ಚಿತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಅದರಲ್ಲೂ ಭರ್ಜರಿಯಾಗಿ ಬ್ಯಾಟ್ ಬೀಸಿದ ಯುವ ಆಟಗಾರ ಇಶಾನ್ ಕಿಶನ್ ದ್ವಿಶತಕ ಬಾರಿಸಿ ಮೆರೆದಾಡಿದರು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಭಾರತ ತಂಡದಲ್ಲಿ ಇಂದು ರೋಹಿತ್ ಬದಲಿಗೆ ಇಶಾನ್ ಕಿಶನ್ ಸ್ಥಾನ ಪಡೆದಿದ್ದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಇಶಾನ್ ಕಿಶನ್ ಭರ್ಜರಿಯಾಗಿ ಬ್ಯಾಟ್ ಬೀಸಿದರು.
ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ ಇಶಾನ್ 85 ಎಸೆತಗಳಲ್ಲಿ ತನ್ನ ಚೊಚ್ಚಲ ಶತಕ ಬಾರಿಸಿದರು. ಆದರೆ ನಂತರ ಮನಬಂದಂತೆ ಬ್ಯಾಟ್ ಬೀಸಿದ ಅವರು 126 ಎಸೆತದಲ್ಲಿ ದ್ವಿಶತಕದ ಗಡಿ ದಾಟಿದರು.
ಈ ಮೂಲಕ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವೀರೆಂದ್ರ ಸೆಹವಾಗ್, ಮಾರ್ಟಿನ್ ಗಪ್ಟಿಲ್, ಗೇಲ್ ಅವರ ದಾಖಲೆಯ ಸಾಲಿಗೆ ಸೇರಿದರು.
ಒಟ್ಟು 131 ಎಸೆತ ಎದುರಿಸಿದ ಇಶಾನ್ 10 ಸಿಕ್ಸರ್ ಮತ್ತು 24 ಬೌಂಡರಿ ನೆರವಿನಿಂದ 210 ರನ್ ಗೆ ಔಟಾದರು.
ಇದನ್ನೂ ಓದಿ:ಎಕ್ಸ್ ಕ್ಲ್ಯೂಸಿವ್: “ಕಾಂತಾರ -2” ಗೆ ದೈವ ಅನುಮತಿ ಕೊಟ್ಟದ್ದು ನಿಜವೇ?; ಸುದ್ದಿಯ ಸತ್ಯಾಸತ್ಯತೆ ಏನು?
ತಂಡದ ಮೊತ್ತ 15 ಆಗಿದ್ದಾಗಲೇ ಶಿಖರ್ ಧವನ್ ಔಟಾದರು. ಆದರೆ ಬಳಿಕ ಜೊತೆಯಾದ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ 250 ರನ್ ಗಳ ಜೊತೆಯಾಟವಾಡಿದರು.