Advertisement

28 ಕೋಟಿ ರೂ.ಗೆ ವಿಶ್ವನಾಥ್‌ ಸೇಲಾಗಿದ್ದಾರಾ?

12:12 AM Jul 20, 2019 | Lakshmi GovindaRaj |

ವಿಧಾನಸಭೆ: “ಜೆಡಿಎಸ್‌ನ ಎಚ್‌.ವಿಶ್ವನಾಥ್‌ ಅವರು ಎಷ್ಟು ಕೋಟಿಗೆ ಸೇಲಾಗಿದ್ದಾರೆ ಎಂಬುದನ್ನು ಈ ಸದನಕ್ಕೆ ಬಂದು ತಿಳಿಸಬೇಕು. ಬಿಜೆಪಿ ಜತೆ ವ್ಯವಹಾರ ಕುದುರಿಸಿದ್ದ ಬಗ್ಗೆ ನನ್ನ ಜತೆ ಅವರು ಹೇಳಿದ್ದಾರೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಬಾಂಬ್‌ ಸಿಡಿಸಿದ್ದಾರೆ.

Advertisement

ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡುತ್ತಿದ್ದಾಗ ಮಧ್ಯಪ್ರವೇಶ ಮಾಡಿದ ಅವರು, ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಅವರು ಒಬ್ಬ ಪತ್ರಕರ್ತರ ಮಧ್ಯಸ್ಥಿಕೆಯಲ್ಲಿ 28 ಕೋಟಿ ರೂ.ಗೆ ವ್ಯವಹಾರ ಕುದುರಿಸಿದ್ದಾರೆ ಎಂಬ ಮಾಹಿತಿಯಿದೆ. ಪತ್ರಕರ್ತರ ಗ್ಯಾಲರಿಯಲ್ಲಿ ವಿಶ್ವನಾಥ್‌ ಮುಂಬೈಗೆ ಹೋಗಲು ಮಧ್ಯಸ್ಥಿಕೆ ವಹಿಸಿದ ಪತ್ರಕರ್ತ ಇದ್ದಾರೆ. ಸಭಾಧ್ಯಕ್ಷರು ಅವಕಾಶ ಕೊಟ್ಟರೆ ಜಿ.ಟಿ.ದೇವೇಗೌಡರಿಗೆ ಆಪ್ತರಾದ ಆ ಪತ್ರಕರ್ತರ ಹೆಸರು ಹೇಳುತ್ತೇನೆ ಎಂದರು.

ಪುರಸಭೆ ಚುನಾವಣೆಯಲ್ಲಿ ವಿಶ್ವನಾಥ್‌ ಅವರು ಕೇಳಿದವರಿಗೆ ಆರು “ಬಿ’ ಫಾರಂ ಕೊಟ್ಟಿದ್ದೆ. ಆದರೂ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ವಿರುದ್ಧವೇ ಆರೋಪ ಮಾಡಿ ರಾಜೀನಾಮೆ ಕೊಟ್ಟಿದ್ದರು. ಆಗ ಅವರನ್ನು ನನ್ನ ತೋಟಕ್ಕೆ ಕರೆಸಿದ್ದೆ. ಮಂತ್ರಿಯಾಗುವ ಆಸೆಯಿದೆಯೇ ಎಂದು ಕೇಳಿದ್ದೆ. ಆಗ ಅವರು ಅಂತದ್ದೇನೂ ಇಲ್ಲ. ಚುನಾವಣೆಗೆ ಸಾಲ ಮಾಡಿಕೊಂಡಿದ್ದೇನೆ. 18 ಕೋಟಿ ರೂ.ಸಾಲ ಆಗಿದೆ. ಬಿಜೆಪಿಯವರು ಬರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ಆಗ, ನಾನು ವೈಯಕ್ತಿಕವಾಗಿ ಸಂಪಾದಿಸಿರುವ ಹಣವನ್ನು ಪ್ರತಿ ತಿಂಗಳು ಇಷ್ಟಿಷ್ಟು ಎಂದು ಕೊಡುತ್ತೇನೆ. ಸಾಲ ತೀರಿಸಿಕೊಳ್ಳಿ ಎಂದು ಹೇಳಿದ್ದೆ. ನಾನು ಅಮೆರಿಕದಲ್ಲಿ ಇದ್ದಾಗ ಅವರಿಗೆ ಕರೆ ಮಾಡಿ, ಕಂತು ಪ್ರಕಾರ ಹಣ ಕೊಡುತ್ತೇನೆ, ಯಾರಿಗೆ ಸಾಲ ಕೊಡಬೇಕು ಹೇಳಿ ಅವರಿಗೆ ತಲುಪಿಸುತ್ತೇನೆ ಎಂದರೂ ಆಗ ಅವರು ನಾನು ಬಂದು ಮಾತಾಡ್ತೀನಪ್ಪ ಎಂದು ಸುಮ್ಮನಾದರು. ಇದು ನನ್ನ ತಂದೆ, ತಾಯಿ, ಹೆಂಡತಿ ಮಕ್ಕಳಾಣೆ ನಿಜ. ಸುಳ್ಳಾದರೆ ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಸವಾಲು ಹಾಕಿದರು.

