Advertisement

ಬಜೆಟ್‌ನಲ್ಲಿ ಸೇರಲಿದೆಯಾ ಹಾವೇರಿ-ಶಿರಸಿ ರೈಲು ಮಾರ್ಗ

10:50 AM Jan 12, 2019 | |

ಶಿರಸಿ: ಅಂತರ್ಜಾಲದ ಮೂಲಕ ಕೇಂದ್ರ ಸರಕಾರವನ್ನು ತಲುಪುವಂತೆ ಆರಂಭಿಸಲಾದ ರೈಲ್ವೆ ಜಾಗೃತಿ, ಹಕ್ಕೊತ್ತಾಯ ಅಭಿಯಾನ ಕೇವಲ ಆರೇ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ನಾಗರಿಕರು ಸಹಿ ಮಾಡಿದ್ದಾರೆ.

Advertisement

ಅಂತರ್ಜಾಲದ ಮೂಲಕ ದಾಖಲೀಕರಣ ಗೊಳಿಸುವ ಹಕ್ಕೊತ್ತಾಯದ ಆರಂಭದ ಎರಡೇ ದಿನದಲ್ಲಿ ಎರಡು ಸಾವಿರ ದಾಟಿದ್ದರೆ, ಆರು ದಿನಕ್ಕೆ ಸಹಿ ಅಭಿಯಾನ ಐದು ಸಾವಿರ ದಾಟಿದೆ. ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಹೋರಾಟ, ಚಳವಳಿಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ.

ಉತ್ತರ ಕನ್ನಡದ ವ್ಯಾಪಾರಿ, ರಾಜಕೀಯ ಕೇಂದ್ರವೂ ಆದ ಶಿರಸಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಅಭಿವೃದ್ಧಿಗೆ ಹಾವೇರಿಯ ರೈಲ್ವೆಯನ್ನು ಶಿರಸಿ ತನಕ ಓಡಿಸಬೇಕು ಎಂಬ ಆಗ್ರಹದೊಂದಿಗೆ ರಾಜಕೀಯೇತರ ಕ್ರಿಯಾಶೀಲ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿತು. ಈ ಸಮಿತಿ ಕೇಂದ್ರ ಸರಕಾರದ ಅಂತರ್ಜಾಲ ವಿಭಾಗಕ್ಕೆ ಪ್ರಸ್ತಾಪಿತ ನೂತನ ರೈಲ್ವೆ ಯೋಜನೆಗೆ ಆಗ್ರಹಿಸಿತು. ಈ ಆಗ್ರಹದ ಜೊತೆಗೆ ನಾಗರಿಕರೂ ಒತ್ತಾಯ ಮಾಡುವಂತೆ ಮನವಿ ಮಾಡಿತು. ಅದರ ಪರಿಣಾಮ ಕೇಂದ್ರದ ಬಜೆಟ್ ಮೊದಲೇ ಐದು ಸಾವಿರಕ್ಕೂ ಅಧಿಕ ನಾಗರಿಕರು ತಮ್ಮದೂ ಪಿಟಿಶನ್‌ ದಾಖಲಿಸಿದ್ದಾರೆ. ಐನೂರಕ್ಕೂ ಅಧಿಕ ಜನರು ಬೆಂಬಲಿಸಿಯೂ ಬರೆದಿದ್ದಾರೆ.

ಏನಿದು ಅಭಿಯಾನ?: ಹಾವೇರಿಯಿಂದ ಶಿರಸಿಗೆ ಹಳಿಗಳನ್ನು ಜೋಡಿಸಿ ಇಂಜಿನ್‌ ಓಡಿಸಬೇಕು ಎಂಬುದು ಬಹು ಕಾಲದ ಬೇಡಿಕೆ. ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಅವುಗಳನ್ನು ಸಮಸ್ಯೆ ಮಾಡುತ್ತಿದ್ದರು.

ಆದರೆ, ಕಳೆದ ಹದಿನೈದು ದಿನಗಳ ಹಿಂದೆ ಡಾ| ಶಿವರಾಮ ಕೆವಿ, ವೈಶಾಲಿ ವಿ.ಪಿ. ಹೆಗಡೆ, ಎಂ.ಎಂ. ಭಟ್ಟ ಕಾರೇಕೊಪ್ಪ, ಅನಂತ ಪದ್ಮನಾಭ ಸೇರಿದಂತೆ ಹಲವು ಸಮಾನಾಕಸ್ತರು ಹೋರಾಟಕ್ಕೆ ರೂಪುರೇಶೆ ಸಿದ್ಧಗೊಳಿಸಿದರು. ಫೆಬ್ರುವರಿಯ 1, 2ರಂದು ಪ್ರಕಟವಾಗುವ ಬಜೆಟ್ ವೇಳೆ ಹಾವೇರಿ-ಶಿರಸಿ ಕೂಡ ಸೇರ್ಪಡೆ ಆಗಬೇಕು ಎಂಬ ಕಾರಣಕ್ಕೆ ಹೋರಾಟ ತೀವ್ರಗೊಳಿಸಿದ್ದರು.

