರತ್‌ಗೆ ತರಬೇತಿ ಕೊಡಲಾರಂಭಿಸಿದರು. ಬಾಲ್ಕನಿ ಯಿಂದ ಬಿದ್ದು, ಪ್ರಪಂಚವೇ ಬೇಡ ಎನ್ನುವಷ್ಟರ ಮಟ್ಟಿಗೆ ತಲು ಪಿದ್ದ ಇಶ್ರತ್‌ ತನ್ನಲ್ಲೂ ಆಟವನ್ನು ಆಡುವಷ್ಟು ದೈಹಿಕ ಶಕ್ತಿ ಇದೆ ಎಂದು ಅರಿತುಕೊಳ್ಳುತ್ತಾ, ಇನ್ನಷ್ಟು ಮಾನಸಿಕ ಸ್ಥೈರ್ಯ ತೆಗೆದುಕೊಂಡರು.

2018ರಲ್ಲಿ ನಡೆದ ಮಹಿಳೆಯರ ವೀಲ್‌ಚೇರ್‌ ಬಾಸ್ಕೆಟ್‌ ಬಾಲ್‌ ಕ್ಯಾಂಪ್‌ನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದ ರ್ಶನ ಕೊಟ್ಟು ಬಂದಿದ್ದರು ಇಶ್ರತ್‌. ಅವರ ಆಟವನ್ನು ಗಮನಿಸಿದ ದಿಲ್ಲಿ ಮಹಿಳಾ ವೀಲ್‌ಚೇರ್‌ ಬಾಸ್ಕೆಟ್‌ಬಾಲ್‌ ಆಟಗಾರರ ತಂಡವು ಇಶ್ರತ್‌ ರನ್ನು ತಮ್ಮ ತಂಡಕ್ಕೆ ಸೇರಿಸಿ ಕೊಳ್ಳಲು ನಿರ್ಧರಿಸಿದ್ದವು. ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಚಾಂಪಿ ಯನ್‌ ಶಿಪ್‌ ಪಂದ್ಯಾವಳಿಯಲ್ಲಿ ಅವರಿಗೆ ಆಡುವುದಕ್ಕೆ ಅವಕಾಶ ಕೊಡುವುದಕ್ಕೂ ನಿರ್ಧರಿಸಲಾಯಿತು. ಆದರೆ ಆ ಸಮಯಕ್ಕೆ ಬಾರಮುಲ್ಲಾದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಗಳನ್ನು ಕಡಿತಗೊಳಿಸಲಾಗಿತ್ತು. ಆಯ್ಕೆಯ ವಿಚಾರವನ್ನು ಇಶ್ರತ್‌ಗೆ ತಲುಪಿಸಲು ಆಗಿರಲಿಲ್ಲ.

ಒಂದು ದಿನ ಇಶ್ರತ್‌ ಮನೆಯ ಬಾಗಿಲಿಗೆ ಪೊಲೀಸರು, ಭಾರತೀಯ ಸೇನೆಯ ಯೋಧರು ಆಕೆಯ ಬಾಸ್ಕೆಟ್‌ಬಾಲ್‌ ಕೋಚ್‌ನೊಂದಿಗೇ ಬಂದರು. “ಒಂದು ವೇಳೆ ನೀವು ಪಂದ್ಯಾವಳಿಯಲ್ಲಿ ಭಾಗವಹಿಸಲು ಬಯಸುವುದೇ ಹೌದಾದರೆ ಇನ್ನೊಂದು ದಿನದೊಳಗೆ ನೀವು ಚೆನ್ನೈಗೆ ತೆರಳಬೇಕು. ಅಲ್ಲಿ ರಾಷ್ಟ್ರೀಯ ತಂಡಕ್ಕೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗು ವುದು’ ಎಂದು ಅಧಿಕಾರಿಗಳು ಇಶ್ರತ್‌ಗೆ ತಿಳಿಸಿದ್ದಾರೆ.

ಬೇರೆ ಯೋಚನೆಯನ್ನೇನೂ ಮಾಡದ ಇಶ್ರತ್‌ ಅದೇ ಅಧಿಕಾರಿಗಳೊಂದಿಗೆ ಚೆನ್ನೈಗೆ ಹೊರಟರು. ಸೇನೆಯ 52ನೇ ಆರ್‌ಆರ್‌ ಬೆಟಾಲಿಯನ್‌ನ ಮೇಜರ್‌ ಚಂದನ್‌ ಸಿಂಗ್‌ ಚೌಹಾಣ್‌ ಅವರು, “ಇದು ನಿನಗೆ ನೀನು ಹಾಕಿಕೊಂಡ ಚೌಕಟ್ಟಿನಿಂದ ಹೊರಬರುವ ಸಮಯ. ದೇಶದಲ್ಲೇ ಸ್ಫೂರ್ತಿಯಾಗಿ ಮಿಂಚುವ ಸಮಯ’ ಎಂದು ಧೈರ್ಯ ತುಂಬಿದರು.