ನನ್ನ ಬಳಿ ಇರುವುದು ಪ್ರವಾಸೋದ್ಯಮ ಖಾತೆ. ಜೀವನದಲ್ಲಿ ಒಮ್ಮೆ ಸಚಿವನಾಗಬೇಕು ಎಂದುಕೊಂಡಿದ್ದೆ, ಆಗಿದ್ದೇನೆ. ನನ್ನದು ಗೈಡ್‌ ಇಲಾಖೆ. ನನಗೆ ಒಳ್ಳೆ ಖಾತೆ ಕೊಡಲು ರೇವಣ್ಣ ಅವರು ಬಿಡಲಿಲ್ಲ ಎಂದು ಸಾ.ರಾ.ಮಹೇಶ್‌ ಚಟಾಕಿ ಹಾರಿಸಿದರು.

Advertisement

ನನಗೂ ಆಫ‌ರ್‌ ಇತ್ತು: ಈ ಮಧ್ಯೆ, ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ, “ನನಗೂ ಹಿಂದೆ ಬಿಜೆಪಿಗೆ ಬರುವಂತೆ ಆಹ್ವಾನಿಸಿ ಐದು ಕೋಟಿ ರೂ.ಗಳನ್ನು ನನ್ನ ಮನೆಗೆ ತಂದು ಇಟ್ಟಿದ್ದರು. ಬಿಜೆಪಿ ಶಾಸಕರಾದ ಅಶ್ವಥ್‌ನಾರಾಯಣ, ವಿಶ್ವನಾಥ್‌, ಮಾಜಿ ಶಾಸಕ ಯೋಗೇಶ್ವರ್‌ ಅವರು ಹಣ ತಂದು ಇಟ್ಟಿದ್ದರು. ನಾನು ಅಂತಹ ವ್ಯಕ್ತಿಯಲ್ಲ ಎಂದು ವಾಪಸ್‌ ಕಳುಹಿಸಿದ್ದೆ.  ಈಗಲೂ ನನಗೆ ಆಫ‌ರ್‌ ಕೊಟ್ಟಿದ್ದರು. 30 ಕೋಟಿ ರೂ.ವರೆಗೂ ಕೊಡುವುದಾಗಿ ತಿಳಿಸಿದ್ದರು.

ರಾಜಕಾರಣ ಎಲ್ಲಿಗೆ ಬಂದು ನಿಂತಿದೆ. ಕೋಟಿ, ಕೋಟಿ ದುಡ್ಡು ಎಲ್ಲಿಂದ ಬರುತ್ತದೆ. ನಾವು ಇಂದು ಇರುತ್ತೇವೆ, ನಾಳೆ ಸಾಯುತ್ತೇವೆ. ಎಲ್ಲರೂ ಒಂದು ದಿನ ಹೋಗಲೇಬೇಕು. ಆದರೆ, ಹೀಗೆಲ್ಲಾ ಮಾಡಿ ಅಧಿಕಾರ ಹಿಡಿಯಬೇಕಾ?’ ಎಂದು ಪ್ರಶ್ನಿಸಿದರು. ಕೆ.ಶ್ರೀನಿವಾಸಗೌಡ ಹಾಗೂ ಸಾ.ರಾ.ಮಹೇಶ್‌ ಅವರು ಆರೋಪಿಸಿರುವ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಈ ವೇಳೆ ಒತ್ತಾಯಿಸಿದರು.