Advertisement

ಅದರ ಪರಿಣಾಮದಲ್ಲಿ ಹಾವೇರಿ-ಶಿರಸಿ ಮಾರ್ಗ ಆಗಲೇಬೇಕು ಎಂದು ಆಗ್ರಹಿಸುವ ಅಂತರ್ಜಾಲ ಪಿಟಿಶನ್‌. ಡಾ| ಶಿವರಾಮ ಕೆ.ವಿ. ಪ್ರಥಮವಾಗಿ ದಾಖಲಿಸಿದ ಕೇಂದ್ರ ಸರಕಾರದ ಅಧಿಕೃತ ಜಾಲ ತಾಣದಲ್ಲಿ ಉತ್ತರ ಕನ್ನಡ, ಕರ್ನಾಟಕ, ಭಾರತ ಜನರು ಮಾತ್ರವಲ್ಲದೇ ಅಮೆರಿಕಾ, ಇಂಡೋನೆಶಿಯಾ, ಜಪಾನ ಸೇರಿದಂತೆ ವಿವಿಧಡೆಯ ನಾಗರಿಕರೂ ಆಗ್ರಹಿಸಿದ್ದಾರೆ. ಉತ್ತರ ಕನ್ನಡದ ಅಭಿವೃದ್ಧಿಗೆ, ಉತ್ತರ ಕನ್ನಡದ ಪ್ರವಾಸಿ ತಾಣಗಳಿಗೆ ಈ ಮಾರ್ಗ ಅನಿವಾರ್ಯ ಎಂದು ಒತ್ತಾಯಿಸಿದ್ದಾರೆ.

ಅನುಕೂಲತೆ ಏನು?: ಶಿರಸಿಯಿಂದ ಹಾವೇರಿಗೆ 75 ಕಿಮೀ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅರಣ್ಯ ನಾಶವಾಗುವ ಹಾಗೂ ಪ್ರತಿನಿತ್ಯ ಸಾವಿರಾರು ಜನರಿಗೆ ಅನುಕೂಲ ಆಗುವ ಮಾರ್ಗ. ಈ ಭಾಗದ ಜನರ ಹಣದ, ಸಮಯದ ಉಳಿತಾಯದ ಜೊತೆಗೆ ಇಲ್ಲಿನ ಕೃಷಿ ಉತ್ಪನ್ನಗಳನ್ನು ಅತ್ಯಂತ ಸುಲಭದಲ್ಲಿ ಮಾರುಕಟ್ಟೆಗೆ ತಲುಪಿಸಲೂ ಇದು ನೆರವಾಗಲಿದೆ.

ಗುಜರಾತ್‌, ಮಹಾರಾಷ್ಟ್ರ, ದೆಹಲಿ, ನಾಗಪುರ ಸೇರಿದಂತೆ ಇತರೆಡೆ ಅಡಿಕೆ, ಕಾಳು ಮೆಣಸು ಬೆಳೆಗಳನ್ನು ಒಯ್ಯಲು ರೈಲ್ವೆ ಸಹಕಾರಿ. ಇಲ್ಲಿರುವ ತೋಟಗಾರಿಕೆ, ಅರಣ್ಯ ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ, ಸ್ವರ್ಣವಲ್ಲೀ, ಜೈನ, ಸೋದೆಯಂತಹ ಮಠಗಳ ಶಿಷ್ಯರಿಗೆ, ಪ್ರವಾಸಿ ತಾಣಗಳ ಭೇಟಿಗೆ, ಎರಡು ವರ್ಷಕ್ಕೆ ನಡೆಯುವ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೂ ಈ ಮಾರ್ಗ ಅನುಕೂಲವೇ ಆಗಲಿದೆ.