2019ರಲ್ಲಿ ಇಶ್ರತ್‌ ಅವರನ್ನು ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಫೆಡರೇಶನ್‌ ಅವರು ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಕ್ಯಾಂಪ್‌ಗೆ ಆಯ್ಕೆ ಮಾಡಿದರು. ಅದರಲ್ಲಿ ಇಶ್ರತ್‌ ಜಮ್ಮು ಮತ್ತು ಕಾಶ್ಮೀರವನ್ನೇ ಪ್ರತಿನಿಧಿಸಿ ಆಟವಾಡಿದರು. ಆಟ ನೋಡಿದ ಫೆಡರೇಶನ್‌ ಇಶ್ರತ್‌ಗೆ ಹೆಚ್ಚಿನ ತರಬೇತಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿತು. ಇಶ್ರತ್‌ ಆಟವಾಡಿದ್ದ ತಂಡವು ಪಂದ್ಯಾವಳಿಯ ಫೈನಲ್ಸ್‌ಗೆ ತಲುಪಿದೆ. ಇಶ್ರತ್‌ಗೆ 2019ರಲ್ಲಿ ಥೈಲ್ಯಾಂಡ್‌ನ‌ಲ್ಲಿ ನಡೆದ ಮಹಿಳೆಯರ ಅಂತಾರಾಷ್ಟ್ರೀಯ ವೀಲ್‌ಚೇರ್‌ಚಾಂಪಿ ಯನ್‌ ಶಿಪ್‌ನಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದಿತು. ಜಮ್ಮು ಮತ್ತು ಕಾಶ್ಮೀರದಿಂದ ಇಂಥದ್ದೊಂದು ಪಂದ್ಯಾವಳಿಯಲ್ಲಿ ಆಟವಾಡಿದ ಮೊಲದ ಮಹಿಳೆಯಾಗಿ ಇಶ್ರತ್‌ ಹೊರಹೊಮ್ಮಿದರು.

ನಾಲ್ಕು ವರ್ಷಗಳ ಕಾಲ ಬಾಸ್ಕೆಟ್‌ ಬಾಲ್‌ನಲ್ಲೇ ಜೀವನ ಕಳೆದ ಇಶ್ರತ್‌ ಇದೀಗ ಶಿಕ್ಷಣದತ್ತ ಮರಳಿದ್ದಾರೆ. 2021ರಲ್ಲಿ ಮತ್ತೆ ಶಿಕ್ಷಣ ಪುನರಾರಂಭಿಸಿದ ಅವರು ಇದೀಗ ಕಲಾ ವಿಚಾರದ ಕಲಿಕೆಯಲ್ಲಿದ್ದಾರೆ. ನೂರಾರು ಕಾರ್ಯ ಕ್ರಮಗಳಲ್ಲಿ ಇಶ್ರತ್‌ ಸ್ಫೂರ್ತಿದಾಯಕ ಉಪ ನ್ಯಾಸ ಗಳನ್ನು ಕೊಡುತ್ತಿದ್ದಾರೆ. ತಮ್ಮದೇ ಬದುಕಿನ ಕಥೆ ಗಳನ್ನು ಜನರಿಗೆ ಹೇಳಿ, “ಸಾಧನೆಗೆ ದೇಹ ಅಡೆತಡೆಯಲ್ಲ’ ಎಂದು ಮನವರಿಕೆ ಮಾಡಿಸುತ್ತಿದ್ದಾರೆ.

“ಆಡಿಕೊಂಡಿದ್ದ ನಾನು ಬಿದ್ದು ಬೆನ್ನು ಹುರಿ ಮುರಿ ದುಕೊಂಡ ತತ್‌ಕ್ಷಣ ಪ್ರಪಂಚ ನನ್ನ ನೋಡುವ ದೃಷ್ಟಿಯೇ ಬೇರೆ ಆಯಿತು. ಪಾಪ ಈ ಹುಡುಗಿ, ಆಟವಾಡುವ ವಯಸ್ಸಲ್ಲಿ ವೀಲ್‌ಚೇರ್‌ ಮೇಲೆ ಕುಳಿತಿದ್ದಾಳೆ ಎಂದು ಜನರು ಕನಿಕರ ತೋರಿ ಮಾತನಾಡುತ್ತಿದ್ದಾಗ ನನ್ನ ಕಣ್ಣಲ್ಲಿ ಗೊತ್ತಿಲ್ಲದೇ ಕಣ್ಣೀರು ಸುರಿದುಬಿಡುತ್ತಿತ್ತು. ಆದರೆ ಈಗ ಆ ಮಾತುಗಳು ನನ್ನ ಬಳಿ ಸುಳಿಯಲ್ಲ. ಅದೆಷ್ಟೋ ಜನರಿಗೆ ನಾನೀಗ ಆಶ್ಚರ್ಯದಾಯಕ ಚಿಹ್ನೆ. ಬದುಕೇ ಕಷ್ಟವೆನ್ನು ವಂತಹ ಪ್ರದೇಶ ದಲ್ಲಿ ಈ ಅಂಗವೈಕಲ್ಯವನ್ನು ಗೆದ್ದು, ಸಾಧನೆ ಮಾಡ ಬಹುದು ಎಂದು ಪ್ರತಿಯೊಬ್ಬರಿಗೂ ಹೇಳುತ್ತಿ ದ್ದೇನೆ. ನನ್ನ ಈ ಬದುಕಿನ ಸಾಧನೆಗೆ, ನಾನೀಗ ಇಷ್ಟು ಗಟ್ಟಿ ಯಾಗಿ ನಿಂತಿರುವುದಕ್ಕೆ ನನ್ನ ಪೋಷಕರು ಹಾಗೂ ಅಂದು ಧೈರ್ಯ ಹೇಳಿದ ಮೇಜರ್‌ ಚಂದನ್‌ ಸಿಂಗ್‌ ಅವರೂ ಕಾರಣ’ ಎನ್ನುತ್ತಾರೆ ಇಶ್ರತ್‌.

-ಮಂದಾರ ಸಾಗರ

Advertisement

Udayavani is now on Telegram. Click here to join our channel and stay updated with the latest news.

Next