ಮುಂಬಯಿ: ಬುಲೆಟ್ ರೈಲು ಯೋಜನೆ ಜನಸಾಮನ್ಯನ ಕನಸಲ್ಲ. ಅದು ಕೇವಲ ಪ್ರಧಾನಿ ಮೋದಿ ಅವರ ಕನಸು ಎಂದು ಆಡಳಿತಾರೂಢ ಎನ್‌ಡಿಎ ಮಿತ್ರಪಕ್ಷ ಶಿವಸೇನೆ ಟೀಕಿಸಿದೆ.ದೇಶಕ್ಕೆ ನಿಜವಾಗಿಯೂ ಉನ್ನತ ವೇಗದ ಅಹ್ಮದಾಬಾದ್-ಮುಂಬಯಿ ಬುಲೆಟ್ ರೈಲು ಯೋಜನೆಯ ಆವಶ್ಯಕತೆ ಇದೆಯಾ ? ಎಂದು ಪಕ್ಷವು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯ ಮೂಲಕ ತಿಳಿಯಬಯಸಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಈ ಟೀಕೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್‌ನ ಪ್ರಧಾನಮಂತ್ರಿ ಶಿಂಜೊ ಅಬೆ ಅವರು ಅಹ್ಮದಾಬಾದ್‌ನಲ್ಲಿ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಕೇಳಿಬಂದಿರುವುದಾಗಿದೆ.
ನಾವು ಕೇಳದೆಯೇ ನಮಗೆ ಬುಲೆಟ್ ರೈಲು ಸಿಗುತ್ತಿದೆ. ಆದರೆ ಈ ಯೋಜನೆಯಿಂದ ಯಾರ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಬಗ್ಗೆ ನಮಗೆ ಯಾರಿಗೂ ಗೊತ್ತಿಲ್ಲ ಎಂದು ಶಿವಸೇನೆಯು ಸಾಮ್ನಾ ಸಂಪಾದಕೀಯದಲ್ಲಿ ಹೇಳಿದೆ.
ದೇಶವು ತಾಂತ್ರಿಕ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಬೇಕೆಂಬ ಆಶಯದೊಂದಿಗೆ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರು ಭಾಕ್ರಾನಂಗಲ್‌ನಿಂದ ಹಿಡಿದು ಭಾಬಾ ಅಣು ಸಂಶೋಧನೆ ಕೇಂದ್ರದ ವರೆಗೆ ಹಲವು ಯೋಜನೆಗಳಿಗೆ ಶಿಲಾನ್ಯಾಸವನ್ನು ನೆರವೇರಿಸಿದ್ದರು. ದೇಶಕ್ಕೆ ಈ ಎಲ್ಲಾ ಯೋಜನೆಗಳ ಆವಶ್ಯಕತೆಯಿತ್ತು. ಬುಲೆಟ್ ರೈಲು ಇಂತಹ ರಾಷ್ಟ್ರೀಯ ಅಗತ್ಯತೆಗಳಲ್ಲಿ ಒಂದಾಗಿದೆಯೇ ? ಎಂದು ಶಿವಸೇನೆ ಕೇಳಿದೆ.
ಈ ಯೋಜನೆಗೆ ತಗಲಲಿರುವ 1,08,000 ಕೋ.ರೂ. ಅಂದಾಜು ವೆಚ್ಚದ ಪೈಕಿ ಕನಿಷ್ಠ 30,000 ಕೋ.ರೂ. ರಾಜ್ಯ ಸರಕಾರದ ಬೊಕ್ಕಸದಿಂದ ಹೋಗಲಿದೆ ಎಂದು ಪಕ್ಷವು ಸಂಪಾದಕೀಯದಲ್ಲಿ ನುಡಿದಿದೆ.
ರೈತರ ಸಾಲ ಮನ್ನಾಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಮಾಡಲಾಗುತ್ತಿದೆ. ಆದರೆ, ಬುಲೆಟ್ ರೈಲು ಬೇಕೆಂದು ಯಾರೂ ಬೇಡಿಕೆ ಮಾಡಿಲ್ಲ. ಮೋದಿ ಅವರ ಕನಸು ಜನಸಾಮಾನ್ಯರ ಕನಸು ಅಲ್ಲ. ಬದಲಿಗೆ, ಅದು ಶ್ರೀಮಂತರು ಮತ್ತು ಉದ್ಯೋಗ ಪತಿಗಳ ಕನಸಾಗಿದೆ ಎಂದು ಶಿವಸೇನೆ ಕಿಡಿಕಾರಿದೆ.
ಜಪಾನ್‌ನಿಂದ ತರಿಸಲಾಗುತ್ತಿದೆ
ಯಾರು ಬುಲೆಟ್ ರೈಲು ಯೋಜನೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳುತ್ತಿದ್ದರೋ, ಅವರ ಮಾತು ಸುಳ್ಳಾಗಿದೆ. ಯಾಕೆಂದರೆ, ಯಂತ್ರಗಳಿಂದ ಹಿಡಿದು ಕಾರ್ಮಿಕರ ತನಕ ಯೋಜನೆಗೆ ಆವಶ್ಯಕವಿರುವ ಎಲ್ಲ ವಸ್ತುಗಳನ್ನು ಜಪಾನ್‌ನಿಂದ ತರಿಸಲಾಗುತ್ತಿದೆ ಎಂದು ಪಕ್ಷವು ಸಂಪಾದಕೀಯದಲ್ಲಿ ಉಲ್ಲೇಖೀಸಿದೆ.