ಎಲ್ಲೆಡೆ ಬೆಂಬಲ: ಕೇಂದ್ರ ರೈಲ್ವೆ ಬೋರ್ಡ್‌ನ ಸದಸ್ಯ ಪ್ರಹ್ಲಾದ ಜೋಶಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಉತ್ತರ ಕನ್ನಡ, ಹಾವೇರಿ ಭಾಗದ ಶಾಸಕರು, ಜನಪ್ರತಿನಿಧಿಗಳೂ ಬೆಂಬಲಿಸಿದ್ದಾರೆ. ಹಾನಗಲ್‌, ಅಕ್ಕಿ ಆಲೂರುಗಳಲ್ಲೂ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದು ತಮ್ಮ ಕಾರ್ಯಚಟುವಟಿಕೆ ಆರಂಭಿಸಿದೆ.

ಉಭಯ ಜಿಲ್ಲೆಗಳಲ್ಲಿ ಸಾಕಷ್ಟು ಜನರು ಹೋರಾಟ ಆರಂಭಿಸಿದ್ದು, ಕೇಂದ್ರ ಸರಕಾರಕ್ಕೂ ಈ ಮಾರ್ಗದ ಅಗತ್ಯತೆ ಮನಗಾಣಿಸುವ ಪ್ರಯತ್ನ ಮುಂದುವರಿದಿದೆ. ಈಗಾಗಲೇ ಇಂಟರನೆಟ್ ಬಳಸಿ ಪಿಟಿಶನ್‌ ದಾಖಲಿಸಿದ್ದನ್ನೂ ಮರಳಿ ಪ್ರಧಾನಿಗಳಿಗೆ, ರೈಲ್ವೆ ಸಚಿವರಿಗೆ, ರೈಲ್ವೆ ಮಂಡಳಿಗೆ ಕಳಿಸುತ್ತಿದ್ದಾರೆ. ಸಂಕ್ರಾಂತಿ ವೇಳೆಗೆ ಪ್ರಕಟನೆಗೆ ತೆರಳುವ ಬಜೆಟ್‌ನಲ್ಲಿ ಸೇರಿದರೆ ಶಿರಸಿಯ ಅಭಿವೃದ್ಧಿ ಪಥ ಬದಲಾಗಲಿದೆ ಎಂಬುದು ನಾಗರಿಕರ ನಿರೀಕ್ಷೆಯಾಗಿದೆ.

ಅಂತರ್ಜಾಲ ಬಳಸಿ ಆರಂಭಿಸಿದ ಅಭಿಯಾನ ದಾಖಲೆ ಸಂಖ್ಯೆಯಲ್ಲಿ ಬೇಡಿಕೆ ಈಡೇರಿಕೆಗೆ ಸಹಿ ಮಾಡಿದ್ದು ಅಚ್ಚರಿ ತಂದಿದೆ. ಜಿಲ್ಲೆಯ ಇತಿಹಾಸದಲ್ಲಿ ಇರುವ ಸೌಲಭ್ಯ ಬಳಸಿ ಸರಕಾರಕ್ಕೆ ತಿಳಿಸುವ ಪ್ರಯತ್ನ ಆಗಿದ್ದು ಇದೇ ಮೊದಲು. ಹಸಿರು ನಿಶಾನೆ ಸಿಗುವ ನಿರೀಕ್ಷೆಯಲ್ಲೇ ಕುಸುರಿ ಕೆಲಸವನ್ನೂ ಮಾಡುತ್ತಿದ್ದೇವೆ.
 •ಡಾ| ಶಿವರಾಮ ಕೆ.ವಿ.
 ಹೋರಾಟ ಸಮಿತಿ ಪ್ರಮುಖ

ಶಿರಸಿ ಮಾರ್ಗವಾಗಿ 50ಕ್ಕೂ ಅಧಿಕ ಖಾಸಗಿ ಬಸ್ಸುಗಳು ಬೆಂಗಳೂರು ಹೋಗುತ್ತೆ. ತಾಳಗುಪ್ಪ-ಶಿರಸಿ ಹಾಗೂ ಹಾವೇರಿ-ಶಿರಸಿ ಎರಡೂ ಮಾರ್ಗಗಳು ಬಹುಕಾಲದ ಬೇಡಿಕೆ. ಕೊನೇ ಪಕ್ಷ ಹಾವೇರಿ ಮಾರ್ಗವಾದರೂ ಆಗಬೇಕು. ಹಣ, ಸಮಯ ಎರಡೂ ಉಳಿಸಲು ಅಗತ್ಯ.
ಗಣೇಶ ಹೆಗಡೆ
 ರೈಲ್ವೆ ಪ್ರಯಾಣಿಕ

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next