ನನ್ನ ತೇಜೋವಧೆ ಮಾಡಲಾಗಿದೆ – ರೂಪಕಲಾ: ಕಾಂಗ್ರೆಸ್‌ನ ರೂಪಕಲಾ ಶಶಿಧರ್‌ ಮಾತನಾಡಿ, ನಾವು ಹೊಸದಾಗಿ ಆಯ್ಕೆಯಾಗಿ ಈ ಸದನಕ್ಕೆ ಬಂದಿದ್ದೇವೆ. ಇಲ್ಲಿಗೆ ಬರಲು ನಾವೆಲ್ಲಾ ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ಗೊತ್ತಿದೆ. ಕಾಂಗ್ರೆಸ್‌ ಪಕ್ಷದ ಕೆಲವರು ಸ್ವಹಿತಾಸಕ್ತಿಯಿಂದ ಹೋಗಿರಬಹುದು. ಆದರೆ, ಪಕ್ಷ ಮುಖ್ಯ. ನಾನು ಹೋಟೆಲ್‌ ಹಾಗೂ ರೆಸಾರ್ಟ್‌ನಿಂದ ವೈಯಕ್ತಿಕ ಕಾರಣಗಳಿಗೆ ಹೊರಗೆ ಹೋದಾಗ “ಆಪರೇಷನ್‌ ಕಮಲ’ ಎಂದು ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿದರು.

ಸಾ.ರಾ.ಮಹೇಶ್‌ ಅವರು ಸದನದಲ್ಲಿ ಮಾಡಿರುವ ಆರೋಪ ಸುಳ್ಳು. ನಾನು ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಲೇ ಇಂತದ್ದೊಂದು ಆರೋಪ ಮಾಡಿದ್ದರು. ನನಗೆ ಚುನಾವಣೆಗೆ ಮಾಡಿರುವ ಸಾಲ ಇರಬಹುದು. ಆದರೆ, ಸಾಲಕ್ಕೋಸ್ಕರ ನನ್ನನ್ನು ನಾನು ಅಡಮಾನ ಇಟ್ಟುಕೊಳ್ಳುವವನಲ್ಲ. 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನದೇ ಆದ ಮೌಲ್ಯ, ತತ್ವ, ಸಿದ್ಧಾಂತ ಇಟ್ಟುಕೊಂಡಿದ್ದೇನೆ. ಸದನದಲ್ಲಿ ಇಂತದ್ದೊಂದು ಹೇಳಿಕೆ ನೀಡಲು ಅವಕಾಶ ಕೊಟ್ಟಿದ್ದು ಎಷ್ಟು ಸರಿ? ಸಾ.ರಾ.ಮಹೇಶ್‌ ಒಬ್ಬ ರಿಯಲ್‌ ಎಸ್ಟೇಟ್‌ ಮಾಡುವ ವ್ಯಕ್ತಿ.
-ಎಚ್‌.ವಿಶ್ವನಾಥ್‌

ಶ್ರೀನಿವಾಸಗೌಡರಿಗೆ ವಯಸ್ಸಾಗಿದೆ. ಅರುಳ್ಳೋ, ಮರುಳ್ಳೋ. ಅವರ ಆರೋಪದ ಬಗ್ಗೆ ಎಸಿಬಿಯಲ್ಲೂ ದೂರು ದಾಖಲಾಗಿತ್ತು. ನಾನು ಸುಳ್ಳು ಹೇಳಿದ್ದೇನೆ ಅಂತ ಹೇಳಿ ಕೇಸ್‌ ಕ್ಲೋಸ್‌ ಮಾಡಿಕೊಂಡು ಬಂದು ಇದೀಗ ಸದನದ ದಿಕ್ಕು ತಪ್ಪಿಸಲು ಈ ರೀತಿ ಮಾತನಾಡಿದ್ದಾರೆ. ಸಾ.ರಾ.ಮಹೇಶ್‌ ಹಾಗೂ ಶ್ರೀನಿವಾಸಗೌಡರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ.
-ಎಸ್‌.ಆರ್‌.ವಿಶ್ವನಾಥ್‌, ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next