ಅಹ್ಮದಾಬಾದ್: ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಅಂತಿಮ ಪಂದ್ಯಕ್ಕೆ ಅಹ್ಮದಾಬಾದ್ ಟ್ರ್ಯಾಕ್ ಬ್ಯಾಟಿಂಗ್‌ಗೆ ಸಹಕರಿಸುವ ಸೂಚನೆಯೊಂದು ಲಭಿಸಿದೆ. ಹಾಗೆಯೇ ಡ್ಯಾಶಿಂಗ್ ಬ್ಯಾಟರ್ ಕೂಡ ಆಗಿರುವ ಕೀಪರ್ ಇಶಾನ್ ಕಿಶನ್ ಅವರಿಗೆ ಬಾಗಿಲು ತೆರೆಯುವ ಸಾಧ್ಯತೆಯೂ ಗೋಚರಿಸಿದೆ.
ರಿಷಭ್ ಪಂತ್ ಸ್ಥಾನದಲ್ಲಿ ಕಾಣಿಸಿಕೊಂಡ ಶ್ರೀಕರ್ ಭರತ್ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರ ಸ್ಥಾನ ಉಳಿಯುವುದು ಅನುಮಾನ. ಈ ಸರಣಿಯ 5 ಇನಿಂಗ್ಸ್‌ಗಳಲ್ಲಿ ಭರತ್ ಗಳಿಸಿದ್ದು 8, 6, ಅಜೇಯ 23 ಹಾಗೂ 17 ರನ್ ಮಾತ್ರ. ಆದರೆ ಟರ್ನಿಂಗ್ ಟ್ರ್ಯಾಕ್‌ನಲ್ಲಿ ಇವರ ಕೀಪಿಂಗ್ ಉತ್ತಮ ಮಟ್ಟದಲ್ಲಿತ್ತು.
ಮಂಗಳವಾರದ ಅಭ್ಯಾಸದ ವೇಳೆ ಕೋಚ್ ರಾಹುಲ್ ದ್ರಾವಿಡ್ ಬಹಳಷ್ಟು ಸಮಯವನ್ನು ಇಶಾನ್ ಕಿಶನ್ ಜತೆ ಕಳೆದರು. ಆದರೆ ಭರತ್ ಅಭ್ಯಾಸದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದು ಇಶಾನ್ ಕಿಶನ್ ಸೇರ್ಪಡೆಯ ಸೂಚನೆ ಎಂದೇ ಭಾವಿಸಲಾಗಿದೆ.
ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಾಗ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಭಾರತದ ಫೈನಲ್ ಬಹುತೇಕ ಖಾತ್ರಿಯಾಗಿದ್ದು, ಓವಲ್ ಫೈನಲ್‌ನಲ್ಲಿ ಮತ್ತೆ ಆಸ್ಟ್ರೇಲಿಯ ಎದುರಾಗಲಿದೆ. ಅಲ್ಲಿ ಬಲವಾದ ದಾಳಿಯನ್ನು ಎದುರಿಸಿ ನಿಲ್ಲಬೇಕಿದೆ. ಆಸೀಸ್ ಎಸೆತಗಳನ್ನು ನಿಭಾಯಿಸಲು ಭರತ್‌ಗಿಂತ ಇಶಾನ್ ಕಿಶನ್ ಹೆಚ್ಚು ಅರ್ಹರು ಎಂಬುದೊಂದು ಲೆಕ್ಕಾಚಾರ. ಹೀಗಾಗಿ ಅಹ್ಮದಾಬಾದ್‌ನಲ್ಲಿ ಇಶಾನ್‌ಗೆ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಲಭಿಸಿದರೆ ಉತ್ತಮ ಎಂಬುದು ಆಡಳಿತ ಮಂಡಳಿಯ ಯೋಜನೆ.